ಕಂಟೇನರ್​ನಲ್ಲಿ ಕೊಡ್ತಾರಾ ಕರೊನಾ ರೋಗಿಗಳಿಗೆ ಚಿಕಿತ್ಸೆ? ಹೇಗಿರುತ್ತೆ ಮಾಡ್ಯೂಲರ್​ ಐಸಿಯು

mobile ICU (1)
Published on

ಬೆಂಗಳೂರು: ರೈಲ್ವೆ ಕೋಚ್​ಗಳನ್ನು ಐಸೋಲೇಷನ್​ ವಾರ್ಡ್​ಗಳಾಗಿ ಮಾರ್ಪಡಿಸಿದ ಬೆನ್ನಲ್ಲೇ, ಖಾಸಗಿ ಕಂಪನಿಯೊಂದು ಮೊಬೈಲ್​ ಐಸಿಯುಗಳನ್ನು ಅಭಿವೃದ್ಧಿಪಡಿಸಿದೆ.

ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ ಹಾಸಿಗೆಗಳ ಕೊರತೆ ಆಗದಂತೆ ಸರ್ಕಾರ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದೆ. ಇದರ ನಡುವೆಯೇ, ಖಾಸಗಿ ಕಂಪನಿಯೊಂದು ಎಲ್ಲಿಗೆ ಬೇಕಾದರೂ ಸಾಗಿಸಿ ಬಳಸಬಹುದಾದ ’ಮಾಡ್ಯೂಲರ್ ಐಸಿಯು’ಗಳನ್ನು ಅಭಿವೃದ್ಧಿಪಡಿಸಿದೆ. ಇದನ್ನು ’ಮೊಬೈಲ್ ಐಸಿಯು’ಗಳೆಂದೂ ಕರೆಯಬಹುದು.

ಹಡಗುಗಳಲ್ಲಿ ಸರಕು ಸಾಗಣೆಗೆ ಬಳಸಲಾಗುವ ಬೃಹತ್ ಗಾತ್ರದ ಕಂಟೈನರ್​ಗಳಲ್ಲಿ ಈ ಐಸಿಯುಗಳನ್ನು ರೂಪಿಸಲಾಗಿದೆ. ರಾಜಧಾನಿಯ ಕೋವಿಡ್ ಕೇರ್ ಕೇಂದ್ರಗಳ ಉಸ್ತುವಾರಿಯೂ ಆಗಿರುವ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಶನಿವಾರ ಇವುಗಳ ಪರಿಶೀಲನೆ ಮಾಡಿದರು. ಶಸ್ತ್ರಚಿಕಿತ್ಸಾ ಘಟಕ ಹಾಗೂ ಕ್ಲೀನ್ ರೂಮುಗಳನ್ನು ಅಭಿವೃದ್ಧಿಪಡಿಸುವಲ್ಲಿ ಹೆಸರಾಗಿರುವ ಬೆಂಗಳೂರು ಮೂಲದ ರಿನ್ಯಾಕ್ ಎಂಬ ಕಂಪನಿ ಇವುಗಳನ್ನು ತಯಾರಿಸಿದೆ.

ವಿನೂತನ ಪ್ರಯೋಗ ಎಂದ ಡಿಸಿಎಂ: ದೇಶದಲ್ಲೇ ಮೊತ್ತಮೊದಲ ಬಾರಿಗೆ ಇಂಥ ತುರ್ತು ಚಿಕಿತ್ಸಾ ಘಟಕಗಳನ್ನು ರಾಜ್ಯದಲ್ಲಿ ಸಿದ್ಧಪಡಿಸಲಾಗಿದೆ. ನಮ್ಮ ಸಂಶೋಧಕರು, ತಜ್ಞರ ಸೃಜನಶೀಲತೆಗೆ ಇದೊಂದು ಉತ್ತಮ ಉದಾಹರಣೆ. ಪ್ರಸಕ್ತ ಕಾಲದ ಅಗತ್ಯಕ್ಕೆ ತಕ್ಕಂತೆ ಇವುಗಳನ್ನು ಅತ್ಯಾಧುನಿಕವಾಗಿ ರೂಪಿಸಲಾಗಿದೆ. ಗುಣಮಟ್ಟಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಹಾಗೂ ಬಳಸಲಾಗಿರುವ ಎಲ್ಲ ಉಪಕರಣಗಳು ಉತ್ತಮವಾಗಿವೆ ಎಂದು ಡಿಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು.

ಕೆಸಿಜೆಗೆ 10 ಕಂಟೈನರ್: ಪ್ರಾಯೋಗಿಕವಾಗಿ ಮಲ್ಲೇಶ್ವರದ ಕೆ.ಸಿ. ಜನರಲ್ ಆಸ್ಪತ್ರೆಗೆ ಇಂಥ ಹತ್ತು ಕಂಟೈನರ್​ಗಳನ್ನು ಒದಗಿಸಲಾಗುವುದು. ಅಲ್ಲಿನ ವೈದ್ಯರೇ ಇವುಗಳಲ್ಲಿ ದಾಖಲಾಗುವ ರೋಗಿಗಳಿಗೆ ಚಿಕಿತ್ಸೆ ನೀಡುವರು. ಪ್ರತಿ ಕಂಟೈನರಲ್ಲಿ 5 ಹಾಸಿಗೆಗಳು ಇರುತ್ತವೆ. ರಿನ್ಯಾಕ್ ಕಂಪನಿ ತನ್ನದೇ ವೆಚ್ಚದಲ್ಲಿ ಸರ್ಕಾರಕ್ಕೆಂದೇ ಇವುಗಳನ್ನು ತಯಾರಿಸಿ ಕೊಟ್ಟಿದೆ. ಕೋವಿಡ್ ನಂತರವೂ ಅಗತ್ಯಕ್ಕೆ ತಕ್ಕಂತೆ ಬಳಸಬಹುದು. ತುರ್ತು ಸಂದರ್ಭಗಳು, ಅದರಲ್ಲೂ ನೈಸರ್ಗಿಕ ವಿಕೋಪದಂಥ ದುರಂತಗಳು ಎದುರಾದಾಗ ಇಂಥ ಐಸಿಯುಗಳು ಹೆಚ್ಚು ಪರಿಣಾಮಕಾರಿ. ಕೇವಲ 10ರಿಂದ 15 ದಿನಗಳಲ್ಲಿ ಇಷ್ಟು ಬೆಡ್​ಗಳನ್ನು ಸಿದ್ಧಪಡಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಕಂಟೇನರ್​ನಲ್ಲಿ ಏನೇನಿರುತ್ತದೆ?: ಜಾಗತಿಕ ಗುಣಮಟ್ಟವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮೊಬೈಲ್​ ಐಸಿಯು ಸಿದ್ಧಪಡಿಸಲಾಗಿದೆ. ಆಮ್ಲಜನಕ ವ್ಯವಸ್ಥೆ ಇರುತ್ತದೆ. ಹವಾನಿಯಂತ್ರಕಗಳನ್ನು ಅಳವಡಿಸಲಾಗಿದೆ. ಕ್ಯಾಮರಾ ಕೂಡ ಇದ್ದು, ಆನ್ಲೈನ್ ಚಿಕಿತ್ಸೆ ನೀಡಲು ಬೇಕಾದ ಎಲ್ಲ ಪರಿಕರಗಳನ್ನು ಅಳವಡಿಸಲಾಗಿದೆ. ಪ್ರತಿ ಕಂಟೈನರ್​ಗೆ 5 ಬೆಡ್ ಇದ್ದು, ಅದಕ್ಕೆ ಇನ್ನೊಂದು ಕಂಟೈನರ್ ಸೇರಿದರೆ 10 ಬೆಡ್​ಗಳಾಗುತ್ತವೆ. ಆಗ ಅದನ್ನು ಪ್ರತ್ಯೇಕ ನರ್ಸಿಂಗ್ ಹಾಗೂ ಮಾನಿಟರಿಂಗ್ ಸ್ಟೇಷನ್ ಎಂದು ಪರಿಗಣಿಸಿ ಚಿಕಿತ್ಸೆ ನೀಡುವುದು ಸುಲಭವಾಗುತ್ತದೆ. ಅದು ಪ್ರತ್ಯೇಕವಾಗಿರುತ್ತದೆ. ಎಲ್ಲಿಗೆ ಬೇಕಾದರೂ ಈ ಐಸಿಯುಗಳನ್ನು ಸುಲಭವಾಗಿ ಸಾಗಿಸಿ ಇಡಬಹುದು. ಆಯಾ ಆಸ್ಪತ್ರೆಗಳ ವೈದ್ಯರೇ ಇವುಗಳಲ್ಲಿ ದಾಖಲಾಗಿರುವ ರೋಗಿಗಳಿಗೂ ಚಿಕಿತ್ಸೆ ನೀಡಬಹುದು ಎಂದು ರಿನ್ಯಾಕ್ ಕಂಪನಿ ಅಧಿಕಾರಿಗಳು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net