ಬಂಗಾಳ : ವಿಪಕ್ಷ ನಾಯಕ ಸುವೇಂದು ಅಧಿಕಾರಿ ವಿರುದ್ಧ ಕೊಲೆ ಪ್ರಕರಣ

suvendu
Published on

ಕೊಲ್ಕತ : ಪಶ್ಚಿಮ ಬಂಗಾಳದಲ್ಲಿ, ಟಿಎಂಸಿ ತ್ಯಜಿಸಿ ಬಿಜೆಪಿ ಸೇರಿ, ಸಿಎಂ ಮಮತಾ ಬ್ಯಾನರ್ಜಿಯನ್ನು ಮಣಿಸಿ ವಿರೋಧ ಪಕ್ಷದ ನಾಯಕನ ಪಾತ್ರಕ್ಕೆ ಏರಿರುವ ಸುವೇಂದು ಅಧಿಕಾರಿ ಅವರ ಮೇಲೆ ಮತ್ತೊಂದು ಕ್ರಿಮಿನಲ್ ಪ್ರಕರಣ ದಾಖಲಾಗಿದೆ. 2018 ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನಲಾಗಿದ್ದ ಅಧಿಕಾರಿ ಅವರ ಆಗಿನ ಬಾಡಿಗಾರ್ಡ್​ನ ಸಾವಿನ ಬಗ್ಗೆ ಬಂಗಾಳ ಪೊಲೀಸರು ಇದೀಗ ಹೊಸದಾಗಿ ತನಿಖೆ ಆರಂಭಿಸಿದ್ದಾರೆ.

ಹಿಂದಿನ ಅವಧಿಯ ಟಿಎಂಸಿ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದ ಅಧಿಕಾರಿ ಅವರ ಆಗಿನ ಆಪ್ತರಕ್ಷಕರಾಗಿದ್ದ ಸುಬ್ರತ ಚಕ್ರಬೋರ್ತಿ, 2018 ರ ಅಕ್ಟೋಬರ್ 13 ರಂದು, ತಮ್ಮ ಮನೆಯಲ್ಲೇ ರಿವಾಲ್ವರ್​ನಿಂದ ಗುಂಡಿಕ್ಕಿಕೊಂಡು ಸಾವಪ್ಪಿದ್ದರು ಎನ್ನಲಾಗಿದೆ. ಮೃತ ಚಕ್ರಬೋರ್ತಿ ಅವರ ಪತ್ನಿ ಇದೀಗ ನೀಡಿರುವ ದೂರಿನ ಮೇಲೆ, ಕೊಲ್ಕತದ ಕಂಟಾಯ್ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್​. ದಾಖಲಿಸಲಾಗಿದೆ. ಐಪಿಸಿ ಸೆಕ್ಷನ್ 302 ಮತ್ತು 120ಬಿ ಅಡಿಯಲ್ಲಿ ಅಧಿಕಾರಿ ಅವರ ವಿರುದ್ಧ ಕೊಲೆ ಮತ್ತು ಸಂಚು ನಡೆಸಿದ ಆರೋಪ​ ದರ್ಜುಮಾಡಲಾಗಿದೆ ಎಂದು ಎಎನ್​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಒಂದು ಕಾಲದಲ್ಲಿ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರ ಆಪ್ತ ಅನುಯಾಯಿಯಾಗಿದ್ದ ಸುವೇಂದು ಅಧಿಕಾರಿ, 2020 ರ ಡಿಸೆಂಬರ್​ನಲ್ಲಿ ಬಿಜೆಪಿ ಸೇರಿ, ಈಗ ವಿಧಾನಸಭೆಯಲ್ಲಿ ವಿಪಕ್ಷ ನಾಯಕರಾಗಿದ್ದಾರೆ. ಕಳೆದ ತಿಂಗಳಲ್ಲಿ ಸುವೇಂದು ಅಧಿಕಾರಿ ಮತ್ತು ಅವರ ಸೋದರ ಸೌಮೇಂದು ಅಧಿಕಾರಿ ಅವರ ವಿರುದ್ಧ, ಟಿಎಂಸಿ ದೂರಿನ ಮೇಲೆ, ಕಾಂತಿ ಮುನಿಸಿಪಾಲಿಟಿ ಕಛೇರಿಯಿಂದ ಪರಿಹಾರ ಸಾಮಗ್ರಿಗಳನ್ನು ಕದ್ದ ಆರೋಪ ದಾಖಲಿಸಲಾಗಿತ್ತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net