

ನವದೆಹಲಿ: ದೇಶದಲ್ಲಿನ ಕೋವಿಡ್ ಪರಿಸ್ಥಿತಿ ಕುರಿತು ಶುಕ್ರವಾರ ಸುದ್ದಿಗೋಷ್ಠಿ ಕರೆದು ಮಾತನಾಡಿದ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್, ಮಹತ್ವಪೂರ್ಣ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ದೇಶದಲ್ಲಿ ಎರಡನೇ ಅಲೆ ಇನ್ನೂ ಸಂಪೂರ್ಣವಾಗಿ ತೊಲಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿರುವ ಅವರು, ದೇಶದ ಜನತೆ ಕೋವಿಡ್ ಕುರಿತು ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕಾಗಿರುವ ಅಗತ್ಯವನ್ನು ವಿವರಿಸಿದ್ದಾರೆ.
ಕಳೆದೊಂದು ವಾರದಲ್ಲಿ ದೇಶದಲ್ಲಿನ ಕೋವಿಡ್-19 ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಶೇ. 8 ಇಳಿಕೆ ಕಂಡಿದ್ದರೂ, ಎಲ್ಲೆಡೆ ವೈರಸ್ ಹಾವಳಿ ಇನ್ನೂ ಇರುವುದರಿಂದ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸದೆ ನಿರ್ಲಕ್ಷ ವಹಿಸುವಂತಿಲ್ಲ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.
ಇನ್ನು ಕಳೆದ ಒಂದು ವಾರದಲ್ಲಿ ದೇಶದಲ್ಲಿನ ಒಟ್ಟು ಕೋವಿಡ್ ಪ್ರಕರಣಗಳ ಪೈಕಿ ಅರ್ಧದಷ್ಟು ಪ್ರಕರಣ ಎರಡೇ ರಾಜ್ಯಗಳಲ್ಲಿ ಕಂಡುಬಂದಿದೆ. ಒಟ್ಟು ಪ್ರಕರಣಗಳ ಪೈಕಿ ಶೇ. 32 ಕೇರಳ ಹಾಗೂ ಶೇ. 21ರಷ್ಟು ಪ್ರಕರಣ ಮಹಾರಾಷ್ಟ್ರದಲ್ಲಿ ಕಂಡುಬಂದಿವೆ. ಅದರಲ್ಲೂ ಕೇರಳದ 14 ಹಾಗೂ ಮಹಾರಾಷ್ಟ್ರದ 15 ಜಿಲ್ಲೆಗಳಲ್ಲಿ ಹೆಚ್ಚಿನ ನಿಗಾ ವಹಿಸಬೇಕಾಗಿದೆ ಎಂಬುದನ್ನೂ ಹೇಳಿದ್ದಾರೆ. ಇನ್ನು ಕೇರಳ-ಮಹಾರಾಷ್ಟ್ರ ರಾಜ್ಯಗಳಲ್ಲಿ ಅತಿಹೆಚ್ಚಿನ ಕೋವಿಡ್ ಪ್ರಕರಣ ಕಂಡುಬಂದಿರುವುದರಿಂದ ಗಡಿ ಹಂಚಿಕೊಂಡಿರುವ ಕರ್ನಾಟಕವೂ ಆತಂಕ ಪಡುವಂತಾಗಿದೆ ಎನ್ನಲಾಗಿದೆ.
ಶುಕ್ರವಾರದ ಬುಲೆಟಿನ್ ಪ್ರಕಾರ ದೇಶದಲ್ಲಿ ಹೊಸದಾಗಿ 43,393 ಕೋವಿಡ್-19 ಪಾಸಿಟಿವ್ ಪ್ರಕರಣಗಳು ಕಳೆದ 24 ಗಂಟೆಗಳಲ್ಲಿ ದೃಢಪಟ್ಟಿದ್ದು, ಇದುವರೆಗಿನ ಒಟ್ಟು ಪ್ರಕರಣಗಳ ಸಂಖ್ಯೆ 3,07,52,950ಕ್ಕೆ ತಲುಪಿದೆ. ಇನ್ನು ಕೋವಿಡ್ ದೈನಂದಿನ ಪ್ರಕರಣಗಳ ಪೈಕಿ ಟಾಪ್-5 ರಾಜ್ಯಗಳಲ್ಲಿ ಕೇರಳ (13,772 ), ಮಹಾರಾಷ್ಟ್ರ (9,083), ತಮಿಳುನಾಡು (3,211 ), ಆಂಧ್ರಪ್ರದೇಶ (2,982) ಮತ್ತು ಅಸ್ಸಾಮ್ (2,644) ಇವೆ. (ಏಜೆನ್ಸೀಸ್)