

ಬೆಂಗಳೂರು: ಕರೊನಾ ವೈರಸ್ ಸೋಂಕಿನಿಂದ ಗುಣಮುಖರಾಗಿ ಬಂದಿದ್ದೇನೆ ಎನ್ನುವುದನ್ನೂ ಮರೆತು ಕರೊನಾ ಹಾಟ್ಸ್ಪಾಟ್ ಬೆಂಗಳೂರಿನ ಪಾದರಾಯನಪುರದ ಬೀದಿಗಳಲ್ಲಿ ರೋಡ್ ಷೋ ಮಾಡುವ ಮೂಲಕ ಲಾಕ್ಡೌನ್ ನಿಯಮವನ್ನು ಗಾಳಿಗೆ ತೂರಿದ ಪಾದರಾಯನಪುರದ ಕಾರ್ಪೋರೇಟರ್ ಇಮ್ರಾನ್ ಪಾಷಾರನ್ನು ಪೊಲೀಸರು ಬಂಧಿಸಿದ್ದಾರೆ.
ಕರೊನಾ ವೈರಸ್ನಿಂದ ಗುಣಮುಖರಾದವರು ಕಡ್ಡಾಯವಾಗಿ ಹೋಂ ಕ್ವಾರಂಟೈನ್ನಲ್ಲಿ ಇರಬೇಕು. ಅದರೆ ಅದನ್ನು ಬಿಟ್ಟು ಪಾಷಾ ವೈರಸ್ನಿಂದ ಗುಣಮುಖರಾಗಿ ವಾಪಸ್ ಆಗುತ್ತಿದ್ದಂತೆಯೇ ಪಾದರಾಯನಪುರದಲ್ಲಿ ರೋಡ್ ಷೋ ನಡೆಸಿದರು. ಮೊದಲಿಗೆ ಡಾ. ರಾಜ್ಕುಮಾರ್ ಪ್ರತಿಮೆಗೆ ಮಾಲಾರ್ಪಣೆ ಹಾಕಿ ಷೋ ಆರಂಭಿಸಿದ ಮೇಲೆ ಪಾಷಾ ಅಭಿಮಾನಿಗಳು ಶಾಲು ಹೊದಿಸಿ ಹೂವಿನ ಹಾರ ಹಾಕಿ ಸ್ವಾಗತಿಸಿದರು. ತಮ್ಮ ನೆಚ್ಚಿನ ನಾಯಕನ ಮೇಲೆ ಹೂವನ್ನು ಎಸೆದು ಅಭಿಮಾನ ತೋರಿಸಿದರು.
ಇದನ್ನೂ ಓದಿ: ಕ್ವಾರಂಟೈನ್ ಆಗಲ್ಲ ಎನ್ನುತ್ತಿದ್ದ ಕಾರ್ಪೋರೇಟರ್ ಕೊನೆಗೂ ಆಸ್ಪತ್ರೆಗೆ ರವಾನೆ
ಕರೊನಾ ಕೂಪವಾಗಿರುವ ಪಾದರಾಯನಪುರದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಇಮ್ರಾನ್ ಪಾಷಾ ಅಭಿಮಾನಿಗಳು ಜೈಕಾರ ಕೂಗುತ್ತಾ ಪಟಾಕಿ ಸಿಡಿಸುತ್ತಾ. ಅನುಮತಿ ಇಲ್ಲದೆ ರೋಡ್ ಷೋ ನಡೆಸಿದ್ದಾರೆ. ಮಾಸ್ಕ್ ಕೂಡ ಹಾಕದೇ ಬೇಜವಬ್ದಾರಿ ತೋರಿದ್ದಾರೆ ಎಂದಿರುವ ಪೊಲೀಸರು ಇಮ್ರಾನ್ ಪಾಷಾರನ್ನು ತರಾಟೆಗೆ ತೆಗೆದುಕೊಳ್ಳುವ ಮೂಲಕ ರೋಡ್ ಷೋಗೆ ಬ್ರೇಕ್ ಹಾಕಿದ್ದಾರೆ.
ಇದೇ ವೇಳೆ ಅವರ ಹಿಂದೆ 150ಕ್ಕೂ ಹೆಚ್ಚು ಬೈಕ್ಗಳಲ್ಲಿ ತೆರಳುತ್ತಿದ್ದ ಅಭಿಮಾನಿಗಳನ್ನು ರಸ್ತೆಯಲ್ಲೇ ತಡೆದ ಜೆಜೆ ನಗರ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಖಡಕ್ ವಾರ್ನಿಂಗ್ ಕೊಟ್ಟರು.
ಕೂಡಲೇ ಪಾಷಾರನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಾಯ್ದೆ ಅಡಿ ಬಂಧಿಸಿರುವ ಪೊಲೀಸರು ವಿಕ್ಟೋರಿಯಾ ಜೈಲು ವಾರ್ಡ್ಗೆ ಪಾಷಾರನ್ನು ಶಿಫ್ಟ್ ಮಾಡಿದ್ದಾರೆ. ಪಾದರಾಯನಪುರದಲ್ಲಿ ಕೆಎಸ್ಆರ್ಪಿ ತುಕಡಿ ನಿಯೋಜನೆ ಮಾಡಲಾಗಿದೆ.
ಕೊರೋನಾ ವೈರಸ್ಗೆ ತುತ್ತಾಗಿದ್ದ ಇಮ್ರಾನ್ ಪಾಷಾ ಅವರನ್ನು 7 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗಲೂ ಇದೇ ರೀತಿ ಅಭಿಮಾನಿಗಳು ಕಿಕ್ಕಿರಿದು ತುಂಬಿ ಲಾಕ್ಡೌನ್ ನಿಯಮ ಮೀರಿದ್ದರು.
ಜಮೀರ್ ಗರಂ: ಇಮ್ರಾನ್ ಪಾಷಾ ನಡೆಗೆ ಶಾಸಕ ಜಮೀರ್ ಅಹಮ್ಮದ್ ಖಾನ್ ಗರಂ ಆಗಿದ್ದಾರೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಜಮೀರ್ ಅಹಮ್ಮದ್ ಖಾನ್, ರಾಜ್ಯಕ್ಕೆ ರಾಜ್ಯವೇ ಕರೊನಾದಿಂದ ಕಂಗಾಲಾಗಿದೆ, ಇಂತಹ ಸಂದಿಗ್ಧ ಸಮಯದಲ್ಲಿ ಜನರನ್ನು ಗುಂಪುಗೂಡಿಸಿ ಮೆರವಣಿಗೆ ಮಾಡುವುದು ಬೇಜವಾಬ್ದಾರಿಯ ನಡವಳಿಕೆಯಾಗುತ್ತದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜನರಿಗೆ ತಿಳಿಹೇಳಬೇಕಾದವರೆ ಈ ರೀತಿ ವರ್ತಿಸಿದರೆ ಹೇಗೆ ಎಂದು ಟ್ವೀಟ್ ಮಾಡಿದ್ದಾರೆ.