

ಮಹಾರಾಷ್ಟ್ರ: ನಿನ್ನೆ (ಅ.25) ಪುಣೆಯ ಎಂಸಿಎಂ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ಪಡೆ, ಮೊದಲ ಇನ್ನಿಂಗ್ಸ್ ಅಂತ್ಯಕ್ಕೆ 259 ರನ್ ಗಳಿಸಿದರೆ, ಟೀಮ್ ಇಂಡಿಯಾ ಕೇವಲ 156 ರನ್ಗೆ ಆಲ್ಔಟ್ ಆಯಿತು. ಇನ್ನು ದ್ವಿತೀಯ ಇನ್ನಿಂಗ್ಸ್ನಲ್ಲಿ ಬ್ಯಾಟ್ ಮಾಡಿದ 53 ಓವರ್ಗಳ ಅಂತ್ಯಕ್ಕೆ 5 ವಿಕೆಟ್ ಕಳದುಕೊಂಡು 198 ರನ್ ಗಳಿಸುವಲ್ಲಿ ಶಕ್ತವಾಯಿತು. ನ್ಯೂಜಿಲೆಂಡ್ ವಿರುದ್ಧ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ಮತ್ತೊಮ್ಮೆ ಮುಗ್ಗರಿಸಿದ ಭಾರತ ತಂಡದ ವಿರುದ್ಧ ಇದೀಗ ಮಾಜಿ ಹಿರಿಯ ಕ್ರಿಕೆಟಿಗರು (Virat & Rohit) ಅತೀವ ಬೇಸರ ವ್ಯಕ್ತಪಡಿಸಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಇಲ್ಲಿಯವರೆಗೆ ಬ್ಯಾಟ್ ಮಾಡಿರುವ ರೋಹಿತ್ ಶರ್ಮ ಕೇವಲ 2, 52 ಮತ್ತು ಶೂನ್ಯ ರನ್ ಕಲೆಹಾಕಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಕೂಡ ಇದೇ ರೀತಿ ಕಳಪೆ ಪ್ರದರ್ಶನ ತೋರಿದ್ದು, 0, 70 ಮತ್ತು 1 ರನ್ ಗಳಿಸಿದ್ದಾರೆ. ಇವರಿಬ್ಬರು ಟೀಮ್ ಇಂಡಿಯಾದ ದಿಗ್ಗಜ ಆಟಗಾರರು. ಹೀಗಿರುವಾಗ ರೋಹಿತ್ ಮತ್ತು ಕೊಹ್ಲಿಯಿಂದ ಸಾಕಷ್ಟು ನಿರೀಕ್ಷೆಗಳು ಇರುತ್ತವೆ ಹಾಗೂ ತಂಡಕ್ಕೆ ಆಸರೆಯಾಗುತ್ತಾರೆ ಎಂದೇ ಎಲ್ಲರೂ ಭಾವಿಸಿರುತ್ತಾರೆ. ಇದೆಲ್ಲವನ್ನೂ ಮೀರಿ ಕೊಹ್ಲಿ ಮತ್ತು ಶರ್ಮ ತಮ್ಮ ಆಟವನ್ನು ತೋರುವಲ್ಲಿ ಇಲ್ಲಿ ಎಡವಿದ್ದಾರೆ ಎಂದು ಟೀಮ್ ಇಂಡಿಯಾದ ಇಬ್ಬರು ಮಾಜಿ ಕ್ರಿಕೆಟಿಗರು ಅಭಿಪ್ರಾಯಿಸಿದ್ದಾರೆ.
"ನಿಮ್ಮ ಹಿರಿಯ ಆಟಗಾರರು ಉತ್ತಮ ಪ್ರದರ್ಶನ ನೀಡಬೇಕು ಹಾಗೂ ತಂಡವನ್ನು ಮುನ್ನಡೆಸುವುದು ಅಗತ್ಯ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ತಮ್ಮ ಬ್ಯಾಟಿಂಗ್ ಸಾಮರ್ಥ್ಯದಿಂದ ಹೆಚ್ಚುವರಿ ರನ್ ಗಳಿಸಬೇಕು. ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ಸರ್ಫರಾಜ್ ಖಾನ್ ಮತ್ತು ರಿಷಬ್ ಪಂತ್ ಇವರೆಲ್ಲ ಇನ್ನೂ ಚಿಕ್ಕವರು. ಇವರಿಗೆ ಹಿರಿಯ ಆಟಗಾರರ ಬೆಂಬಲದ ಅಗತ್ಯವಿದೆ. ಇಲ್ಲಿ ವಿರಾಟ್ ಮತ್ತು ರೋಹಿತ್ ತಮ್ಮ ಅತ್ಯುತ್ತಮ ಪ್ರದರ್ಶನ ತೋರುವಲ್ಲಿ ಎಡವಿದ್ದಾರೆ. ಇವರಿಬ್ಬರು ತಂಡವನ್ನು ನಿರಾಸೆಗೊಳಿಸಿದ್ದಾರೆ" ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.
ಇನ್ನು ಮಾಜಿ ಆಟಗಾರ ಪ್ರಗ್ಯಾನ್ ಓಜಾ ಕೂಡ ಆಕಾಶ್ ಅವರ ಮಾತನ್ನು ಒಪ್ಪಿದ್ದು, “ರೋಹಿತ್ ಮತ್ತು ವಿರಾಟ್ ಈ ದೂರಿಗೆ ಅರ್ಹರು. ಅವರು ರನ್ಗಳ ನಡುವೆ ಇರಲಿಲ್ಲ. ಬೆಂಗಳೂರಿನಲ್ಲಿ ನಡೆದ ಎರಡನೇ ಇನ್ನಿಂಗ್ಸ್ನಲ್ಲಿ ಶರ್ಮ ಮತ್ತು ಕೊಹ್ಲಿ ಅರ್ಧಶತಕ ಗಳಿಸಿದ್ದೇ ಆದರೂ ಅದನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ವಿಫಲರಾದರು. ಪುಣೆಯಲ್ಲಿಯೂ ಸಹ ಇಬ್ಬರೂ ಮತ್ತೆ ಮುಗ್ಗರಿಸಿದ್ದಾರೆ. ಬ್ಯಾಟಿಂಗ್ಗೆ ಶಕ್ತಿ ತುಂಬಲು ನಿಮ್ಮ ಅನುಭವಿ ಕೈಗಳು ಇಲ್ಲಿ ಬಹಳ ಅಗತ್ಯವಿದೆ" ಎಂದು ಹೇಳಿದ್ದಾರೆ,(ಏಜೆನ್ಸೀಸ್).