

ನವದೆಹಲಿ: ಸದ್ಯ ಕ್ರೀಡಾ ಪುಟಗಳಲ್ಲಿ ಐಪಿಎಲ್ 2025ರ (IPL 2025) ಆವೃತ್ತಿ ಬಗ್ಗೆಯೇ ಸುದ್ದಿ ಸಮಾಚಾರ. ಐಪಿಎಲ್ ಕುರಿತು ಬಿಸಿಸಿಐ ನಡೆಸಿದ ಚರ್ಚೆ ಹೊರಬಿದ್ದ ಬೆನ್ನಲ್ಲೇ ಇದೀಗ ಕ್ರಿಕೆಟ್ ಅಭಿಮಾನಿಗಳ ಕಿವಿ ನೆಟ್ಟಗಾಗಿದ್ದು, ತಮ್ಮ ನೆಚ್ಚಿನ ಪ್ಲೇಯರ್ಸ್ಗಳು ಯಾವ ತಂಡದ ಪರ ಆಡಲಿದ್ದಾರೆ ಎಂಬ ಕುತೂಹಲ ಹೆಚ್ಚಿದೆ. ಇನ್ನು ಈ ಮಧ್ಯೆ ಮಾಜಿ ಕ್ಯಾಪ್ಟನ್ ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಕೆ.ಎಲ್. ರಾಹುಲ್, ಫಾಫ್ ಡು ಪ್ಲೆಸಿಸ್ ಸೇರಿದಂತೆ ಕೆಲವು ಸ್ಟಾರ್ ಆಟಗಾರರು ಈಗಿರುವ ತಮ್ಮ ಫ್ರಾಂಚೈಸಿಗೆ ಗುಡ್ಬೈ ಹೇಳಲಿದ್ದು, ಹರಾಜು ಪ್ರಕ್ರಿಯೆಯಲ್ಲಿ ಬೇರೊಂದು ತಂಡಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂಬ ವರದಿಗಳು ಸದ್ಯ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ಮಧ್ಯೆ 5 ಬಾರಿ ಚಾಂಪಿಯನ್ಸ್ ಆಗಿ ಮಿಂಚಿ, ಐಪಿಎಲ್ನಲ್ಲಿ ತಮ್ಮದೇ ಒಂದು ವಿಶಿಷ್ಟ ದಾಖಲೆ ನಿರ್ಮಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡುವ ಇಬ್ಬರು ಆಟಗಾರರಿಗೆ ಇದೇ ಕಡೆಯ ಲೀಗ್ ಎಂಬ ಸುದ್ದಿಯೊಂದು ಸದ್ಯ ಫ್ಯಾನ್ಸ್ಗಳಲ್ಲಿ ತೀವ್ರ ಗೊಂದಲ ಹುಟ್ಟುಹಾಕಿದೆ.
2008ರಲ್ಲಿ ಪ್ರಾರಂಭವಾದ ಐಪಿಎಲ್ನ ಮೊದಲ ಆವೃತ್ತಿಯಿಂದಲೂ ನಾಯಕತ್ವ ವಹಿಸಿಕೊಂಡ ಮಹೇಂದ್ರ ಸಿಂಗ್ ಧೋನಿ, ಅತ್ಯುತ್ತಮ ಕ್ಯಾಪ್ಟನ್ಸಿ, ಚಾಣಕ್ಷತೆ, ಚುರುಕುತನ, ತಂಡದ ಒಗ್ಗಟ್ಟು, ಶಿಸ್ತು, ಕ್ಷಣಮಾತ್ರದಲ್ಲಿ ತೆಗೆದುಕೊಳ್ಳುವ ಉತ್ತಮ ನಿರ್ಧಾರಗಳು ಟೀಮ್ನ ಯಶಸ್ಸಿಗೆ ಹಾಗೂ ಐದು ಬಾರಿ ಚಾಂಪಿಯನ್ ಪಟ್ಟಕ್ಕೆ ಕಾರಣವಾಯಿತು. ಇದು ಧೋನಿ ಅವರ ಅಭಿಮಾನಿಗಳಿಗೆ ಗೊತ್ತಿರುವ ಸಂಗತಿಯೇ. ನಿಂತಲ್ಲೇ ಎದುರಾಳಿ ತಂಡದ ವಿರುದ್ಧ ಉತ್ತಮ ತಂತ್ರಗಾರಿಕೆ ರೂಪಿಸುವ ಸಾಮರ್ಥ್ಯಯುಳ್ಳ ಕ್ಯಾಪ್ಟನ್ ಕೂಲ್, ತಮ್ಮ ಐತಿಹಾಸಿಕ ನಾಯಕತ್ವದ ಮುಖೇನ ಸಿಎಸ್ಕೆಯನ್ನು ಐದು ಬಾರಿ ಚಾಂಪಿಯನ್ಸ್ ಮಾಡುವುದಲ್ಲದೇ 12 ಬಾರಿ ಪ್ಲೇಆಫ್ ಹಂತಕ್ಕೆ ಕೊಂಡೊಯ್ದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕಳೆದ ವರ್ಷ ತಮ್ಮ ಕ್ಯಾಪ್ಟನ್ ಸ್ಥಾನವನ್ನು ರುತುರಾಜ್ ಗಾಯಕ್ವಾಡ್ಗೆ ಹಸ್ತಾಂತರಿಸಿದ ಎಂ.ಎಸ್. ಧೋನಿ, ಗಾಯಕ್ವಾಡ್ ನಾಯಕತ್ವದಲ್ಲಿ ಉತ್ತಮ ಪ್ರದರ್ಶನ ನೀಡಿದರು. ಕ್ಯಾಪ್ಟನ್ ಅಲ್ಲದೆ ಹೋದರು, ವಯಸ್ಸು ಬೆಂಬಲಿಸದೆ ಇದ್ದರೂ ಸಹ ತಮ್ಮ ಉದ್ದೇಶ ಹಾಗೂ ಚಿರ ಯುವಕನ ಎನರ್ಜಿಯನ್ನು ಕಳೆದುಕೊಳ್ಳದ ಧೋನಿ, ಯುವ ಆಟಗಾರರೇ ನಾಚುವಂತೆ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡುತ್ತ ಬಂದಿದ್ದಾರೆ. ಸದ್ಯ ಈ ಬಾರಿಯ ಐಪಿಎಲ್ಗೆ ಅವರು ಆಡಲಿದ್ದಾರೋ ಅಥವಾ ನಿವೃತ್ತಿ ಘೋಷಿಸಲಿದ್ದಾರೋ ಎಂಬುದು ಸದ್ಯ ಅಡ್ಡ ಗೋಡೆಯ ಮೇಲೆ ದೀಪವನ್ನಿಟ್ಟಂತಾಗಿದೆ. ಅಸಲಿಗೆ ಧೋನಿಗೆ ಇದೇ ಲಾಸ್ಟ್ ಸೀಸನ್ ಎಂದು ವರದಿಗಳು ಹೇಳಿದ್ದು, ಅವರ ನಿರ್ಣಯ ಏನಾಗಿರಲಿದೆ ಎಂಬುದೇ ಸದ್ಯ ಕುತೂಹಲಕಾರಿ.
ಈ ಹಿಂದೆ ರಾಜಸ್ಥಾನ ರಾಯಲ್ಸ್ ಪರ ಆಡಿದ್ದ ಅಜಿಂಕ್ಯಾ ರಹಾನೆ, ತಂಡದ ಪರ ಓಪನಿಂಗ್ ಬ್ಯಾಟ್ಸ್ಮನ್ ಆಗಿ ಕಣಕ್ಕಿಳಿಯುತ್ತಿದ್ದರು. ಅಲ್ಲಿ ಅಂತಹ ಸ್ಫೋಟಕ ಬ್ಯಾಟಿಂಗ್ ಮಾಡದ ರಹಾನೆ, ಐಪಿಎಲ್ನ ಬೆಸ್ಟ್ ಹಾಗೂ ಬಲಿಷ್ಠ ತಂಡ ಎಂದು ಕರೆಸಿಕೊಳ್ಳುವ ಸಿಎಸ್ಕೆಗೆ ಎಂಟ್ರಿಕೊಟ್ಟ ಬಳಿಕ ಅದ್ಭುತ ಪ್ರದರ್ಶನ ನೀಡಲು ಪ್ರಾರಂಭಿಸಿದರು. ಕಳೆದ ಆವೃತ್ತಿ ಕೂಡ ಉತ್ತಮ ಪರ್ಫಾಮೆನ್ಸ್ ಕೊಟ್ಟ ಅಜಿಂಕ್ಯಾ ರಹಾನೆ, ತಂಡದ ಪರ ಅತ್ಯುತ್ತಮ ಬ್ಯಾಟಿಂಗ್ ಮಾಡಿದ್ದರು. ಇದರಿಂದ ತಂಡದ ರನ್ರೇಟ್ ಸಹ ಹೆಚ್ಚಾಗಿತ್ತು. ಆದರೆ, ಇದೀಗ ವರದಿಗಳ ಪ್ರಕಾರ, ರಹಾನೆ ಆಡಲಿರುವ ಕೊನೆಯ ಸೀಸನ್ ಇದಾಗಿರಲಿದೆ ಎಂಬ ಸುದ್ದಿ ಸದ್ಯ ಫ್ಯಾನ್ಸ್ಗಳಲ್ಲಿ ಬೇಸರ ಮೂಡಿಸಿದೆ. ಈ ಇಬ್ಬರು ಸ್ಟಾರ್ ಆಟಗಾರರು ಮುಂದಿನ ದಿನಗಳಲ್ಲಿ ಕಣಕ್ಕಿಳಿಯುವುದಿಲ್ಲ ಎಂದರೆ ಖಂಡಿತ ಸಿಎಸ್ಕೆ ಅಭಿಮಾನಿಗಳಿಗೆ ದೊಡ್ಡ ನಷ್ಟ ಉಂಟಾಗುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ ಎಂದು ಹೇಳಬಹುದು,(ಏಜೆನ್ಸೀಸ್).