

ನವದೆಹಲಿ: ಸದ್ಯ ಜನ ಸಾಮಾನ್ಯರನ್ನು ಕಾಡುತ್ತಿರುವ ಪ್ರಶ್ನೆ ಎಂದರೆ, ಕರೊನಾ ಸೋಂಕಿತರ ಸಂಖ್ಯೆ 500 ಇಲ್ಲದಿದ್ದಾಗ ಇಡೀ ದೇಶವನ್ನೇ ಸಂಪೂರ್ಣ ಬಂದ್ ಮಾಡಲಾಗಿತ್ತು. ಈಗ ಒಂದು ಲಕ್ಷ ದಾಟಿದೆ, ಪ್ರತಿದಿನ ಸರಾಸರಿ ಐದು ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿವೆ. ಹೀಗಿರುವಾಗ ಬಸ್, ರೈಲು ಸಂಚಾರ, ವಿಮಾನ ಹಾರಾಟಕ್ಕೆ ಅವಕಾಶ ಕಲ್ಪಿಸುತ್ತಿರುವುದೇಕೆ? ಸಾರ್ವಜನಿಕರನ್ನು ಮುಕ್ತವಾಗಿ ಓಡಾಡೋಕೇ ಬಿಟ್ಟಿರೋದೇಕೆ?
ಹೌದು.... ವಿಶ್ವ ಅರೋಗ್ಯ ಸಂಸ್ಥೆಯ ನಿರ್ದೇಶನಗಳನ್ನು ಪಾಲಿಸಿದ್ದೇ ಆದಲ್ಲಿ ಪ್ರಸ್ತುತ ಏಳು ರಾಜ್ಯಗಳನ್ನಾದರೂ ಸಂಪೂರ್ಣ ಬಂದ್ ಮಾಡಬೇಕಾಗುತ್ತದೆ. ಸೋಂಕಿತರ ಪ್ರಮಾಣ ಶೇ.5ಕ್ಕಿಂತಲೂ ಹೆಚ್ಚಾದರೆ ಹೆಚ್ಚು ನಿರ್ಬಂಧಗಳನ್ನು ವಿಧಿಸಬೇಕಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಹೇಳಿದೆ. ಇದನ್ನು ಪಾಲಿಸಿದ್ದೇ ಆದಲ್ಲಿ, ಮಹಾರಾಷ್ಟ್ರ, ಗುಜರಾತ್, ದೆಹಲಿ, ತೆಲಂಗಾಣ, ಚಂಡೀಗಡ್, ತಮಿಳುನಾಡು ಹಾಗೂ ಬಿಹಾರ್ ರಾಜ್ಯಗಳನ್ನು ಈಗಲೂ ಸೀಲ್ಡೌನ್ ಸ್ಥಿತಿಯಲ್ಲಿಯೇ ಅಥವಾ ಯಾವುದೇ ವಿನಾಯ್ತಿಗಳಿಲ್ಲದ ಲಾಕ್ಡೌನ್ ಮುಂದುವರಿಸಬೇಕಾಗುತ್ತದೆ. ಈ ಎಲ್ಲ ರಾಜ್ಯಗಳಲ್ಲಿ ಕಳೆದೆರಡು ವಾರಗಳಿಂದ ಕರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬರುತ್ತಿದೆ.
ಇನ್ನೂ ಕರ್ನಾಟಕವೂ ಇದಕ್ಕೆ ಹೊರತಾಗಿಲ್ಲ. ಕಳೆದ ಒಂದು ವಾರದಿಂದ ದಿನವೂ 100ಕ್ಕೂ ಅಧಿಕ ಕೇಸ್ಗಳು ವರದಿಯಾಗುತ್ತಿವೆ. ಇದು ಕೂಡ ಕಳವಳಕ್ಕೆ ಕಾರಣವಾಗಿದೆ.
ಮಹಾರಾಷ್ಟ್ರದಲ್ಲಿ ಪರಿಸ್ಥಿತಿ ಅತ್ಯಂತ ಭೀಕರವಾಗಿದ್ದು, ಇಲ್ಲಿ ಸೋಂಕಿಗೆ ಒಳಗಾಗುತ್ತಿರುವವರ ಪ್ರಮಾಣ ಶೇ.18ಕ್ಕೂ ಹೆಚ್ಚಿದೆ. ಗುಜರಾತ್ನಲ್ಲಿ ಶೇ.9, ದೆಹಲಿ ಶೇ.7, ತೆಲಂಗಾಣ ಶೇ.7, ಚಂಡಿಗಢ್ ಶೇ.6, ತಮಿಳುನಾಡು ಹಾಗೂ ಬಿಹಾರದಲ್ಲಿ ಪರೀಕ್ಷೆಗೊಳಗಾದವರ ಪೈಕಿ ಶೇ.5 ಜನರಲ್ಲಿ ಸೋಂಕು ಕಂಡು ಬರುತ್ತಿದೆ. ಅಲ್ಲಿಗೆ ದೇಶದ ಶೇ.21ರಷ್ಟು ಪ್ರದೇಶ ಸೀಲ್ಡೌನ್ಗೆ ಒಳಗಾಗಬೇಕಾಗುತ್ತದೆ ಎಂದು ಜಾನ್ ಹಾಪ್ಕೀನ್ಸ್ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದಲ್ಲಿ ಹೇಳಲಾಗಿದೆ.
ಇನ್ನೂ ಆತಂಕದ ವಿಷಯವೆಂದರೆ, ಸದ್ಯ ಗಂಭೀರವಾಗಿ ಅನಾರೋಗ್ಯಕ್ಕೆ ಒಳಗಾದವರನ್ನು ಮಾತ್ರ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಹೀಗಾಗಿ ಸಮುದಾಯವೊಂದರಲ್ಲಿ ಎಷ್ಟು ಜನರು ಈ ಸೋಂಕಿಗೆ ತುತ್ತಾಗುತ್ತಿದ್ದಾರೆ ಎಂಬುದು ನಿಖರವಾಗಿ ಗೊತ್ತಾಗುತ್ತಿಲ್ಲ. ಈ ಸಂಖ್ಯೆ ಹೆಚ್ಚಾದಲ್ಲಿ ಸೋಂಕಿತರ ಸಂಖ್ಯೆಯಲ್ಲೂ ಭಾರಿ ಹೆಚ್ಚಳ ಕಂಡುಬರಲಿದೆ ಎಂದು ನಿರೀಕ್ಷಿಸಲಾಗಿದೆ.
ಈ ಕಾರಣಕ್ಕೆ ಜೂನ್ ವೇಳೆಗೆ ಭಾರತದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ತೀವ್ರ ಏರಿಕೆ ಕಂಡುಬರಲಿದೆ ಎಂದು ಹೇಳಲಾಗಿದೆ. ಈಗಾಗಲೇ ಖಾಸಗಿ ಆಸ್ಪತ್ರೆಯ ಶೇ.80ಕ್ಕೂ ಅಧಿಕ ಹಾಸಿಗೆಗಳನ್ನು ಸರ್ಕಾರ ವಶಕ್ಕೆ ಪಡೆಯುತ್ತಿದೆ. ಅಲ್ಲಿಗೂ ಇದು ತಹಬಂಧಿಗೆ ಬಾರದಿದ್ದರೆ, ಮತ್ತೊಂದು ಸುತ್ತಿನ ಸೀಲ್ ಡೌನ್ ಅನಿವಾರ್ಯವಾಗಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.