

ಲಂಡನ್: ಆಕ್ಸ್ಫರ್ಡ್ ವಿಶ್ವವಿದ್ಯಾಲಯವು ಆಸ್ಟ್ರಾಜೆನೆಕಾ ಕಂಪನಿಯೊಂದಿಗೆ ಸೇರಿ ಅಭಿವೃದ್ಧಿಪಡಿಸುತ್ತಿರುವ ಕರೊನಾ ಲಸಿಕೆ ಕೋವಿಡ್ ವಿರುದ್ಧ ಭಾರಿ ಪರಿಣಾಮಕಾರಿಯಾಗಲಿದೆ.
ಕೋವಿಡ್ ರೋಗಿಗಳಲ್ಲಿ ಪ್ರತಿರೋಧ ಶಕ್ತಿ ಉಂಟು ಮಾಡುವುದಲ್ಲದೇ, ವೈರಸ್ಅನ್ನು ಕೊಲ್ಲುವ ಜೀವಕಣಗಳನ್ನು ಉತ್ಪಾದಿಸುತ್ತಿದೆ ಎಂಬುದು ಸಂಶೋಧನೆಯಿಂದ ಗೊತ್ತಾಗಿದೆ. ಹೀಗಾಗಿ ಇದು ಕೋವಿಡ್ ವಿರುದ್ಧ ದುಪ್ಪಟ್ಟು ಸುರಕ್ಷತೆ ನೀಡಲಿದೆ ಎಂದು ತಜ್ಞರು ಹೇಳಿದ್ದಾರೆ.
ಆಕ್ಸ್ಫರ್ಡ್ ವಿವಿ ತಂಡ ಮಾನವರ ಮೇಲೆ ಮೂರನೇ ಹಂತದ ಪ್ರಯೋಗ ನಡೆಸುತ್ತಿದೆ. ಲಸಿಕೆಯ ಮೊದಲ ಹಂತದ ಪರೀಕ್ಷೆ ವರದಿಗಳನ್ನು ಒಂದೆರಡು ದಿನಗಳಲ್ಲಿಯೇ ಪ್ರಕಟಿಸಲಿದೆ. ಇದರ ಪ್ರಕಾರ ಲಸಿಕೆ ಪಡೆದವರ ದೇಹದಲ್ಲಿ ರೋಗ ನಿರೋಧಕ ಶಕ್ತಿಯ ಕಣಗಳು ಉತ್ಪಾದನೆಯಾಗುತ್ತಿವೆ. ಜತೆಗೆ, ವೈರಸ್ಅನ್ನು ಕೊಲ್ಲುವ ಟಿ-ಸೆಲ್ಗಳು ಕೂಡ ಸೃಷ್ಟಿಯಾಗುತ್ತಿವೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಪ್ರತಿರೋಧಕ ಶಕ್ತಿ ಬಹುಕಾಲದವರೆಗೆ ರಕ್ಷಣೆ ನೀಡುವುದಿಲ್ಲ. ಆದರೆ, ಟಿ-ಸೆಲ್ಗಳು ವರ್ಷಗಳ ಕಾಲ ವೈರಸ್ನಿಂದ ಕಾಪಾಡಬಲ್ಲವು. ಆದರೆ, ಇದು ಶಾಶ್ವತವಾಗಿ ಕೋವಿಡ್ನಿಂದ ರಕ್ಷಣೆ ನೀಡಲಿದೆಯೇ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.
ಸೆಪ್ಟಂಬರ್ ವೇಳೆಗೆ ಮಾರುಕಟ್ಟೆಯಲ್ಲಿ ಲಸಿಕೆ ಲಭ್ಯವಾಗುವಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಇಡೀ ತಂಡ ಶ್ರಮಿಸುತ್ತಿದೆ ಎಂದು ವಿವಿ ಅಧಿಕಾರಿಗಳು ಹೇಳಿದ್ದಾರೆ. ಇದಲ್ಲದೇ, ಮಾನವರ ಮೇಲಿನ ಮೊದಲ ಹಂತದ ಪ್ರಯೋಗ ಈಗಾಗಲೇ ಪೂರ್ಣಗೊಂಡಿದ್ದು, ಇದರ ಫಲಿತಾಂಶ ಪ್ರಕಟನೆಗೆ ವಿವಿ ಸಜ್ಜಾಗಿದೆ.