

ಬಾಗಲಕೋಟೆ: ತಾಯಿಯೊಬ್ಬಳು ತನ್ನ ನವಜಾತ ಶಿಶುವನ್ನು ಹೊಲದಲ್ಲಿ ಎಸೆದು ಪರಾರಿ ಆಗಲೆತ್ನಿಸಿದ ಪ್ರಕರಣ ನಡೆದಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಇಂಥದ್ದೊಂದು ಘಟನೆ ನಡೆದಿದ್ದು, ಈಕೆಗೆ ಸಹೋದರನೇ ಸಾಥ್ ನೀಡಿದ್ದ.
ಬಾಗಲಕೋಟೆ ತಾಲೂಕಿನ ಬೆನಕಟ್ಟಿ ಗ್ರಾಮದ ಹೊಲದಲ್ಲಿ ಈ ಘಟನೆ ನಡೆದಿದೆ. ಸಂಗೊಂದಿ ಗ್ರಾಮದ ಬಾಣಂತಿಯೊಬ್ಬಳು ಇಲ್ಲಿನ ಹೊಲದಲ್ಲಿ ನವಜಾತ ಶಿಶುವನ್ನು ಎಸೆದಿದ್ದಳು. ಈ ಸಂದರ್ಭದಲ್ಲಿ ಈಕೆಯ ಸಹೋದರ ಜತೆಗಿದ್ದ. ಆದರೆ ಬಳಿಕ ಇಬ್ಬರೂ ಅಲ್ಲಿಂದ ಪರಾರಿಯಾಗುತ್ತಿದ್ದ ಸಂದರ್ಭದಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದವರು ಇವರನ್ನು ಅಡ್ಡಗಟ್ಟಿ ಪ್ರಶ್ನೆ ಮಾಡಿದ್ದಾರೆ.
ದಾರಿ ಮಧ್ಯೆ ಹೆರಿಗೆಯಾಗಿದ್ದು, ಶಿಶುವನ್ನು ಹೊಲದಲ್ಲಿ ಬಿಸಾಕಿ ಹೊರಟಿದ್ದ ಇವರನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲದೆ ಬಾಣಂತಿ ಹಾಗೂ ಆಕೆಯ ಸಹೋದರನಿಗೆ ಕಪಾಳಮೋಕ್ಷ ಮೋಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಮಾಹಿತಿ ನೀಡಿದ್ದರು.
ಬಾಣಂತಿ ಹಾಗೂ ನವಜಾತ ಗಂಡು ಶಿಶುವನ್ನು ರಕ್ಷಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು, 108 ಆ್ಯಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ಕರೆದೊಯ್ದು ಇಬ್ಬರನ್ನೂ ದಾಖಲಿಸಿದ್ದಾರೆ. ಶಿಶುವನ್ನು ಎನ್ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.