ಹವಾಲಾ ಮಾದರಿಯಲ್ಲಿ ಚುನಾವಣೆಗೆ ಹಣ ಹಂಚಿಕೆ, ಇಬ್ಬರ ಮೇಲೆ ಎಫ್​ಐಆರ್​

Hawala
ಸಾಂದರ್ಭಿಕ ಚಿತ್ರ
Published on

ಬೆಂಗಳೂರು: ಚುನಾವಣೆಗೆ ಹಣ ಹಂಚಲು ಹವಾಲಾ ಮಾದರಿಯನ್ನು ಅಭ್ಯರ್ಥಿಯೊಬ್ಬರ ಬೆಂಬಲಿಗರು ಕಂಡುಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದ್ದು, ಈ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಕ್ಷೇತರ ಅಭ್ಯರ್ಥಿ ಕೃಷ್ಣಯ್ಯಶೆಟ್ಟಿ ಬೆಂಬಲಿಗರಾದ ಚಂದ್ರಶೇಖರ್, ವೆಂಕಟೇಶ್ ಹಾಗೂ ವಸಂತ್ ಕುಮಾರ್ ಎಂಬುವರ ಮೇಲೆ ಎಫ್​ಐಆರ್ ದಾಖಲಾಗಿದೆ. ಆರೋಪಿಗಳಿಂದ 20 ರೂ. ಮುಖಬೆಲೆಯ ಆರು ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳು ಕಬ್ಬನ್‌ಪೇಟೆ ಸುತ್ತಮುತ್ತ ಹಣ ಹಂಚಲು ಹವಾಲಾ ಮಾದರಿಯನ್ನು ಅನುಸರಿಸಿರುವುದು ಬೆಳಕಿಗೆ ಬಂದಿದೆ. ಗಾಂಧಿನಗರ ಪಕ್ಷೇತರ ಅಭ್ಯರ್ಥಿಯಾಗಿದ್ದ ಕೃಷ್ಣಯ್ಯ ಶೆಟ್ಟಿ ಅವರಿಗೆ ಮತ ಹಾಕುವಂತೆ ಹೇಳಿ ಮೇ 8ರಂದು ಮಧ್ಯಾಹ್ನ 1.30ರ ವೇಳೆ 20 ರೂ. ಮುಖಬೆಲೆಯ ನೋಟನ್ನು ಮತದಾರರಿಗೆ ಕೊಟ್ಟು, ಈ ನೋಟನ್ನು ನಾವು ಹೇಳಿದ ಸ್ಥಳಕ್ಕೆ ಮತ್ತು ವ್ಯಕ್ತಿಗೆ ಸಂಜೆ ಹೋಗಿ ತೋರಿಸಿದರೆ 2000 ರೂ. ನಗದು ಅಥವಾ ಉಡುಗೊರೆಯನ್ನು ಅವರು ಕೊಡುವುದಾಗಿ ಆರೋಪಿಗಳು ತಿಳಿಸಿ ಮತದಾರರಿಗೆ ಆಮಿಷವೊಡ್ಡಿದ್ದರು.

ಈ ಬಗ್ಗೆ ಮತದಾರರೊಬ್ಬರು ನಿಯಂತ್ರಣ ಕೊಠಡಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಆ ಮಾಹಿತಿಯನ್ನು ಆಧರಿಸಿ ಫ್ಲೈಯಿಂಗ್​ ಸ್ಕ್ವಾಡ್ ಅಧಿಕಾರಿ ರವಿಕುಮಾರ್ ಕಬ್ಬನ್‌ಪೇಟೆ 19ನೇ ಕ್ರಾಸ್‌ಗೆ ತೆರಳಿ ಹಣ ಹಂಚಲು ಬಂದಿದ್ದ ಚಂದ್ರಶೇಖರ್, ವೆಂಕಟೇಶ್, ವಸಂತಕುಮಾರ್ ಎಂಬ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಾವು ಕೃಷ್ಣಯ್ಯ ಶೆಟ್ಟಿ ಪರವಾಗಿ ಮತ ಕೇಳಲು ಬಂದಿರುವುದಾಗಿ ಒಪ್ಪಿಕೊಂಡಿದ್ದರು.

ನಂತರ ಫ್ಲೈಯಿಂಗ್​ ಸ್ಕ್ವಾಡ್ ಅಧಿಕಾರಿ ರವಿಕುಮಾರ್ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದ ಕೃಷ್ಣಯ್ಯ ಶೆಟ್ಟಿ ಅವರಿಗೆ ಓಟು ಹಾಕುವಂತೆ ಮತದಾರರಿಗೆ ಆಮಿಷವೊಡ್ಡಿರುವ ಆರೋಪಿಗಳ ವಿರುದ್ದ ಸೂಕ್ತ ಕ್ರಮಕೈಗೊಳ್ಳುವಂತೆ ಹಲಸೂರು ಗೇಟ್ ಠಾಣೆಗೆ ದೂರು ನೀಡಿದ್ದರು. ಮೊದಲು ಎನ್‌ಸಿಆರ್ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕೋರ್ಟ್‌ನ ಅನುಮತಿ ಪಡೆದು ಬಳಿಕ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಆರೋಪಿಗಳಿಂದ 93ಎನ್‌ಎ110201, 202, 203, 204, 205, 206 ಸೀರಿಯಲ್ ನಂಬರ್ ಇರುವ ೨೦ ರೂ. ಮುಖಬೆಲೆಯ ನೋಟುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಏನಿದು ಹವಾಲಾ ದಂಧೆ?

ದೊಡ್ಡ ಮಟ್ಟದ ಹಣವನ್ನು ಒಂದು ಕಡೆಯಿಂದ ಇನ್ನೊಂದು ಕಡೆ ಸಾಗಿಸಲು ಹವಾಲ್ದಾರಿ ಇದೆ. ಇದರಲ್ಲಿ ಅರ್ಧ ಅಥವಾ ಒಂದು ನೋಟನ್ನು ತಾವು ಹೇಳಿದ ವ್ಯಕ್ತಿಗಳಿಗೆ ತೋರಿಸಬೇಕು. ಆ ನೋಟ್‌ಗಳಲ್ಲಿ ಇರುವ ನಂಬರ್‌ಗಳು ಮ್ಯಾಚ್ ಆದರೆ ಅವರಿಗೆ ಹಣ ಸಿಗುತ್ತದೆ. ಈ ದಂಧೆಗೆ ಹವಾಲಾ ದಂಧೆ ಅಂತ ಕರೆಯುತ್ತಾರೆ. ಈ ಮಾದರಿಯನ್ನು ಆರೋಪಿಗಳು ಚುನಾವಣೆಗೆ ಹಣ ಹಂಚಲು ಬಳಸಿಕೊಂಡಿರುವುದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net