ಮಗಳ ಪ್ರೇಮಿಯ ಬರ್ಬರ ಹತ್ಯೆ: ಅಪ್ಪ ಸೇರಿ ಮೂವರ ಬಂಧನ

Murder Supari
Published on

ಪುಣೆ: ಇಲ್ಲಿಯ ಪಾರ್ವತಿ ಪ್ರದೇಶದ ಶಾಹುವಸಂತ್‌ ಭಾಗದಲ್ಲಿ ನಡೆದ ಯುವಕನೊಬ್ಬನ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸಿದ್ಧ ಬಿಲ್ಡರ್‌ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಈ ಪ್ರಕರಣದ ಪ್ರಮುಖ ಆರೋಪಿ ಯಶ್ವಂತ್ ಕಾಂಬ್ಳೆ (50). ಈತನ 19 ವರ್ಷದ ಮಗಳು 21 ವರ್ಷದ ಜಂತಾ ವಾಸಾಹತ್ ನಿವಾಸಿ ಅಮಿತ್ ಮಿಲಿಂದ್ ಸರೋಡ್‌ನನ್ನು ಪ್ರೀತಿಸುತ್ತಿದ್ದಳು. ಇದಕ್ಕೆ ಕಾಂಬ್ಳೆಯ ವಿರೋಧವಿತ್ತು. ಆದೇಶ್ ನಾನಾವೆರೆ (24) ಎಂಬಾತ ಕಾಂಬ್ಳೆಯ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಅವನು ಯುವತಿಯನ್ನು ತನ್ನ ಸಹೋದರಿಯಂತೆ ಪ್ರೀತಿಸುತ್ತಿದ್ದು, ಅವನಿಗೂ ಈ ಪ್ರೇಮ ವ್ಯವಹಾರದ ಬಗ್ಗೆ ಅಸಮಾಧಾನ ಇತ್ತು.

ಆದರೆ ಯುವಕ ಮಾತ್ರ ಯುವತಿಯನ್ನು ಪ್ರೀತಿಸುವುದು ಮುಂದುವರೆದ ಹಿನ್ನೆಲೆಯಲ್ಲಿ ಆತನನ್ನು ಕೊಲೆ ಮಾಡುವ ಬಗ್ಗೆ ಯೋಚನೆ ಮಾಡಿದರು. ಬಾಂಬ್ಲಿಯಾ ಅಲಿಯಾಸ್ ಆಯುಷ್ ಕೇಲ್ (24) ಎಂಬ ಇನ್ನೋರ್ವ ಕ್ರಿಮಿನಲ್‌ ಜತೆಗೂಡಿ ಅಮಿತ್‌ ಮಿಲಿಂದ್‌ನ ಬರ್ಬರ ಹತ್ಯೆ ಮಾಡಲಾಗಿದೆ.

ಕೊಲೆ ಮಾಡಿದ ನಂತರ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಗ ಪೊಲೀಸರು ಬಂಧಿಸಿದ್ದಾರೆ. ಇವರ ವಿರುದ್ಧ ಈ ಹಿಂದೆ ಕೂಡ ಕೆಲವು ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಹೇಳಿದ್ದಾರೆ.

ಯುವಕನ ಕೊಲೆಗೆ ಸಂಬಂಧಿಸಿದಂತೆ ವಿವಿಧ ಸೆಕ್ಷನ್‌ ಅಡಿ ಕೇಸು ದಾಖಲು ಮಾಡಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net