ಐಪಿಎಲ್​ ರಿಟೇನ್​ ಕುತೂಹಲ: ಯಾರು ಉಳಿಕೆ? ಯಾರು ರಿಲೀಸ್​? ಇಲ್ಲಿದೆ ಎಲ್ಲ 10 ತಂಡಗಳ ಲೆಕ್ಕಾಚಾರ...

web ipl retain
Published on

ಬೆಂಗಳೂರು: ಐಪಿಎಲ್​ 18ನೇ ಆವೃತ್ತಿಯ ಆಟಗಾರರ ಹರಾಜಿಗೆ ಮುನ್ನ ಎಲ್ಲ 10 ತಂಡಗಳು ರಿಟೇನ್​ ಪಟ್ಟಿ ಸಲ್ಲಿಸಲು ಇನ್ನು ಒಂದು ವಾರವಷ್ಟೇ ಬಾಕಿ ಇದ್ದು, ಕ್ರಿಕೆಟ್​ ಪ್ರೇಮಿಗಳ ಕುತೂಹಲ ಗರಿಗೆದರಿದೆ. ಅಕ್ಟೋಬರ್​ 31ರ ಸಂಜೆ 5 ಗಂಟೆಯೊಳಗೆ ಎಲ್ಲ ತಂಡಗಳು ರಿಟೇನ್​ ಆಟಗಾರರ ಪಟ್ಟಿ ಅಂತಿಮಗೊಳಿಸಬೇಕಾಗಿದೆ. ಆದರೆ ಈಗಾಗಲೆ ಎಲ್ಲ ತಂಡಗಳ ರಿಟೇನ್​ ಲೆಕ್ಕಾಚಾರದ ಬಗ್ಗೆ ವಿವಿಧ ವರದಿಗಳು ಹರಿದಾಡುತ್ತಿವೆ. ಈ ಪೈಕಿ ಕೆಲವು ಅಧಿಕೃತ ಮೂಲಗಳ ವರದಿಯಾಗಿದ್ದರೆ, ಇನ್ನು ಕೆಲವು ಬರೀ ಊಹಾಪೋಹಗಳೂ ಆಗಿರಬಹುದು. ಅಂಥ ವರದಿಗಳ ಆಧಾರದಲ್ಲಿ ಎಲ್ಲ 10 ತಂಡಗಳ ರಿಟೇನ್​ ಲೆಕ್ಕಾಚಾರದ ಸಂಪ್ತ ವಿವರ ಇಲ್ಲಿದೆ...

ಚೆನ್ನೈ ಸೂಪರ್​ಕಿಂಗ್ಸ್​

ಮಾಜಿ ನಾಯಕ ರವೀಂದ್ರ ಜಡೇಜಾ (18 ಕೋಟಿ ರೂ.), ನಾಯಕ ಋತುರಾಜ್​ ಗಾಯಕ್ವಾಡ್​ (18 ಕೋಟಿ ರೂ.), ಶ್ರೀಲಂಕಾ ವೇಗಿ ಮಥೀಶ ಪಥಿರಣ (14 ಕೋಟಿ ರೂ.), ಆಲ್ರೌಂಡರ್​ ಶಿವಂ ದುಬೆ (11 ಕೋಟಿ ರೂ.) ಅವರನ್ನು ಸಿಎಸ್​ಕೆ ರಿಟೇನ್​ ಮಾಡಿಕೊಳ್ಳುವುದು ಬಹುತೇಕ ಖಚಿತವೆನಿಸಿದೆ. ಕಳೆದ 5 ವರ್ಷಗಳಿಂದ ಭಾರತ ಪರ ಆಡದ ಆಟಗಾರರನ್ನು "ಅನ್​ಕ್ಯಾಪ್ಡ್​' ಆಗಿ 4 ಕೋಟಿ ರೂ.ಗೆ ಉಳಿಸಿಕೊಳ್ಳಲು ಬಿಸಿಸಿಐ ಅವಕಾಶ ಕಲ್ಪಿಸಿದ್ದು, ಇದು ಧೋನಿಗಾಗಿಯೇ ರೂಪಿಸಿರುವ ನಿಯಮದಂತಿದೆ. ಆದರೂ, ಧೋನಿ ಮುಂದಿನ ಐಪಿಎಲ್​ನಲ್ಲಿ ಆಡುವ ಬಗ್ಗೆ ಇನ್ನೂ ಖಚಿತಪಡಿಸಿಲ್ಲ ಎಂದು ಸಿಎಸ್​ಕೆ ಮ್ಯಾನೇಜ್​ಮೆಂಟ್​ ತಿಳಿಸಿದೆ.

ಕೋಲ್ಕತ ನೈಟ್​ರೈಡರ್ಸ್​

ಹಾಲಿ ಚಾಂಪಿಯನ್​ ಕೆಕೆಆರ್​ ತಂಡ ವಿಂಡೀಸ್​ ಆಲ್ರೌಂಡರ್​ ಆಂಡ್ರೆ ರಸೆಲ್​ರನ್ನು (18 ಕೋಟಿ ರೂ.) ಮೊದಲ ಆದ್ಯತೆಯ ಆಟಗಾರರನ್ನಾಗಿ ರಿಟೇನ್​ ಮಾಡಿಕೊಳ್ಳಲು ಬಯಸಿದೆ. ಸುನೀಲ್​ ನಾರಾಯಣ್​ (14 ಕೋಟಿ ರೂ.) ಮತ್ತು ರಿಂಕು ಸಿಂಗ್​ (11 ಕೋಟಿ ರೂ.) ಮತ್ತಿಬ್ಬರು ರಿಟೇನ್​ ಆಟಗಾರರು. ವೇಗಿ ಹರ್ಷಿತ್​ ರಾಣಾ (4 ಕೋಟಿ ರೂ.) ದೇಶೀಯ ಆಟಗಾರರಾಗಿ (ಅನ್​ಕ್ಯಾಪ್ಡ್​) ರಿಟೇನ್​ ಆಗಲಿದ್ದಾರೆ. ಹಾಲಿ ನಾಯಕ ಶ್ರೇಯಸ್​ ಅಯ್ಯರ್​ರನ್ನು 4ನೇ ಆಟಗಾರರನ್ನಾಗಿ ರಿಟೇನ್​ ಮಾಡಿಕೊಂಡರೆ ಕೆಕೆಆರ್​ ಮತ್ತೆ 18 ಕೋಟಿ ರೂ. ವ್ಯಯಿಸಬೇಕಾಗುತ್ತದೆ. ಇದಕ್ಕೆ ಕೆಕೆಆರ್​ ಹಿಂದೇಟು ಹಾಕಿದೆ ಎನ್ನಲಾಗಿದೆ.

ಸನ್​ರೈಸರ್ಸ್​ ಹೈದರಾಬಾದ್​

ಟಿ20 ಕ್ರಿಕೆಟ್​ನ ಸ್ಫೋಟಕ ಬ್ಯಾಟರ್​ ಹೆನ್ರಿಕ್​ ಕ್ಲಾಸೆನ್​ರನ್ನು 23 ಕೋಟಿ ರೂ.ಗೆ ರಿಟೇನ್​ ಮಾಡಿಕೊಳ್ಳಲು ಸನ್​ರೈಸರ್ಸ್​ ಮುಂದಾಗಿದೆ ಎಂದು ಈಗಾಗಲೆ ವರದಿಯಾಗಿದೆ. ಜತೆಗೆ ನಾಯಕ ಪ್ಯಾಟ್​ ಕಮ್ಮಿನ್ಸ್​ (18 ಕೋಟಿ ರೂ.), ಅಭಿಷೇಕ್​ ಶರ್ಮ (14 ಕೋಟಿ ರೂ.) ಅವರನ್ನೂ ರಿಟೇನ್​ ಮಾಡಿಕೊಳ್ಳಲಿದೆ. ಟ್ರಾವಿಸ್​ ಹೆಡ್​ ಮತ್ತು ನಿತೀಶ್​ ಕುಮಾರ್​ ರೆಡ್ಡಿಯನ್ನೂ ರಿಟೇನ್​ ಮಾಡಿಕೊಳ್ಳಲು ಬಯಸಿದ್ದರೂ ಇನ್ನೂ ಅಂತಿಮವಾಗಿಲ್ಲ.

ಮುಂಬೈ ಇಂಡಿಯನ್ಸ್​

ರೋಹಿತ್​ ಶರ್ಮ (18 ಕೋಟಿ ರೂ.), ಜಸ್​ಪ್ರೀತ್​ ಬುಮ್ರಾ (18 ಕೋಟಿ ರೂ.), ಹಾರ್ದಿಕ್​ ಪಾಂಡ್ಯ (14 ಕೋಟಿ ರೂ.), ಸೂರ್ಯಕುಮಾರ್​ ಯಾದವ್​ (14 ಕೋಟಿ ರೂ.), ತಿಲಕ್​ ವರ್ಮ (11 ಕೋಟಿ ರೂ.) ಅವರನ್ನು ರಿಟೇನ್​ ಮಾಡಿಕೊಳ್ಳಲು ಬಯಸಿದೆ ಎನ್ನಲಾಗಿದೆ. ಜತೆಗೆ ನೇಹಲ್​ ವಧೇರ (4 ಕೋಟಿ) ಅವರನ್ನು ಅನ್​ಕ್ಯಾಪ್ಡ್​ ಆಗಿ ಉಳಿಸಿಕೊಳ್ಳುವ ನಿರೀಕ್ಷೆ ಇದೆ. ಇದೇ ವೇಳೆ ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್​ ಯಾದವ್​ ಅವರಿಗೇ ಮುಂಬೈ ನಾಯಕತ್ವವೂ ಒಲಿಯಲಿದೆ ಎನ್ನಲಾಗಿದೆ.

ಆರ್​ಸಿಬಿ

ವಿರಾಟ್​ ಕೊಹ್ಲಿ ಒಬ್ಬರೇ ಆರ್​ಸಿಬಿ ರಿಟೇನ್​ ಮಾಡಿಕೊಳ್ಳುವ ಆಟಗಾರರ ಪೈಕಿ ಇದುವರೆಗೆ ಖಚಿತಗೊಂಡಿರುವವರು. ಉಳಿದಂತೆ ಮೊಹಮದ್​ ಸಿರಾಜ್​ ಮತ್ತು ರಜತ್​ ಪಾಟೀದಾರ್​ ರಿಟೇನ್​ ಬಯಸಿದ್ದರೂ, ಇನ್ನೂ ಅಂತಿಮಗೊಂಡಿಲ್ಲ. ಕ್ಯಾಮರಾನ್​ ಗ್ರೀನ್​ ಗಾಯದಿಂದಾಗಿ ಐಪಿಎಲ್​ಗೆ ಅಲಭ್ಯರಾಗುವ ಸಾಧ್ಯತೆ ಇರುವುದರಿಂದ ಅವರ ರಿಟೇನ್​ಗೆ ಆಸಕ್ತಿ ತೋರಿಲ್ಲ. ಈ ನಡುವೆ ಕೊಹ್ಲಿ ರಿಟೇನ್​ಗಾಗಿ ಆರ್​ಸಿಬಿ ಗರಿಷ್ಠ 18 ಕೋಟಿ ಬದಲಾಗಿ 25 ಕೋಟಿ ರೂ.ವರೆಗೂ ವ್ಯಯಿಸಲು ಸಿದ್ಧವಾಗಿದೆ ಎನ್ನಲಾಗಿದೆ. ಇದಕ್ಕೆ ಪ್ರತಿಯಾಗಿ ಕೊಹ್ಲಿ ಮತ್ತೆ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ ಎಂದೂ ವರದಿಯಾಗಿದೆ.

ಲಖನೌ ಸೂಪರ್​ಜೈಂಟ್ಸ್​

ಕಳೆದೆರಡು ಆವೃತ್ತಿಗಳ ನಾಯಕ, ಕನ್ನಡಿಗ ಕೆಎಲ್​ ರಾಹುಲ್​ ಈ ಬಾರಿ ಲಖನೌ ತಂಡದಲ್ಲಿ ರಿಟೇನ್​ ಆಗುವುದಿಲ್ಲ ಎನ್ನಲಾಗಿದೆ. ನಿಕೋಲಸ್​ ಪೂರನ್​ (18 ಕೋಟಿ ರೂ.), ಮಾರ್ಕಸ್​ ಸ್ಟೋಯಿನಿಸ್​ (14 ಕೋಟಿ ರೂ.) ಮತ್ತು ಮಯಾಂಕ್​ ಯಾದವ್​ (11 ಕೋಟಿ ರೂ.) ಲಖನೌ ರಿಟೇನ್​ ಮಾಡಿಕೊಳ್ಳಲು ಬಯಸಿರುವ ಮೂವರು ಆಟಗಾರರು. ಈ ಪೈಕಿ ನಿಕೋಲಸ್​ ಪೂರನ್​ ಹೊಸ ನಾಯಕರಾಗಲಿದ್ದಾರೆ ಎನ್ನಲಾಗಿದೆ. ಅನ್​ಕ್ಯಾಪ್ಡ್​ ಕೋಟಾದಡಿ ಮೊಹ್ಸಿನ್​ ಖಾನ್​ ಮತ್ತು ಆಯುಷ್​ ಬಡೋನಿ ರಿಟೇನ್​ ಆಗಬಹುದು.

ಡೆಲ್ಲಿ ಕ್ಯಾಪಿಟಲ್ಸ್​

ರಿಷಭ್​ ಪಂತ್​ ಅವರನ್ನು ರಿಟೇನ್​ ಮಾಡಿಕೊಂಡರೂ ನಾಯಕತ್ವ ನೀಡದಿರಲು ಡೆಲ್ಲಿ ಫ್ರಾಂಚೈಸಿ ನಿರ್ಧರಿಸಿದೆ. ಇದರಿಂದಾಗಿ ಪಂತ್​ ಡೆಲ್ಲಿ ತಂಡದಿಂದ ಹೊರನಡೆಯಲು ಮುಂದಾಗಿದ್ದಾರೆ ಎನ್ನಲಾಗಿದೆ. ಪಂತ್​ ಸಾಮಾಜಿಕ ಜಾಲತಾಣದಲ್ಲಿ ಡೆಲ್ಲಿ ತಂಡವನ್ನು ಅನ್​ಫಾಲೋ ಮಾಡಿರುವುದು ಕೂಡ ಇದಕ್ಕೆ ಪುಷ್ಠಿ ತುಂಬಿದೆ. ಪಂತ್​ಗೆ ಪ್ರಮುಖವಾಗಿ ಪಂಜಾಬ್​ ಕಿಂಗ್ಸ್​, ಆರ್​ಸಿಬಿ ತಂಡಗಳಿಂದ ಆರ್​ ಹೋಗಿದೆ ಎನ್ನಲಾಗುತ್ತಿದೆ. ಇನ್ನು ಅಕ್ಷರ್​ ಪಟೇಲ್​ ಜತೆಗೆ ಜೇಕ್​ ಫ್ರೇಸರ್​ ಮೆಕ್​ಗುರ್ಕ್​ ಅಥವಾ ಕುಲದೀಪ್​ ಯಾದವ್​ರನ್ನು ರಿಟೇನ್​ ಮಾಡಿಕೊಳ್ಳಲು ಡೆಲ್ಲಿ ಬಯಸಿದೆ.

ಗುಜರಾತ್​ ಟೈಟಾನ್ಸ್​

ನಾಯಕ ಶುಭಮಾನ್​ ಗಿಲ್​ (18 ಕೋಟಿ ರೂ.), ರಶೀದ್​ ಖಾನ್​ (14 ಕೋಟಿ ರೂ.) ಮತ್ತು ಮೊಹಮದ್​ ಶಮಿ (11 ಕೋಟಿ ರೂ.) ಅವರನ್ನು ರಿಟೇನ್​ ಮಾಡಿಕೊಳ್ಳಲು ಗುಜರಾತ್​ ಬಯಸಿದೆ. ರಾಹುಲ್​ ತೆವಾಟಿಯಾರನ್ನು (4 ಕೋಟಿ ರೂ.) ಅನ್​ಕ್ಯಾಪ್ಡ್​ ಆಗಿ ರಿಟೇನ್​ ಮಾಡಿಕೊಳ್ಳಲಿದೆ. ಈ ನಡುವೆ ರಶೀದ್​ ಖಾನ್​ ಗುಜರಾತ್​ ತಂಡ ತೊರೆದು ಮುಂಬೈ ಸೇರಿಕೊಳ್ಳಲು ಬಯಸಿದ್ದಾರೆ. ರಶೀದ್​ ಖಾನ್​ ದಣ ಆಫ್ರಿಕಾದ ಎಸ್​ಎ20 ಮತ್ತು ಯುಎಇ ಟಿ20 ಲೀಗ್​ಗಳಲ್ಲಿ ಮುಂಬೈ ಫ್ರಾಂಚೈಸಿಯ ತಂಡಗಳ ಪರವೇ ಆಡುತ್ತಿರುವುದು ಇದಕ್ಕೆ ಕಾರಣ ಎಂದೂ ವರದಿಯಾಗಿದೆ.

ಪಂಜಾಬ್​ ಕಿಂಗ್ಸ್​

ಪಂಜಾಬ್​ ಕಿಂಗ್ಸ್​ ಇಬ್ಬರು ದೇಶೀಯ ಆಟಗಾರರಾದ ಶಶಾಂಕ್​ ಸಿಂಗ್​ ಮತ್ತು ಆಶುತೋಷ್​ರನ್ನು ತಲಾ 4 ಕೋಟಿ ರೂ.ಗಳಿಗೆ ರಿಟೇನ್​ ಮಾಡಿಕೊಳ್ಳಲು ಬಯಸಿದೆ. ಉಳಿದಂತೆ ವೇಗಿ ಅರ್ಷದೀಪ್​ ಸಿಂಗ್​ರನ್ನು ರಿಟೇನ್​ ಮಾಡಿಕೊಳ್ಳಲು ಬಯಸಿದ್ದರೂ, ಅವರಿಗಾಗಿ 18 ಕೋಟಿ ರೂ. ವ್ಯಯಿಸಲು ಸಿದ್ಧವಿಲ್ಲ. ಹೀಗಾಗಿ ಹರಾಜಿನಲ್ಲಿ ರೈಟ್​ ಟು ಮ್ಯಾಚ್​ (ಆರ್​ಟಿಎಂ) ಮೂಲಕ ಅರ್ಷದೀಪ್​ರನ್ನು ಉಳಿಸಿಕೊಳ್ಳಲು ಪ್ರಯತ್ನಿಸಲಿದೆ ಎನ್ನಲಾಗಿದೆ.

ರಾಜಸ್ಥಾನ ರಾಯಲ್ಸ್​

ಸಂಜು ಸ್ಯಾಮ್ಸನ್​ (18 ಕೋಟಿ ರೂ.), ಯಶಸ್ವಿ ಜೈಸ್ವಾಲ್​ (14 ಕೋಟಿ ರೂ.) ಮತ್ತು ರಿಯಾನ್​ ಪರಾಗ್​ (11 ಕೋಟಿ ರೂ.) ರಾಜಸ್ಥಾನ ರಿಟೇನ್​ ಮಾಡಿಕೊಳ್ಳಲು ಬಯಸಿರುವ ಮೂವರು ಆಟಗಾರರು. ಇದರೊಂದಿಗೆ ಸಂದೀಪ್​ ಶರ್ಮರನ್ನು (4 ಕೋಟಿ ರೂ.) ಅನ್​ಕ್ಯಾಪ್ಡ್​ ಆಗಿ ರಿಟೇನ್​ ಮಾಡಿಕೊಳ್ಳಲಿದೆ. ಸಂದೀಪ್​ ಭಾರತ ಪರ ಆಡಿದ್ದು, ನಿವೃತ್ತಿಯನ್ನೂ ಹೊಂದಿಲ್ಲ. ಆದರೆ ಅವರು ಭಾರತ ಪರ ಆಡಿ 9 ವರ್ಷಗಳೇ ಕಳೆದಿವೆ. ಹೀಗಾಗಿ ಅವರೀಗ ಅನ್​ಕ್ಯಾಪ್ಡ್​ ಎನಿಸಿದ್ದಾರೆ. ಇನ್ನು ಜೋಸ್​ ಬಟ್ಲರ್​ರನ್ನು ಆರ್​ಟಿಎಂ ಮೂಲಕ ರಿಟೇನ್​ ಮಾಡಿಕೊಳ್ಳುವ ಯೋಜನೆ ಹಾಕಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net