ಮುಂಬೈನಿಂದ ಮಂಡ್ಯಕ್ಕೆ ತಂದ ಮೃತ ವ್ಯಕ್ತಿಗೆ ಸೋಂಕಿತ್ತೇ? ಜಿಲ್ಲಾಧಿಕಾರಿ ಹೇಳಿದ್ದೇನು?

Mandya
Published on

ಮಂಡ್ಯ: ನನ್ನ ತಂದೆ ಆಟೋ ಚಾಲಕ, ಸುಳ್ಳು ಪ್ರಮಾಣಪತ್ರ ಪಡೆದುಕೊಳ್ಳುವಷ್ಟು ಹಣವಾದರೂ ಎಲ್ಲಿರುತ್ತದೆ? ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿದ ನಂತರ, ಆಂಬುಲೆನ್ಸ್​ಗೆ ಔಷಧ ಸ್ಪ್ರೇ ಮಾಡಿ ಮೃತದೇಹವನ್ನು ಒಳಗೆ ಇರಿಸಿದ್ದಾರೆ. ನನ್ನ ತಾಯಿ, ತಂದೆ ದೇಹವನ್ನು ಅಪ್ಪಿಕೊಂಡು ಗೋಳಾಡಿದ್ದಾರೆ. ಅವರಿಗೆ ಯಾಕೆ ಬಂದಿಲ್ಲ..?

ಮುಂಬೈನಲ್ಲಿ ಹೃದಯಾಘಾತದಿಂದ ಮೃತಪಟ್ಟ ವ್ಯಕ್ತಿಯ ಪುತ್ರಿ, ಈಗ ಕರೊನಾ ಪಾಸಿಟಿವ್ ಕಂಡು ಮಿಮ್್ಸ ಐಸೋಲೇಷನ್ ವಾರ್ಡ್​ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೆ.ಆರ್. ಪೇಟೆ ತಾಲೂಕಿನ ರಾಜಘಟ್ಟದ ಮಹಿಳೆ ಪ್ರಶ್ನಿಸಿರುವ ಪರಿ ಇದು.

ಮೃತ ವ್ಯಕ್ತಿಗೆ ಸೋಂಕಿತ್ತು. ಪ್ರಭಾವ ಬಳಸಿ ನಕಲಿ ಪ್ರಮಾಣಪತ್ರ ಪಡೆದು ಮೃತದೇಹ ತರಲಾಗಿದೆಂಬ ಆರೋಪಗಳಿಗೆ ಆಕೆ ಸಂಬಂಧಿಕರ ಜತೆ ಮೊಬೈಲ್​ನಲ್ಲಿ ಮಾತನಾಡಿರುವ ಆಡಿಯೋ ವೈರಲ್ ಆಗಿದ್ದು, ‘ತಂದೆ ಏ.23ರ ಬೆಳಗ್ಗೆ 10ರಿಂದ 10.30ರ ನಡುವೆ ಮೃತಪಟ್ಟಿದ್ದರು. ಸಂಜೆವರೆಗೂ ಮೃತ ದೇಹ ನೀಡಿರಲಿಲ್ಲ. ಆ ವೇಳೆ ಕರೊನಾ ಪರೀಕ್ಷೆ ನಡೆಸಿದ್ದು ನೆಗೆಟಿವ್ ಬಂದ ಬಳಿಕ ನೀಡಿದ್ದಾರೆ. ಮೃತದೇಹವನ್ನು ಗ್ರಾಮಕ್ಕೆ ತಂದಾಗ ಕೇವಲ 4-5 ಜನ ಬಂದು ನೋಡಿದ್ದಾರೆ. ಅನಗತ್ಯವಾಗಿ ಆರೋಪ ಮಾಡುತ್ತಿದ್ದಾರೆ’ ಎಂದು ಅಳಲು ತೋಡಿಕೊಂಡಿದ್ದಾರೆ.

ಪತ್ನಿ ಸೇರಿ ಇತರರಿಗೆ ನೆಗೆಟಿವ್

ಮೃತ ಪತಿ ಜತೆಗೆ ಬಂದ ಪತ್ನಿ ಹಾಗೂ ಶವಸಂಸ್ಕಾರದಲ್ಲಿ ಪಾಲ್ಗೊಂಡಿದ್ದವರ ಪ್ರಥಮ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ ಎಲ್ಲರ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಮೊದಲ ದಿನವೇ ಮೃತನ ಪತ್ನಿಯ ರಕ್ತ, ಗಂಟಲು ದ್ರವವನ್ನು ಪರೀಕ್ಷೆಗೆ ಕಳಿಸಲಾಗಿತ್ತು. ಆಗ ನೆಗೆಟಿವ್ ಬಂದಿತ್ತು. ಮಕ್ಕಳಿಗೆ ಪಾಸಿಟಿವ್ ಬಂದ ಹಿನ್ನೆಲೆ ಮತ್ತೊಮ್ಮೆ ಪರೀಕ್ಷೆಗೆ ಕಳಿಸಿದ್ದು, ಈಗಲೂ ನೆಗೆಟಿವ್ ಬಂದಿದೆ ಎಂದು ಡಿಸಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದ್ದಾರೆ.

ದೇಹವನ್ನು ಎಂಬಾಲ್ಮಿಂಗ್ ಮಾಡಲಾಗಿತ್ತು

ಮೃತ ವ್ಯಕ್ತಿಗೆ ಕರೊನಾ ಸೋಂಕು ಇರಲಿಲ್ಲ ಎಂಬುದಕ್ಕೆ ದೇಹವನ್ನು ಎಂಬಾಲ್ಮಿಂಗ್ ಮಾಡಿರುವುದೇ ಸಾಕ್ಷಿ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ. ಹೃದಯಾಘಾತದಿಂದ ಮೃತಪಟ್ಟ ವ್ಯಕ್ತಿಯ ರಕ್ತ, ಗಂಟಲು ದ್ರವ ಪರೀಕ್ಷೆ ಮಾಡಿ ನೆಗೆಟಿವ್ ಬಂದ ನಂತರವೇ ಮೃತದೇಹ ಕೊಡಲು ಮುಂಬೈ ಆಸ್ಪತ್ರೆ, ನಗರಪಾಲಿಕೆ ನಿರ್ಧಾರ ಮಾಡಿವೆ. ಜತೆಗೆ ಎಂಬಾಲ್ಮಿಂಗ್ ಮಾಡಬೇಕಾದರೆ ಮ್ಯಾಜಿಸ್ಟ್ರೇಟ್, ಎಸಿ, ಪೊಲೀಸರ ಸಮ್ಮುಖದಲ್ಲಿ ಅರಿವಳಿಕೆ ತಜ್ಞರು ಮಾಡಬೇಕಿದೆ. ಕರೊನಾ ಪಾಸಿಟಿವ್ ಇದ್ದವರಿಗೆ ಎಂಬಾಲ್ಮಿಂಗ್ ಮಾಡುವುದು ಶಿಕ್ಷಾರ್ಹ ಅಪರಾಧ. ಆದ್ದರಿಂದ ಮೃತದೇಹದಲ್ಲಿ ಯಾವುದೇ ಸೋಂಕು ಇಲ್ಲದಿರುವುದು ಖಚಿತವಾಗಿದೆ ಎಂದವರು ಹೇಳಿದ್ದಾರೆ. ಮೃತ ವ್ಯಕ್ತಿಯ ಪುತ್ರ ಅಥವಾ ಪುತ್ರಿಗೆ ಮುಂಬೈನ ಬೇರೆ ಮೂಲದಿಂದ ಸೋಂಕು ಬಂದಿದೆ. ಅಂತ್ಯಕ್ರಿಯೆ ವೇಳೆ ಭಾವನಾತ್ಮಕವಾಗಿ ತಂದೆ ಮುದ್ದಾಡಿ ಗೋಳಾಡುವಾಗ ಸಂತೈಸುವುದು ಸಹಜ. ಆ ವೇಳೆ ಸೋಂಕು ಹರಡಿರುವ ಸಾಧ್ಯತೆಗಳಿವೆ. ಈ ಸೋಂಕಿನ ಮೂಲ ಪತ್ತೆ ಹಚ್ಚಲು ಮುಂಬೈ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ ಎಂದವರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net