

ಲಂಡನ್: ಉರಿಯೂತದ ರೋಗದ ವಿರುದ್ಧ ಹೋರಾಡುತ್ತಿರುವ ಮಗಳ ಫೋಟೋವನ್ನು ಬಿಡುಗಡೆ ಮಾಡಿರುವ ತಾಯಿಯೊಬ್ಬಳು ಕರೊನಾ ವೈರಸ್ನಿಂದಲೇ ತನ್ನ ಮಗಳಿಗೆ ಹೀಗಾಗಿರಬಹುದು ಎಂದು ನಂಬಿದ್ದಾಳೆ.
ಗ್ರೇಸ್ ಹೆವೆನ್ಸ್ (13) ಉರಿಯೂತದಿಂದ ಬಳಲುತ್ತಿರುವ ಬಾಲಕಿ. ಇಂಗ್ಲೆಂಡ್ನ ನಾನ್ ಮೆಟ್ರೋಪಾಲಿಟನ್ ಕೌಂಟಿ ಗ್ಲೌಸೆಸ್ಟರ್‌ಶೈರ್ ನಿವಾಸಿಯಾಗಿರುವ ಹೆವೆನ್ಸ್, ನೋವುಂಟು ಮಾಡುವ ಹಾಗೂ ಅಂಗಾಂಗಳಲ್ಲಿ ಉರಿಯೂತ ಎನಿಸುವ ಕೆಂಪುಗುಳ್ಳೆಗಳನ್ನು ಹೊಂದಿದ ಕಾಯಿಲೆಯಿಂದ ಬಳಲುತ್ತಿದ್ದಳು. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖಳಾಗುತ್ತಿದ್ದಾಳೆ.
ಹೆವೆನ್ಸ್ ಅನ್ನು ಪರಿಶೀಲಿಸಿದ ನಂತರ ಆಕೆಗೆ ಹೆನೊಚ್-ಷಾನ್ಲೀನ್ ಪರ್ಪುರಾ (ಎಚ್‌ಎಸ್‌ಪಿ) ರೋಗ ನಿರ್ಣಯಿಸಲಾಗಿದ್ದು, ಇದು ಕವಾಸಕಿ ಕಾಯಿಲೆಯನ್ನು ಹೋಲುವ ಗುಣಲಕ್ಷಣಗಳನ್ನು ಹೊಂದಿದೆ ಎಂದು ತಿಳಿದುಬಂದಿದೆ.
ಬಾಲ್ಯದ ಉರಿಯೂತದ ಲಕ್ಷಣಗಳು ಆರಂಭಿಕ ಕಾಯಿಲೆಯಿಂದ ಪ್ರಚೋದಿಸಲ್ಪಟ್ಟ ದ್ವಿತೀಯ ಸ್ಥಿತಿಯಾಗಿದ್ದು, ಏಪ್ರಿಲ್‌ನಿಂದ ಇಂಗ್ಲೆಂಡಿನಾದ್ಯಂತ ಈ ರೀತಿಯ 100 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದೆ. ಇದರ ನಡುವೆ ಇದು ಕರೊನಾ ವೈರಸ್‌ಗೆ ಸಂಬಂಧಿಸಿದೆ ಎಂಬ ಆತಂಕವೂ ಮನೆ ಮಾಡಿದೆ.
ಇನ್ನು ಹೆವೆನ್ಸ್ ತಾಯಿ ರಾಚೆಲ್ ಹೆವೆನ್ಸ್ (47) ವೃತ್ತಿಯಲ್ಲಿ ಇವೆಂಟ್ ಪ್ಲಾನರ್ ಆಗಿದ್ದು, ಕರೊನಾದಿಂದಲೇ ತನ್ನ ಮಗಳಿಗೆ ಎಚ್‌ಎಸ್‌ಪಿ ರೋಗ ಲಕ್ಷಣ ಬಂದಿದೆ ಎಂದು ನಂಬಿದ್ದಾರೆ. ರಾಚೆಲ್ ಪತಿ ಜಸ್ಟಿನ್ ಹೆವೆನ್ಸ್ (52) ಮಾನಸಿಕ ಚಿಕಿತ್ಸಕರಾಗಿದ್ದು, ಕರೊನಾದಿಂದಲೇ ತಮ್ಮ ಮಗಳಿಗೆ ಈ ರೀತಿಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಆ್ಯಂಡಿಬಾಡಿ ಪರೀಕ್ಷೆಗೆ ಎದುರು ನೋಡುತ್ತಿದ್ದಾರೆ.
ರೋಗ ಕಾಣಿಸಿಕೊಂಡಿದ್ದು ಹೇಗೆ?
ತುಂಬಾ ಉತ್ಸಾಹಿಯಾಗಿದ್ದ ಗ್ರೇಸ್ ಹೆವೆನ್ಸ್ ಫೆ.28ರಂದು ಶಾಲೆಯಿಂದ ಮನೆಗೆ ಮರಳಿದಾಗ ಹೊಟ್ಟೆ ನೋವಾಗುತ್ತಿರುವ ಹಾಗೂ ಉರಿ ಅನುಭವದ ಬಗ್ಗೆ ಹೇಳಿಕೊಂಡಿದ್ದಳು. ಬಳಿಕ ಎರಡು ಬಾರಿ ಆಸ್ಪತ್ರೆಗೆ ತೋರಿಸಿದಾಗ ಅಪೆಂಡಿಕ್ಸ್ ಆಗಿಬಹುದೆಂದು ಶಂಕಿಸಿ ಗ್ಲೌಸೆಸ್ಟರ್ಶೈರ್ನಲ್ಲಿನ ರಾಯಲ್ ಹಾಸ್ಪಿಟಲ್ ಚಿಲ್ಡ್ರನ್ ಸೆಂಟರ್ಗೆ ಸೇರಿಸಲಾಗಿತ್ತು.
ಈ ವೇಳೆ ಯಾವುದೇ ಲಕ್ಷಣಗಳು ಗೋಚವಾಗದಿದ್ದಾಗ ಮನೆಗೆ ವಾಪಸ್ ಕಳುಹಿಸಲಾಗಿತ್ತು. ನಂತರ ಮೈಮೇಲೆ ಗುಳ್ಳೆಗಳು ಮೂಡಲು ಆರಂಭಿಸಿದ ಬೆನ್ನಲ್ಲೇ ಮಾರ್ಚ್ 5 ರಂದು ನಾಲ್ಕು ವಾರಗಳ ಕಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಆಕೆಯ ಕಿಡ್ನಿಯಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೋನ್ ಸೋರಿಕೆಯಾಗುತ್ತಿರುವುದನ್ನು ಕಂಡು ಚಿಕಿತ್ಸೆ ನೀಡಲಾಗಿದ್ದು, ಸದ್ಯ ಡಿಸ್ಚಾರ್ಜ್ ಆಗಿರುವ ಹೆವೆನ್ಸ್ ಮನೆಯಲ್ಲೇ ಚೇತರಿಸಿಕೊಳ್ಳುತ್ತಿದ್ದಾಳೆ. ಅಂದಹಾಗೆ ಕರೊನಾ ಸೋಂಕಿಗೆ ಒಳಗಾದರೆ ಕಿಡ್ನಿ ತೊಂದರೆ ಲಕ್ಷಣಗಳು ಸಹ ಕಾಣಿಸಿಕೊಳ್ಳುತ್ತದೆ. (ಏಜೆನ್ಸೀಸ್)