Ranji Trophy: ಇಂದಿನಿಂದ ಕರ್ನಾಟಕ-ಬಿಹಾರ ಕಾದಾಟ; ಗೆಲ್ಲಲೇಬೇಕಾದ ಒತ್ತಡದಲ್ಲಿ ಮಯಾಂಕ್​ ಅಗರ್ವಾಲ್ ಬಳಗ

web ranji kar
Published on

ಪಟನಾ: ಆಡಿದ ಮೊದಲ ಎರಡು ಪಂದ್ಯಗಳಲ್ಲಿ ಕೇವಲ ಎರಡು ಅಂಕಗಳಿಗೆ ತೃಪ್ತಿಪಟ್ಟಿರುವ ಕರ್ನಾಟಕ ತಂಡ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್​ ಟೂರ್ನಿಯ 3ನೇ ಲೀಗ್​ ಪಂದ್ಯದಲ್ಲಿ ಆತಿಥೇಯ ಬಿಹಾರ ತಂಡವನ್ನು ಎದುರಿಸಲಿದೆ. ಶನಿವಾರದಿಂದ ಪಟನಾದ ಮೋಯಿನ್​ ಉಲ್​ ಹಕ್​ ಸ್ಟೇಡಿಯಂನಲ್ಲಿ ನಡೆಯಲಿರುವ ಕಾದಾಟದಲ್ಲಿ ಗೆಲುವು ಸಾಧಿಸುವುದು ಮಯಾಂಕ್​ ಅಗರ್ವಾಲ್​ ಬಳಗದ ಗುರಿಯಾಗಿದೆ.

ಕರ್ನಾಟಕ ತಂಡದ ಮೊದಲ ಎರಡೂ ಪಂದ್ಯಗಳಲ್ಲಿ ಮಳೆಯಿಂದಾಗಿ ಮೊದಲ ಇನಿಂಗ್ಸ್​ ಪೂರ್ಣಗೊಂಡಿರಲಿಲ್ಲ. ಇದರಿಂದಾಗಿ ಎರಡೂ ಪಂದ್ಯಗಳಲ್ಲಿ ತಲಾ ಒಂದು ಅಂಕ ಗಳಿಸಿದ್ದು, ಸಿ ಗುಂಪಿನ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಹೀಗಾಗಿ ನಾಕೌಟ್​ ಅವಕಾಶ ವೃದ್ಧಿಸಿಕೊಳ್ಳಲು ಕರ್ನಾಟಕ ತಂಡ ಈ ಪಂದ್ಯದಲ್ಲಿ ಪೂರ್ಣ 7 ಅಂಕ ಕಲೆಹಾಕುವ ಅಗತ್ಯವಿದೆ. ಎಡಗೈ ಬ್ಯಾಟರ್​ ದೇವದತ್​ ಪಡಿಕ್ಕಲ್​ ಭಾರತ ಎ ತಂಡದೊಂದಿಗೆ ಆಸ್ಟ್ರೆಲಿಯಾಗೆ ಪ್ರಯಾಣಿಸಿರುವುದರಿಂದ ಅಲಭ್ಯರಾಗಿದ್ದಾರೆ. ಆದರೆ ಇತ್ತೀಚೆಗೆ ಮಹಾರಾಜ ಟ್ರೋಫಿಯಲ್ಲಿ ಭರ್ಜರಿ ಬ್ಯಾಟಿಂಗ್​ ಪ್ರದರ್ಶಿಸಿದ್ದ ಅಭಿನವ್​ ಮನೋಹರ್​ ಸೇರ್ಪಡೆ ಬಲ ತುಂಬಿದೆ.

ಕಳೆದ ಕೇರಳ ವಿರುದ್ಧದ ಪಂದ್ಯದಲ್ಲಿ 50 ಓವರ್​ ಬೌಲಿಂಗ್​ ಮಾಡಿದ್ದ ಕರ್ನಾಟಕ, 3 ವಿಕೆಟ್​ ಮಾತ್ರ ಗಳಿಸಿತ್ತು. ಇದು ರಾಜ್ಯದ ಬೌಲರ್​ಗಳಿಂದ ಈ ಬಾರಿ ಸುಧಾರಿತ ನಿರ್ವಹಣೆ ನಿರೀಸುವಂತೆ ಮಾಡಿದೆ. ಪ್ರಮುಖವಾಗಿ ರಾಜ್ಯದ ಸ್ಪಿನ್ನರ್​ಗಳು ಬಿಗಿ ದಾಳಿ ಸಂಟಿಸಬೇಕಾದ ಅಗತ್ಯವಿದೆ.

ಮತ್ತೊಂದೆಡೆ ಬಿಹಾರ ತಂಡ ಮೊದಲ ಪಂದ್ಯದಲ್ಲಿ ಹರಿಯಾಣ ಎದುರು ಇನಿಂಗ್ಸ್​ ಸೋಲು ಕಂಡಿದ್ದರೆ, 2ನೇ ಪಂದ್ಯದಲ್ಲಿ ಬಂಗಾಳ ವಿರುದ್ಧ ಭಾರಿ ಮಳೆಯಿಂದಾಗಿ ಒಂದೂ ಎಸೆತ ಆಟವಾಡದೆ ಒಂದು ಅಂಕಕ್ಕೆ ತೃಪ್ತಿಪಟ್ಟಿತ್ತು. ವೀರ್​ಪ್ರತಾಪ್​ ಸಿಂಗ್​ ಸಾರಥ್ಯದ ಬಿಹಾರ ತಂಡವೀಗ ಹಾಲಿ ಋತುವಿನಲ್ಲಿ ತವರಿನಲ್ಲಿ ಮೊದಲ ಪಂದ್ಯ ಆಡಲಿದೆ.

ಆರಂಭ: ಬೆಳಗ್ಗೆ 9.00

ಬಿಹಾರ ತಂಡದಲ್ಲಿ 13ರ ಬಾಲಕನಿಗೆ ಸ್ಥಾನ

ಇತ್ತೀಚೆಗೆ ಆಸ್ಟ್ರೆಲಿಯಾ ವಿರುದ್ಧದ 19 ವಯೋಮಿತಿ ಟೆಸ್ಟ್​ ಸರಣಿಯಲ್ಲಿ ಬಿರುಸಿನ ಶತಕ ಸಿಡಿಸಿ ಮಿಂಚಿದ್ದ 13 ವರ್ಷದ ವೈಭವ್​ ಸೂರ್ಯವಂಶಿ ಕರ್ನಾಟಕ ವಿರುದ್ಧದ ಪಂದ್ಯದಲ್ಲಿ ಬಿಹಾರ ಪರ ಕಣಕ್ಕಿಳಿಯುವ ನಿರೀಕ್ಷೆ ಇದೆ. ಮೊದಲ 2 ಪಂದ್ಯಗಳಿಗೆ ಬಿಹಾರದ 20 ಆಟಗಾರರ ತಂಡದಲ್ಲಿರದ ವೈಭವ್​ ಇದೀಗ ಪಟನಾ ಹೈಕೋರ್ಟ್​ ಮಧ್ಯಪ್ರವೇಶದ ಬಳಿಕ ತಂಡದಲ್ಲಿ ಸ್ಥಾನ ಸಂಪಾದಿಸಿದ್ದಾರೆ.

ಮತ್ತೆ ಮಳೆ ಭೀತಿ

ಬಂಗಾಳದಲ್ಲಿ ಜನಜೀವನ ಅಸ್ತವ್ಯಸ್ತಗೊಳಿಸಿರುವ ದಾನಾ ಚಂಡಮಾರುತದಿಂದಾಗಿ ಬಿಹಾರದಲ್ಲೂ ಮಳೆಯಾಗುವ ಸಾಧ್ಯತೆಗಳಿವೆ. ಇದರಿಂದಾಗಿ ಕರ್ನಾಟಕಕ್ಕೆ ಸತತ 3ನೇ ಪಂದ್ಯದಲ್ಲೂ ಮಳೆ ಕಾಡುವ ಭೀತಿ ಎದುರಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net