

ಮುಂಬೈ: ಯುವತಿಯೊಬ್ಬಳ ಡಾನ್ಸ್ ವಿಡಿಯೋವನ್ನು ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ, ವೇಶ್ಯೆಯರ ಡಾನ್ಸ್ಗೆ ಹೋಲಿಕೆ ಅಪಹಾಸ್ಯ ಮಾಡಿದ್ದಲ್ಲದೆ, ಪೋಸ್ಟ್ ತೆಗೆದುಹಾಕುವಂತೆ ಪರಿಪರಿಯಾಗಿ ಬೇಡಿಕೊಂಡರು ಕ್ಯಾರೆ ಎನ್ನದೆ ಉದ್ಧಟತನ ಪ್ರದರ್ಶಿಸಿದ ಯುವಕನಿಗೆ ಪೊಲೀಸರು ಸರಿಯಾದ ಪಾಠ ಕಲಿಸಿದ್ದಾರೆ.
ಪ್ರತೀಕ್ ಆರ್ಯನ್ ಎಂಬಾತ ತನ್ನ ಎಕ್ಸ್ ಖಾತೆಯಲ್ಲಿ ಶ್ರುತಿ ಪಾರಿಜಾ ಎಂಬಾಕೆಯ ಡಾನ್ಸ್ ವಿಡಿಯೋ ಪೋಸ್ಟ್ ಮಾಡಿ, 'ಕೊತಾ' ಪರ್ಫಾರ್ಮೆನ್ಸ್ ಎಂದು ಹಿಂದಿಯಲ್ಲಿ ಬರೆದುಕೊಂಡಿದ್ದ. ಇದರರ್ಥ ವೇಶ್ಯೆಯರ ನೃತ್ಯ. ಈ ವಿಡಿಯೋ ಪಾರಿಜಾ ಗಮನಕ್ಕೆ ಬಂದ ಬಳಿಕ ಪೋಸ್ಟ್ ಡಿಲೀಟ್ ಮಾಡುವಂತೆ ಆಕೆ ಸಾಕಷ್ಟು ಮನವಿ ಮಾಡಿಕೊಂಡಿದ್ದಳು. ಆದರೆ ಆರ್ಯನ್ ಮಾತ್ರ ಆಕೆಯ ಮನವಿಯನ್ನು ತಿರಸ್ಕರಿಸುತ್ತಾ ಬಂದನು.
ಕಾಲೇಜ್ ಈವೆಂಟ್ ಒಂದರಲ್ಲಿ ಪಾರಿಜಾ ಡಾನ್ಸ್ ಮಾಡಿದ್ದ ವಿಡಿಯೋ ತುಣುಕನ್ನು ಆರ್ಯನ್ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ ಬಳಿಕ ಈ ವಿವಾದ ಹುಟ್ಟಿಕೊಂಡಿತು. ಭಾರತದ ಶಾಲೆ ಮತ್ತು ಕಾಲೇಜುಗಳಲ್ಲಿನ ಸಾಂಸ್ಕೃತಿಕ ಮಾನದಂಡಗಳ ಬಗ್ಗೆ ಮಾತನಾಡಿ, ವಿಡಿಯೋವನ್ನು ಆರ್ಯನ್ ಟೀಕಿಸಿದ್ದ.
ಈ ವಿಚಾರ ಪಾರಿಜಾ ಗಮನಕ್ಕೆ ಬಂದಾಗ ಆಕೆ ಸ್ಪಷ್ಟನೆ ಸಹ ನೀಡಿದಳು. ಪಾರಿಜಾ, ವೃತ್ತಿಯಲ್ಲಿ ನೃತ್ಯ ಸಂಯೋಜಕಿಯಾಗಿದ್ದು, ಡಾನ್ಸ್ ಶೋ ಜಡ್ಜ್ ಮಾಡಲು ಕಾಲೇಜು ಉತ್ಸವಕ್ಕೆ ಆಹ್ವಾನ ನೀಡಲಾಗಿತ್ತು. ಇದೇ ವೇಳೆ ಪಾರಿಜಾ ಅವರು ತಮ್ಮ ಡಾನ್ಸ್ ಪ್ರತಿಭೆಯನ್ನು ಪ್ರದರ್ಶನ ಮಾಡಿದ್ದರು. ಈ ವೇಳೆ ಸೆರೆಹಿಡಿದ ವಿಡಿಯೋವನ್ನು ಆರ್ಯನ್ ಪೋಸ್ಟ್ ಮಾಡಿದ್ದಾರೆ ಎಂದು ಪಾರಿಜಾ ಹೇಳಿಕೊಂಡಿದ್ದಾರೆ. ಅಲ್ಲದೆ, ನನ್ನ ಒಪ್ಪಿಗೆ ಇಲ್ಲದೆ ವಿಡಿಯೋ ಪೋಸ್ಟ್ ಮಾಡಲಾಗಿದ್ದು, ಗೌರವಕ್ಕೆ ಧಕ್ಕೆ ತರಲಾಗಿದೆ. ಸಾಕಷ್ಟು ಬೇಡಿಕೊಂಡರು ಪೋಸ್ಟ್ ತೆಗೆಯುತ್ತಿಲ್ಲ ಎಂದು ಆರ್ಯನ್ ಆರೋಪಿಸಿದರು. ಇದಕ್ಕೆ ಉತ್ತರ ನೀಡಿದ ಆರ್ಯನ್, ನನ್ನ ಅಭಿಪ್ರಾಯವು ಭಾರತೀಯ ಶಿಕ್ಷಣ ಸಂಸ್ಥೆಗಳನ್ನು ಗುರಿಯಾಗಿಸಿದೆ ಹೊರತು ವೈಯಕ್ತಿಕವಾಗಿ ಪಾರಿಜಾ ಅವರನ್ನಲ್ಲ ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡರು ಮತ್ತು ಪೋಸ್ಟ್ ಡಿಲೀಟ್ ಮಾಡಲು ನಿರಾಕರಿಸಿದರು. ಇಷ್ಟೇ ಅಲ್ಲದೆ, ನನಗೆ ಪಾರಿಜಾ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪ ಮಾಡಿದರು.
ಇದಾದ ಬಳಿಕ ಪಾರಿಜಾ, ಮುಂಬೈ ಪೊಲೀಸರ ಎಕ್ಸ್ ಖಾತೆಗೆ ಟ್ಯಾಗ್ ಮಾಡಿ, ವಿಡಿಯೋ ಡಿಲೀಟ್ ಮಾಡಲು ಸಾಕಷ್ಟು ಮನವಿ ಮಾಡಿದರೂ ಆರ್ಯನ್ ಮಾತ್ರ ಸಾರಾಸಗಟಾಗಿ ಮನವಿಯನ್ನು ತಿರಸ್ಕರಿಸುತ್ತಿದ್ದಾರೆ. ವಿಡಿಯೋದಿಂದ ನನ್ನ ಗೌರವಕ್ಕೆ ಧಕ್ಕೆ ಬಂದಿದೆ. ವಿಡಿಯೋ ಡಿಲೀಟ್ ಮಾಡದೇ ನನಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪ ಮಾಡಿದ್ದರು. ಬಳಿಕ ಪೊಲೀಸರು ಆಕೆಯ ಪೋಸ್ಟ್ಗೆ ಪ್ರತಿಕ್ರಿಯೆ ನೀಡಿ, ಫೋನ್ ನಂಬರ್ ಪಡೆದುಕೊಂಡು, ಆಕೆಯೊಂದಿಗೆ ಮಾತನಾಡಿ, ಮಾಹಿತಿ ಪಡೆದುಕೊಂಡಿದ್ದರು.
ಸಮಸ್ಯೆ ಪರಿಹಾರ ಆದ್ರೆ ವಿಡಿಯೋ ಇನ್ನೂ ಲಭ್ಯ
ಕಾಪಿರೈಟ್ ಹಕ್ಕು ಕಾರಣದಿಂದ ಆರ್ಯನ್ ಪೋಸ್ಟ್ ಕೊನೆಗೂ ಲಭ್ಯವಾಗುತ್ತಿಲ್ಲ. ಪೊಲೀಸರು ಮಧ್ಯಸ್ಥಿಕೆ ವಹಿಸಿ ಯುವಕನಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆಂದು ತಿಳಿದುಬಂದಿದೆ. ಆದರೆ, ವಿಡಿಯೋ ಇನ್ನೂ ಲಭ್ಯವಿರುವ ಬಗ್ಗೆ ಪಾರಿಜಾ ಅನುಮಾನ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)