

ಕಾರ್ಗಲ್ (ಶಿವಮೊಗ್ಗ): ಪಟ್ಟಣದ ಜೋಗ ರಸ್ತೆಯ ತಳಕಳಲೆ ವೃತ್ತದಲ್ಲಿ ಹಿಂದುಗಳು ಪೂಜಿಸಿಕೊಂಡು ಬರುತ್ತಿರುವ ಭೂತಪ್ಪನ ಗುಡಿಗೆ ಮೊಹಿದ್ದೀನ್ ತವಕ್ಕಲ್ ಕುಟುಂಬ 25*35 ಅಡಿ ನಿವೇಶನ ದಾನ ಮಾಡುವ ಮೂಲಕ ಭಾವೈಕ್ಯತೆ ಮೆರೆದಿದೆ.
ತವಕ್ಕಲ್ ಕುಟುಂಬದ ಎರಡನೇ ತಲೆಮಾರಿನ ಹಸನ್ ಹಾಗೂ ಖಾದರ್ ಮತ್ತು ಮೂರನೇ ತಲೆಮಾರಿನ ಯುವಕರಾದ ಕರೀಂ, ರಫೀಕ್ ಅವರು ಬಸಪ್ಪನ ಮಗ ಉಮೇಶ್, ಲಕ್ಷ್ಮಣನ ಮಗ ಗೋವಿಂದ ಹಾಗೂ ರಾಮಣ್ಣನ ಮಗ ರವಿಚಂದ್ರ ಅವರ ಹೆಸರಿಗೆ ಮಾಡಿದ ದಾನಪತ್ರವನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ವಿ.ಸಂತೋಷ್ಕುಮಾರ್, ಎಚ್.ಎಸ್.ಸಾದಿಕ್ ಉಪಸ್ಥಿತರಿದ್ದರು. ಇದನ್ನೂ ಓದಿರಿ ‘ಬಿಜೆಪಿಯಲ್ಲಿ ಯಡಿಯೂರಪ್ಪಗೆ ಮತ್ತೊಬ್ಬ ಪ್ರತಿಸ್ಪರ್ಧಿಯೇ ಇಲ್ಲ’
5 ವರ್ಷಗಳ ಹಿಂದೆ ಮಳೆಗಾಳಿಗೆ ದೈವತ್ವದ ಸ್ವರೂಪ ಹೊಂದಿದ್ದ ಮರಗಳು ಬಿದ್ದು ಹೋದವು. ಕೆಲವು ಸಮಯ ಪೂಜಾ ವಿಧಿವಿಧಾನ ಸ್ಥಗಿತಗೊಂಡಿತ್ತು. ಇದನ್ನು ಗಮನಿಸಿದ ತವಕ್ಕಲ್ ಕುಟುಂಬಸ್ಥರು ತಮ್ಮ ಸ್ವಾಧೀನದಲ್ಲಿದ್ದ ಭೂತಪ್ಪ ದೇವಾಲಯವಿರುವ ಭೂಮಿಯನ್ನು ಪೂಜಾ ವಿಧಿವಿಧಾನ ಮತ್ತು ಆರಾಧನೆ ಮುಂದುವರಿಸಿಕೊಂಡು ಹೋಗುವ ಉದ್ದೇಶದಿಂದ ಮತ್ತು ಧಾಮಿರ್ಕ ಐಕ್ಯತೆ, ಸಮಾಜದಲ್ಲಿ ಭಾವೈಕತೆ ಮೂಡಿಸುವ ನಿಟ್ಟಿನಲ್ಲಿ ಭೂಮಿಯ ಹಕ್ಕನ್ನು ಈ ಮೂರು ಕುಟುಂಬಸ್ಥರಿಗೆ ಉಚಿತವಾಗಿ ದಾನಪತ್ರದ ಮೂಲಕ ಹಸ್ತಾಂತರಿಸಿದ್ದಾರೆ ಎಂದು ಮುಸ್ಲಿಂ ಸಮಾಜದ ಮುಖಂಡ ಎಚ್.ಎಸ್.ಸಾದಿಕ್ ತಿಳಿಸಿದರು.