ಸದ್ದಿಲ್ಲದೇ ಜನರ ಜೀವ ತೆಗೆಯುವ ಈ ರೋಗದ ಬಗ್ಗೆ ಎಚ್ಚರವಿರಲಿ! ಸಂಶೋಧನೆಯಲ್ಲಿ ಶಾಕಿಂಗ್​ ಸಂಗತಿ ಬಯಲು

Hypertension
Published on

ನವದೆಹಲಿ: ದೇಶದ ಲಕ್ಷಾಂತರ ಜನರ ಜೀವ ಯಾವುದೇ ಕ್ಷಣದಲ್ಲೂ ಅಪಾಯಕ್ಕೆ ಸಿಲುಕಬಹುದು ಎಂಬುದನ್ನು ನೀವು ನಂಬುವಿರಾ? ಅದರಲ್ಲಿ ಯಾವುದೇ ಸಂದೇಹವೇ ಇಲ್ಲ. ಏಕೆಂದರೆ, ಒಂದೇ ಒಂದು ರೋಗ ಮನುಷ್ಯನ ಜೀವನವನ್ನೇ ಕ್ಷಣಾರ್ಧದಲ್ಲಿ ಬದಲಿಸಬಲ್ಲದು. ಹೈಪರ್​ಟೆನ್ಶನ್​ ಅಥವಾ ಅಧಿಕ ರಕ್ತದೊತ್ತಡ ಎಂಬ ರೋಗ ಒಂದು ರೀತಿಯಲ್ಲಿ ಸೈಲೆಂಟ್​ ಕಿಲ್ಲರ್​. ಅಧಿಕ ರಕ್ತದೊತ್ತಡ ಹೊಂದಿರುವ ಅರ್ಧಕ್ಕಿಂತ ಹೆಚ್ಚು ಜನರು ಕಳೆದ 30 ವರ್ಷಗಳಲ್ಲಿ ಚಿಕಿತ್ಸೆಯನ್ನೇ ಪಡೆದಿಲ್ಲ ಎಂದು ಆಘಾತಕಾರಿ ಸಂಶೋಧನೆ ಬಹಿರಂಗಪಡಿಸಿದೆ. ಆದ್ದರಿಂದ ಈ ಸ್ಥಿತಿಯು ಯಾವುದೇ ಸಮಯದಲ್ಲಿ ಜೀವಕ್ಕೆ ಅಪಾಯಕಾರಿಯಾಗಬಹುದು ಎಂದು ಸಂಶೋಧಕರು ಎಚ್ಚರಿಸಿದ್ದಾರೆ.

ಪರಿಣಾಮ ತುಂಬಾ ಅಪಾಯಕಾರಿ

ಹೈಪರ್​ ಟೆನ್ಶನ್ ಎಂಬುದು​ ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಇದನ್ನು ಸುಲಭವಾಗಿ ಗುಣಪಡಿಸಬಹುದು. ಆದರೆ, ಸರಿಯಾದ ಸಮಯಕ್ಕೆ ಈ ರೋಗವನ್ನು ಗುರುತಿಸಿ, ನಿಯಂತ್ರಿಸಬೇಕು. ಇಲ್ಲದಿದ್ದರೆ, ಮುಂದಿನ ಪರಿಣಾಮ ತುಂಬಾ ಅಪಾಯಕಾರಿ ಆಗಿರುತ್ತದೆ. ಸ್ಟ್ರೋಕ್​ ಅಥವಾ ಪಾರ್ಶ್ವವಾಯು, ಹೃದಯ ಮತ್ತು ಕಿಡ್ನಿ ಸಮಸ್ಯೆಯಂತಹ ಗಂಭೀರ ರೋಗಗಳ ಉಲ್ಬಣಕ್ಕೆ ಇದು ಕಾರಣವಾಗಲಿದೆ.

ಚಿಕಿತ್ಸೆಯನ್ನೇ ಪಡೆಯುತ್ತಿಲ್ಲ

ಕಳೆದ ಹತ್ತು ವರ್ಷಗಳಲ್ಲಿ 184 ದೇಶಗಳಲ್ಲಿ 10 ಮಿಲಿಯನ್​ಗೂ ಅಧಿಕ ಮಂದಿಯ ಮೇಲೆ ನಡೆದ ಸಂಶೋಧನೆಯ ಪ್ರಕಾರ ಅಧಿಕ ರಕ್ತದೊತ್ತಡ ಹೊಂದಿರುವ ಅರ್ಧದಷ್ಟು ಮಂದಿಗೆ ತಮ್ಮ ಸ್ಥಿತಿಯ ಬಗ್ಗೆ ತಿಳಿದಿರುವುದೇ ಇಲ್ಲ ಎಂದು ಕಂಡುಬಂದಿದೆ. ಇನ್ನು ಅರ್ಧಕ್ಕಿಂತ ಹೆಚ್ಚು ಪುರುಷರು ಮತ್ತು ಮಹಿಳೆಯರು ತಮ್ಮ ಸ್ಥಿತಿಯ ಬಗ್ಗೆ ತಿಳಿದಿದ್ದರೂ ಕೂಡ ಚಿಕಿತ್ಸೆಯನ್ನೇ ಪಡೆಯುತ್ತಿಲ್ಲ ಎಂದು ಸಂಶೋಧನೆ ತಿಳಿಸಿದೆ.

ಅಧಿಕ ರಕ್ತದೊತ್ತಡ ಹೊಂದಿರುವ ಹೆಚ್ಚಿನ ಜನರು ಚಿಕಿತ್ಸೆ ಪಡೆಯುವುದಿಲ್ಲ. ಹೆಚ್ಚು ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಅಧಿಕ ರಕ್ತದೊತ್ತಡದ ಅರಿವು ಮತ್ತು ಸಮಯೋಚಿತ ಚಿಕಿತ್ಸೆಯು ಹೆಚ್ಚಾಗಿದೆ ಎಂದು ಅಧ್ಯಯನವು ಬಹಿರಂಗಪಡಿಸಿದೆ. ಅಧಿಕ ರಕ್ತದೊತ್ತಡವನ್ನು ತಡೆಗಟ್ಟುವುದು, ಗುರುತಿಸುವುದು ಮತ್ತು ಚಿಕಿತ್ಸೆ ನೀಡುವುದು ಎಲ್ಲ ದೇಶಗಳಲ್ಲಿನ ಜನರಿಗೆ ಸಾಧ್ಯ ಮತ್ತು ಸುಲಭ ಎಂದು ಸಂಶೋಧನೆ ಹೇಳುತ್ತದೆ.

ಸಾಮಾನ್ಯ ಲಕ್ಷಣಗಳೇನು?

ಅಧಿಕ ರಕ್ತದೊತ್ತಡ ಹೊಂದಿರುವ ಜನರು ಹೃದಯ ಮತ್ತು ಆರ್ಟರೀಸ್​ (ಅಪಧಮನಿಗಳ) ಮೇಲೆ ಒತ್ತಡವನ್ನು ಹೆಚ್ಚಿಸುತ್ತಾರೆ. ಇದು ಹೃದಯಾಘಾತಕ್ಕೆ ಕಾರಣವಾಗುತ್ತದೆ. ಅಧಿಕ ರಕ್ತದೊತ್ತಡದ ಸಾಮಾನ್ಯ ಲಕ್ಷಣಗಳೆಂದರೆ ತೀವ್ರ ತಲೆನೋವು, ಅತಿಯಾದ ಆಯಾಸ, ಕಣ್ಣಿನ ಆಯಾಸ ಮತ್ತು ಎದೆ ನೋವು. ಉಸಿರಾಟದ ತೊಂದರೆ, ಅನಿಯಮಿತ ಹೃದಯ ಬಡಿತ, ಮೂತ್ರದಲ್ಲಿ ರಕ್ತ ಮತ್ತು ಎದೆ, ಗಂಟಲು ಅಥವಾ ಕಿವಿಗಳಲ್ಲಿ ನೋವನ್ನು ಅನುಭವಿಸಬಹುದು. ಈ ಯಾವುದೇ ರೋಗಲಕ್ಷಣಗಳನ್ನು ನೀವು ಅನುಭವಿಸಿದರೆ, ಅವುಗಳನ್ನು ನಿರ್ಲಕ್ಷಿಸುವ ಬದಲು ತಕ್ಷಣ ವೈದ್ಯರನ್ನು ಸಂಪರ್ಕಿಸಿ ಎಂದು ತಜ್ಞರ ಸಲಹೆ ಆಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net