More

    ಕಾಯಕಯೋಗಿ ತತ್ವ, ಸಿದ್ಧಾಂತ ಮೈಗೂಡಿಕೊಳ್ಳಿ

    ಪಿರಿಯಾಪಟ್ಟಣ: ಕಾಯಕಯೋಗಿ ಬಸವಣ್ಣ ಅವರ ತತ್ವ ಮತ್ತು ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಮಾಜಿ ಉಪಾಧ್ಯಕ್ಷ ಎನ್.ಆರ್.ಕಾಂತರಾಜು ತಿಳಿಸಿದರು.

    ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ತಾಲೂಕು ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. 12ನೇ ಶತಮಾನದಲ್ಲಿ ಕಾಯಕವೇ ಕೈಲಾಸ ಎಂಬ ವಚನ ಸಾಹಿತ್ಯದ ಮೂಲಕ ಸಮಾಜಕ್ಕೆ ಪರಿಚಿತರಾಗಿದ್ದ ಮಹಾನ್ ಮಾನವತವಾದಿ ಹಾಗೂ ಸಮಾಜ ಸುಧಾರಕ ಬಸವಣ್ಣ ಅವರು ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರವಾದದ್ದು ಎಂದರು.

    ತಮ್ಮ ವಚನ ಸಾಹಿತ್ಯದ ಮೂಲಕ ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಲಿಂಗ ತಾರತಮ್ಯ ಮತ್ತು ಅಸ್ಪಶ್ಯತೆಯ ಆಚರಣೆಯನ್ನು ವಿರೋಧಿಸಿದ್ದ ಬಸವಣ್ಣ, ಅನುಭವ ಮಂಟಪವನ್ನು ಸ್ಥಾಪಿಸಿ, ವಿವಿಧ ವರ್ಗದ 770 ವಚನ ಸಾಹಿತಿಗಳಿಗೆ ವೇದಿಕೆ ಕಲ್ಪಿಸಿದ್ದರು. 1400ಕ್ಕೂ ಹೆಚ್ಚು ವಚನ ಸಾಹಿತ್ಯಗಳನ್ನು ಬರೆದಿದ್ದ ಬಸವಣ್ಣನವರು ಬೇದಭಾವವಿಲ್ಲದೆ ಸರ್ವರೂ ಸಮಾನರು ಎಂಬ ಪ್ರತಿಪಾದನೆ ಹೊಂದಿದ್ದರು. ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾಗದೆ ಅವರ ತತ್ವಗಳನ್ನು ಪ್ರತಿಯೊಬ್ಬರೂ ಪಾಲಿಸುವಂತೆ ಆಗಬೇಕು ಎಂದು ಹೇಳಿದರು.

    ತಹಸೀಲ್ದಾರ್ ಸುರೇಂದ್ರ ಮೂರ್ತಿ ಮಾತನಾಡಿ, ಸಮಾಜದಲ್ಲಿನ ಅಸ್ಪಶ್ಯತೆಯ ಪಿಡುಗುಗಳನ್ನು ತೊಡೆದು ಹಾಕಲು 12ನೇ ಶತಮಾನದಲ್ಲಿ ಬಸವಣ್ಣ ಹೋರಾಡಿದ್ದಾರೆ. ಆದರೆ ಇಂದಿಗೂ ಅಸ್ಪಶ್ಯತೆಯ ಆಚರಣೆ ಕೆಲವೆಡೆ ಕಂಡು ಬರುತ್ತಿರುವುದು ವಿಷಾದಕರ. ತಮ್ಮ ವಚನ ಸಾಹಿತ್ಯಗಳ ಮೂಲಕ ಸಮಾಜದ ಸುಧಾರಣೆಗೆ ಶ್ರಮವಹಿಸಿದ್ದ ಬಸವಣ್ಣ ಅವರನ್ನು ಒಂದು ಜಾತಿಗೆ ಸೀಮಿತ ಮಾಡದೆ ಪ್ರತಿಯೊಬ್ಬರ ಮನದಲ್ಲೂ ಅವರ ತತ್ವ, ಸಿದ್ಧಾಂತ ರೂಪಿಸಿಕೊಳ್ಳಬೇಕು ಎಂದರು.

    ಉಪ ತಹಸಿಲ್ದಾರ್ ವಿನೋದ್ ಕುಮಾರ್, ಪಶುಸಂಗೋಪನೆ ಇಲಾಖೆ ಅಧಿಕಾರಿ ಡಾ.ಸೋಮಯ್ಯ, ಪುರಸಭಾ ಸದಸ್ಯರಾದ ಎಚ್.ಕೆ.ಮಂಜುನಾಥ್, ನಿರಂಜನ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ನವೀನ್ ಕುಮಾರ್ ಮತ್ತಿತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts