ಮಲೆನಾಡಿನ ಮಂಗಗಳಿಗಿನ್ನು ದ್ವೀಪವಾಸ!

Monkey 7 jUn e 20
Published on

| ದ್ವಾರಕಾನಾಥ್ ಎಲ್. ಬೆಂಗಳೂರು

ಜುರಾಸಿಕ್ ಪಾರ್ಕ್ ಸಿನಿಮಾದಲ್ಲಿ ಡೈನೋಸಾರಸ್​ಗಳಿಗೇ ಸೀಮಿತವಾಗಿ ಪ್ರತ್ಯೇಕ ಪ್ರಪಂಚವಿದ್ದಂತೆ ಮಲೆನಾಡಿನ ಮಂಗಗಳಿಗೂ ಶೀಘ್ರದಲ್ಲೇ ಪ್ರತ್ಯೇಕ ‘ದ್ವೀಪ’ವಾಸದ ಅವಕಾಶ ಸಿಗುವ ಸಾಧ್ಯತೆ ಇದೆ. ಶಿವಮೊಗ್ಗ ಜಿಲ್ಲೆಯಲ್ಲಿ ಮಂಗಗಳ ಉಪಟಳ ತಪ್ಪಿಸುವ ಸಲುವಾಗಿ ಹಾಗೂ ವನ್ಯಜೀವಿಗಳಿಗೆ ಪೂರಕ ವಾತಾವರಣ ಕಲ್ಪಿಸುವುದಕ್ಕಾಗಿ ಅರಣ್ಯ ಇಲಾಖೆ ಹೊಸ ಯೋಜನೆ ಜಾರಿಗೊಳಿಸಲು ಮುಂದಾಗಿದೆ.

ಮಂಗಗಳನ್ನು ಸೆರೆಹಿಡಿದು ಶರಾವತಿ ಹಿನ್ನೀರಿನ ಕಾರ್ಗಲ್ ತಲಕಳಲೆ ಅಣೆಕಟ್ಟೆಯ ದಡಕ್ಕೆ ಸ್ಥಳಾಂತರಗೊಳಿಸಲು ಯೋಜನೆ ರೂಪಿಸಿದೆ. ಈಗಾಗಲೇ ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ, ಹೊಸನಗರ, ಶಿಕಾರಿಪುರ ಮತ್ತು ತೀರ್ಥಹಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಂಗಗಳ ಹಾವಳಿಯಿಂದ ರೈತರಿಗೆ ಸಮಸ್ಯೆ ಆಗುತ್ತಿದೆ. ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳ ಬಳಿ ಸಮಸ್ಯೆ ಬಗೆಹರಿಸುವಂತೆ ಮನವಿ ಸಲ್ಲಿಸಿದ್ದು, ಜನಪ್ರತಿನಿಧಿಗಳು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಎರಡು ಸುತ್ತಿನ ಸಭೆ ನಡೆಸಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ಸಲ್ಲಿಸಲು ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲೇ 1 ಲಕ್ಷಕ್ಕೂ ಅಧಿಕ ಮಂಗಗಳಿವೆ ಎಂದು ಅಂದಾಜಿಸಲಾಗಿದೆ. ಅವುಗಳನ್ನು ಬಿಡಲು ಹೊಸನಗರ ಬಳಿಯ ‘ನಾಗೋಡಿ’ ಎಂಬಲ್ಲಿ 150 ಎಕರೆ ಜಮೀನು ಗುರುತಿಸಲಾಗಿತ್ತು. ಈ ಜಮೀನನ್ನು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಈ ಭಾಗದಲ್ಲಿ ಮಂಗಗಳನ್ನು ಬಿಟ್ಟಲ್ಲಿ ಅವು ಮತ್ತೆ ನಾಡಿಗೆ ಬರಲಿವೆ. ಹೀಗಾಗಿ ಶರಾವತಿ ಹಿನ್ನೀರಿನ ದಡದಲ್ಲೇ ಮಂಗಗಳನ್ನು ಸ್ಥಳಾಂತರಗೊಳಿಸುವುದು ಉತ್ತಮ ಎಂಬುದು ಅರಣ್ಯ ಇಲಾಖೆ ಹಿರಿಯ ಅಧಿಕಾರಿಯೊಬ್ಬರ ಅಭಿಪ್ರಾಯ.

ದೆಹಲಿ, ಹಿಮಾಚಲ ಮಾದರಿ

ದೆಹಲಿ ಹೊರವಲಯದಲ್ಲಿದ್ದ ಮಂಗಗಳನ್ನು ಸಮೀಪದ ‘ಅಸೋಲಾ ಭಟ್ಟಿ ವನ್ಯಜೀವಿ ಧಾಮ’ದಲ್ಲಿ ತಂದು ಬಿಡಲಾಗಿತ್ತು. ಅದೇ ರೀತಿ ಹಿಮಾಚಲ ಪ್ರದೇಶದ ಮಂಗಗಳನ್ನು ಶಿಮ್ಲಾದ ಮಂಕಿ ಪಾರ್ಕ್​ಗೆ ಸ್ಥಳಾಂತರಿಸಲಾಗಿತ್ತು. ಇಲಾಖೆಯ ಈ ನಿರ್ಧಾರಕ್ಕೆ ಈ ಎರಡೂ ರಾಜ್ಯಗಳ ಮಾದರಿ ಪ್ರಯೋಗಗಳು ಪ್ರೇರಣೆಯಾಗಿವೆ.

50 ಎಕರೆಯ ದಟ್ಟ ಕಾನನದ ಪ್ರದೇಶ

ಶರಾವತಿ ಹಿನ್ನೀರಿನ ಕಾರ್ಗಲ್ ಸಮೀಪವಿರುವ ತಲಕಳಲೆ ಅಣೆಕಟ್ಟೆ ಬಳಿ ಸುಮಾರು 50 ಎಕರೆ ಭೂಭಾಗವನ್ನು ಹೊಂದಿರುವ ಮೂರು ದ್ವೀಪಗಳಿವೆ. ರಸ್ತೆಯಿಂದ 300 ಮೀಟರ್ ದೂರದಲ್ಲಿರುವ ಈ ದ್ವೀಪಗಳಲ್ಲಿ ದಟ್ಟವಾಗಿ ಮರಗಳು ಬೆಳೆದಿದ್ದು ಮಂಗಗಳ ವಾಸಕ್ಕೆ ಸೂಕ್ತ ಪ್ರದೇಶವಾಗಿದೆ. ಅಲ್ಲದೆ ಅವುಗಳನ್ನು ಅಲ್ಲಿ ಬಿಟ್ಟರೂ ಹೊರಬರಲು ಸಾಧ್ಯವಿಲ್ಲ. ಹಾಗಾಗಿ ಈ ಪ್ರದೇಶಕ್ಕೆ ಮಂಗಗಳನ್ನು ಬಿಡಲು ಗುರುತಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಿತ್ಯ ಆಹಾರ ಪೂರೈಕೆ

ದ್ವೀಪಗಳಲ್ಲಿ ಹಣ್ಣಿನ ಮರಗಳು ಕಡಿಮೆ ಇರುವುದರಿಂದ ಮಂಗಗಳಿಗೆ ಅಗತ್ಯ ಹಣ್ಣು, ತರಕಾರಿ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ಹಣ್ಣು ಮತ್ತು ತರಕಾರಿ ಪೂರೈಕೆಗಾಗಿ ಗುತ್ತಿಗೆ ನೀಡಿ ಸಂಚರಿಸಲು ಬೋಟ್ ವ್ಯವಸ್ಥೆ ಮಾಡುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ವನ್ಯಜೀವಿ ಗಳಿಗೆ ಪೂರಕ ವಾತಾವರಣವನ್ನು ಕಲ್ಪಿಸುವುದಕ್ಕಾಗಿ ಇಲಾಖೆಯಿಂದ ಹಲವು ಪ್ರಯೋಗಾತ್ಮಕ ಚಿಂತನೆ ನಡೆಸಲಾಗುತ್ತಿದೆ. | ಸುಭಾಷ್ ಮಲ್ಖೆಡೆ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ವನ್ಯಜೀವಿ ವಿಭಾಗ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net