ಡೆಲಿವರಿ ಬಾಯ್ ಮುಸ್ಲಿಂ ಎಂಬ ಕಾರಣಕ್ಕೆ ದಿನಸಿ ನಿರಾಕರಿಸಿದಾತನ ಬಂಧನ

delivery-boy a 23 APR 20
Published on

ಮುಂಬೈ: ಕರೊನಾ ಲಾಕ್​ಡೌನ್ ಚಾಲ್ತಿಯಲ್ಲಿದ್ದು ಡೋರ್​ ಡೆಲಿವರಿ ಮೂಲಕವೇ ಅಗತ್ಯ ವಸ್ತುಗಳು ಎಲ್ಲರ ಮನೆ ತಲುಪುತ್ತಿದೆ. ಕರೊನಾ ಜಾತಿ, ಸಮುದಾಯ, ಧರ್ಮಗಳನ್ನು ನೋಡಿ ಹರಡುವುದಿಲ್ಲ ಎಂಬ ಸ್ಪಷ್ಟತೆಯನ್ನು ನೀಡಿದ್ದಾಗ್ಯೂ, ಮುಂಬೈನ ನಿವಾಸಿಯೊಬ್ಬರು ಡೆಲಿವರಿ ಬಾಯ್ ಮುಸ್ಲಿಂ ಎಂಬ ಕಾರಣಕ್ಕೆ ದಿನಸಿ ಸ್ವೀಕರಿಸದ ಕಾರಣ ಅರೆಸ್ಟ್ ಆಗಿದ್ದಾರೆ.

ಡೆಲಿವರಿ ಬಾಯ್​ ಬರ್ಕತ್ ಪಟೇಲ್ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಆರೋಪ ಮಾಡಿದ್ದು, ಘಟನೆಗೆ ಸಂಬಂಧಿಸಿ ತಾನು ವಿವರಣೆ ನೀಡಿದ ವಿಡಿಯೋವನ್ನೂ ಅಪ್ಲೋಡ್ ಮಾಡಿಕೊಂಡಿದ್ದಾರೆ. ಇದು ವೈರಲ್ ಆದ ಕಾರಣ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ. ಗ್ರೋಫರ್ಸ್​ ಎಂಬ ಗ್ರೋಸರಿ ಸರ್ವೀಸ್​ ಕಂಪನಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿರುವ ಬರ್ಕತ್ ಪಟೇಲ್​(31) ಈ ವಿಡಿಯೋವನ್ನು ಚಿತ್ರೀಕರಿಸಿ, ಪೊಲೀಸರಿಗೆ ನೀಡಿದ್ದಾರೆ. ಅಲ್ಲದೆ, ಕಾಶ್ಮೀರಾ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮಂಗಳವಾರ ಬೆಳಗ್ಗೆ ಜಯಾ ಪಾರ್ಕ್​ನಲ್ಲಿರುವ ಸುಪ್ರಿಯಾ ಚತುರ್ವೇದಿ ಎಂಬುವವರ ಮನೆಗೆ ಡೆಲಿವರಿ ನೀಡಲು ಹೋಗಿದ್ದಾಗ, ಇನ್ನೇನು ಆಕೆ ಈ ಪಾರ್ಸೆಲ್​ ತೆಗೆದುಕೊಳ್ಳಬೇಕು ಎನ್ನುವ ಹೊತ್ತಿಗೆ ಅಲ್ಲಿಗೆ ಆಗಮಿಸಿದ ಆಕೆಯ ತಂದೆ ಗಜಾನನ ಚತುರ್ವೇದಿ ಆಕೆಯನ್ನು ತಡೆದಿದ್ದರು. ಯಾಕೆ ಎಂದು ಆಕೆ ಪ್ರಶ್ನಿಸಿದಾಗ ಗಜಾನನ ಅವರು, ಆತ ಮುಸ್ಲಿಂ. ಪಾರ್ಸೆಲ್ ತಗೋಬೇಡ ಎಂದಿದ್ದಾರೆ. ಹೀಗೆ ಹೇಳುತ್ತಿದ್ದಂತೆ ನಾನು ವಿಡಿಯೋ ಮಾಡಲಾರಂಭಿಸಿದೆ ಎಂದು ಬರ್ಕತ್​ ಪಟೇಲ್ ಪೊಲೀಸರಿಗೆ ತಿಳಿಸಿದ್ದಾನೆ.

ಈ ಸಂಬಂಧ ಪೊಲೀಸರು ವಿಚಾರಣೆ ಆರಂಭಿಸಿದ್ದು, ಮುಸ್ಲಿಂ ಡೆಲಿವರಿ ಬಾಯ್ ಯಾರು ಎಂಬುದನ್ನು ಪತ್ತೆ ಹಚ್ಚಲು ಪ್ರಯತ್ನಿಸಿದ್ದಾರೆ. ಅಲ್ಲದೆ ಜನಾಂಗೀಯ ನಿಂದನೆ ಕಾರಣಕ್ಕೆ ಗಜಾನನ ಚತುರ್ವೇದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net