

ಈ ಹಿಂದಿನಿಂದಲೂ ಆಸ್ತಿ-ಅಂತಸ್ತಿಗಾಗಿ ಸಹೋದರರ ನಡುವೆ, ಕುಟುಂಬಸ್ಥರ ಮಧ್ಯೆ ಜಟಾಪಟಿ ನಡೆಯುವುದು ತೀರ ಸಾಮಾನ್ಯ. ಅಸಲಿಗೆ ಇಂತಹ ವಿಷಯಗಳು ಇಂದಿಗೂ ಕೆಲವರ ಮನೆಯಲ್ಲಿ ದಿನನಿತ್ಯ ನಡೆಯುತ್ತಿದೆ ಎಂಬ ಸಂಗತಿ ಶೋಚನೀಯ. ಒಂದೆಡೆ ವೇಗವಾಗಿ ಚಲಿಸುತ್ತಿರುವ ಟೆಕ್ನಾಲಜಿಯ ಜೀವನಶೈಲಿಯ ಈ ಕಾಲಘಟ್ಟದಲ್ಲಿಯೂ ಆಸ್ತಿಗಾಗಿ ಬಾಂಧವ್ಯ, ರಕ್ತ ಸಂಬಂಧವನ್ನೇ ಕಡಿದುಕೊಳ್ಳುವವರು ಇದ್ದಾರೆ ಎಂಬ ವಿಷಯ ನಿಜಕ್ಕೂ ಅರಗಿಸಿಕೊಳ್ಳುವುದು ಕಷ್ಟಕರ ಎಂದೇ ಹೇಳಬಹುದು. ಒಂದು ರೀತಿ ಸರಳವಾಗಿ ಹೇಳಬೇಕೆಂದರೆ, ಎಲ್ಲಾ ಮನುಷ್ಯ ಸಂಬಂಧಗಳು ಆರ್ಥಿಕ ಸಂಬಂಧಗಳಾಗಿ ಬದಲಾಗುತ್ತಿದೆ ಎಂಬುದರಲ್ಲಿ ಎಳ್ಳಷ್ಟು ಅನುಮಾನ ಬೇಡ. ಸದ್ಯ ಇಲ್ಲೊಂದು ಘಟನೆ ಕೂಡ ಇದೇ ಸಾಲಿಗೆ ಸೇರಿದ್ದು, ಹಣದ ದಾಹಕ್ಕೆ ಬಿದ್ದ ಅಮ್ಮ-ಮಗಳ ಜೋಡಿ ತಮ್ಮ ಬಾಳಿಗೆ ಬೆಳಕಾದವರನ್ನೇ ಸಂಚು ಹೂಡಿ ಹತ್ಯೆಗೈದಿದ್ದಾರೆ (Killed).
ಹೊರಗಿನ ಕಿಡಿಗೇಡಿಗಳು, ದುಷ್ಕರ್ಮಿಗಳು ಮನೆಯ ಬಾಗಿಲನ್ನು ಹೊಡೆದು ಚಿನ್ನ, ಬೆಳ್ಳಿ, ಕಪಾಟಿನಲ್ಲಿಟ್ಟಿರುವ ಹಣವನ್ನು ದೋಚಿಕೊಂಡು ಪರಾರಿಯಾಗುತ್ತಾರೆ ವಿನಃ ಮನೆಯಲ್ಲಿದ್ದವರನ್ನು ಹತ್ಯೆಗೈದು ಸ್ಥಳದಿಂದ ಕಾಲ್ಕಿತ್ತ ಪ್ರಸಂಗಗಳು ಬಹಳ ಕಡಿಮೆ ಎನ್ನಬಹುದು. ಆದ್ರೆ, ಆಸ್ತಿ-ಅಂತಸ್ತಿಗಾಗಿ ಒಡಹುಟ್ಟಿದವರ ಪ್ರಾಣವನ್ನೇ ಕಸಿದುಕೊಳ್ಳುವ ದುರುಳರು ನಮ್ಮೊಳಗೆಯೇ, ನಮ್ಮ ಮನೆಯೊಳಗೆ ಇದ್ದಾರೆ ಎಂಬ ವಿಷಯ ಎಂಥವರಿಗೂ ಊಹಿಸಲು ಅಸಾಧ್ಯ ಹಾಗೂ ಸಹಿಸಲಾಗದು. ಈ ಘಟನೆ ಕೂಡ ಇದನ್ನೇ ಹೋಲುತ್ತದೆ. ಕೇರಳದ ಅಜುರೆ ರೈಲು ನಿಲ್ದಾಣದ ಬಳಿಯ ಮನೆಯೊಂದರಲ್ಲಿ ವಾಸವಿದ್ದ ನಿರ್ಮಲಾ ಎಂಬ ವೃದ್ಧೆಯೊಬ್ಬರು ಶವವಾಗಿ ಪತ್ತೆಯಾದ ಶಾಕಿಂಗ್ ಸಂಗತಿ ಅಕ್ಕ-ಪಕ್ಕದ ಮನೆಯವರಿಂದ ತಡವಾಗಿ ಬೆಳಕಿಗೆ ಬಂದಿದೆ.
ನಿರ್ಮಲಾ ಅವರ ಮಗಳು ಮತ್ತು ಆಕೆಯ ಮೊಮ್ಮಗಳು ಅಜ್ಜಿಯ ಹೆಸರಿನಲ್ಲಿದ್ದ ಫಿಕ್ಸಡ್ ಡೆಪಾಸಿಟ್ ಹಣದ ಮೇಲೆ ಕಣ್ಣಿಟ್ಟಿದ್ದು, ಹೇಗಾದರೂ ಮಾಡಿ ಅದನ್ನು ತಮ್ಮ ವಶಕ್ಕೆ ಪಡೆಯಬೇಕೆಂದು ಹೊಂಚು ಹಾಕಿದ್ದರು. ಹಣದ ಜತೆ ಒಂದಷ್ಟು ಚಿನ್ನಾಭರಣಗಳು ಇದ್ದವು ಎಂದು ಹೇಳಲಾಗಿದೆ. ಮೂವರು ಹೆಣ್ಣುಮಕ್ಕಳ ತಾಯಿಯಾಗಿದ್ದ ನಿರ್ಮಲಾ ಅವರಿಗೆ ಆಸ್ತಿ ಹೆಚ್ಚಿದ್ದ ಕಾರಣ, ಅದರ ಮೇಲೆ ಮಗಳು ಶಿಖಾಗೆ ಕಣ್ಣಿತ್ತು. ಹೀಗಾಗಿಯೇ ಹಲವು ಬಾರಿ ವೃದ್ಧೆಯೊಂದಿಗೆ ಇದೇ ವಿಷಯಕ್ಕಾಗಿ ಅಮ್ಮ-ಮಗಳು ಜಗಳವಾಡಿದ್ದಾರೆ.
ಅಂತಿಮವಾಗಿ ಹೇಗಾದರೂ ಆಸ್ತಿಯನ್ನು ತನ್ನ ವಶಕ್ಕೆ ಪಡೆದುಕೊಳ್ಳಬೇಕು ಎಂದು ಸಂಚು ಹೂಡಿದ ಅಮ್ಮ-ಮಗಳ ಜೋಡಿ, ವೃದ್ಧೆಯ ಕುತ್ತಿಗೆಯನ್ನು ಬೆಲ್ಟ್ನಿಂದ ಬಿಗಿದು, ಹತ್ಯೆಗೈದಿದ್ದಾರೆ. ಈ ಕೊಲೆಯನ್ನು ಮರೆಮಾಚಲು ಅಜ್ಜಿಯ ಆರೋಗ್ಯ ಸರಿಯಿಲ್ಲದ ಕಾರಣ ಅವರು ತೀರಿಕೊಂಡರು ಎಂದು ಮೊಮ್ಮಗಳು ಉತ್ತರಾ ನಾಟಕವಾಡಿದ್ದಾಳೆ. ಆದ್ರೆ, ಆಕೆಯ ಗೊಂದಲದ ಮಾತುಗಳನ್ನು ಶಂಕಿಸಿದ ಸ್ಥಳೀಯರು ತಾಯಿ-ಪುತ್ರಿಯನ್ನು ಪೊಲೀಸರಿಗೆ ಒಪ್ಪಿಸಿ, ಇದೀಗ ಇಬ್ಬರಿಂದಲೂ ಸತ್ಯ ಬಾಯ್ಬಿಡಿಸಿದ್ದಾರೆ.
ಇದೇ ತಿಂಗಳ 14ರಂದು ನಿರ್ಮಲಾ ಅವರ ಕುತ್ತಿಗೆಗೆ ಬೆಲ್ಟ್ ಸುತ್ತಿ ಕೊಲೆ ಮಾಡಿದ್ದ ಅಮ್ಮ-ಮಗಳ ಜೋಡಿ, ಮೂರು ದಿನಗಳವರೆಗೂ ಆಕೆಯ ಶವವನ್ನು ಮನೆಯಲ್ಲಿಯೇ ಇಟ್ಟುಕೊಂಡಿದ್ದರು. ಅಜ್ಜಿಯ ಅನುಪಸ್ಥಿತಿ ಕಂಡ ಅಕ್ಕ-ಪಕ್ಕದ ಮನೆಯವರು ಶಿಖಾ ಮತ್ತು ಉತ್ತರಾ ಬಳಿ ಎಲ್ಲಿ ಹೋದರೂ ಎಂದು ಉತ್ತರ ಕೇಳಿದ್ದಾರೆ. ಇದಕ್ಕೆ ಇಬ್ಬರು ಒಂದೊಂದು ರೀತಿ ಉತ್ತರಿಸಿದ್ದಲ್ಲದೇ, ಅನುಮಾನ ಮೂಡುವಂತೆ ಮಾಡಿದ್ದಾರೆ. ಇದರಿಂದ ತಕ್ಷಣವೇ ಎಚ್ಚೆತ್ತುಕೊಂಡ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಗ್ಯ ಸಮಸ್ಯೆಗಳಿಂದ ನಿಧನರಾದರು ಎಂದು ಹೇಳಿರುವ ನಿರ್ಮಲಾ, ತಾಯಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿಟ್ಟುಕೊಂಡಿದ್ದು ಏಕೆ? ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಮತ್ತು ದೂರವಾಣಿ ಕರೆ ಮಾಹಿತಿಯ ಆಧಾರದ ಮೇರೆಗೆ ಪೊಲೀಸರು ತಾಯಿ ಮತ್ತು ಮಗಳನ್ನು ಬಂಧಿಸಿ ಆಯಾ ಠಾಣೆಗಳಲ್ಲಿ ವಿಚಾರಣೆ ನಡೆಸಿದಾಗ, ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ,(ಏಜೆನ್ಸೀಸ್).