

ರಾಮನಗರ: ಸದ್ದಿಲ್ಲದೇ ದಶಪಥ ಹೆದ್ದಾರಿಯಲ್ಲಿ ಟೋಲ್ ದರ ದುಬಾರಿಯಾಗಿರುವ ಹಿನ್ನಲೆಯಲ್ಲಿ ದಶಪಥ ಹೆದ್ದಾರಿಗೆ ಇಳಿಯಲು ವಾಹನ ಸವಾರರು ಹಿಂದೇಟು ಹಾಕಿದ್ದಾರೆ. ಅಲ್ಲದೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಸವಾರರು ಆಕ್ರೋಶ ಹೊರಹಾಕಿದ್ದಾರೆ.
ಇಂದು ಬೆಂಗಳೂರು-ಮೈಸೂರು ಟೋಲ್ ರಸ್ತೆಯಲ್ಲಿ ವಾಹನ ಸಂಚಾರ ವಿರಳವಾಗಿರುವುದು ಕಂಡುಬಂತು ಟೋಲ್ ರಸ್ತೆಯನ್ನು ಬಿಟ್ಟು ವಾಹನ ಸವಾರರು ಸರ್ವೀಸ್ ರಸ್ತೆಯ ಕಡೆ ಮುಖ ಮಾಡಿದ್ದಾರೆ. ಇದರಿಂದ ಅಲ್ಲಲ್ಲಿ ಟ್ರಾಫಿಕ್ ಜಾಮ್ ಬಿಸಿಯು ತಟ್ಟಿದೆ. ಇತ್ತ ವಾಹನಗಳ ಸಂಖ್ಯೆ ವಿರಳವಾಗಿ ಟೋಲ್ ರಸ್ತೆ ಬಿಕೋ ಎನ್ನುತ್ತಿದೆ.
ಟೋಲ್ ದರ ಏರಿಕೆ ಹಿನ್ನೆಲೆಯಲ್ಲಿ ಹೆದ್ದಾರಿ ಪ್ರಾಧಿಕಾರದ ನಿರ್ಧಾರಕ್ಕೆ ವಾಹನ ಸವಾರರು ಬೇಸರ ಹೊರಹಾಕಿದ್ದಾರೆ. ಇದೇ ಕಾರಣಕ್ಕೆ ಟೋಲ್ ಸಿಬ್ಬಂದಿ ಮತ್ತು ವಾಹನ ಸವಾರರ ನಡುವೆ ಕಣಿಮಿಣಿಕಿ ಟೋಲ್ ಪ್ಲಾಜ ಬಳಿ ವಾಗ್ವಾದವು ನಡೆಯಿತು. ಕನ್ನಡ ಬಾರದ ಅಧಿಕಾರಿಯನ್ನು ವಾಹನ ಸವಾರನೊಬ್ಬ ತರಾಟೆಗೆ ತೆಗೆದುಕೊಂಡರು. ಕನ್ನಡದಲ್ಲಿ ಮಾತನಾಡಿ ಸರಿಯಾಗಿ ಮಾಹಿತಿ ನೀಡುವಂತೆ ತಾಕೀತು ಮಾಡಿದರು. ಕನ್ನಡ ಬಾರದಿದ್ರೆ ಕನ್ನಡ ಬರುವವರನ್ನು ಕರೆದು ಮಾತನಾಡಿಸಿ ಎಂದು ಆಕ್ರೋಶ ಹೊರಹಾಕಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ದರ ಪರಿಷ್ಕರಿಸಿದೆ. ಜೂನ್ .1 ರಿಂದ ಅನ್ವಯವಾಗುವಂತೆ ಟೋಲ್ ದರವನ್ನು ಶೇ.22 ರಷ್ಟು ಹೆಚ್ಚಿಸಿದೆ. 30 ರೂಪಾಯಿಂದ 200 ರೂ. ವರೆಗೆ ಟೋಲ್ ದರ ಏರಿಕೆಯಾಗಿದೆ. ರಾಮನಗರ ಸಮೀಪದ ಶೇಷಗಿರಿ ಹಳ್ಳಿ ಮತ್ತು ಕಣಮಿಣಿಕೆ ಟೋಲ್ ಪ್ಲಾಜಾ ಬಳಿ ಪರಿಷ್ಕೃತ ದರದ ನಾಮಫಲಕವನ್ನು ಹೆದ್ದಾರಿ ಪ್ರಾಧಿಕಾರ ಈಗಾಗಲೇ ಅಳವಡಿಸಿದೆ.