More

    ಸಾಧನೆಯಿಂದ ಸರ್ವರೂ ಸಮಾನರು; ರೇಣುಕ, ಬಸವ, ಶಿವಕುಮಾರ ಸ್ವಾಮೀಜಿ ಜಯಂತಿಯಲ್ಲಿ ಡಾ.ಶಿವಾನಂದ ಸ್ವಾಮೀಜಿ ಅಭಿಮತ

    ಬೆಂಗಳೂರು: ಯಾವುದೇ ಕ್ಷೇತ್ರದಲ್ಲಿನ ಮಹಾತ್ಮರು ತಾವು ಮಾಡಿದ ಸಾಧನೆಯಿಂದ ದೇಶ,ಕಾಲವನ್ನು ಮೀರಿ ಸಮಾನ ಗೌರವ ಪಡೆದುಕೊಳ್ಳುತ್ತಾರೆ ಎಂದು ತುಮಕೂರು ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮಿಗಳು ಅಭಿಪ್ರಾಯಿಸಿದ್ದಾರೆ. ರಾಜಾಜಿನಗರದ ಮಹಾಗಣಪತಿ ಸಭಾಭವನದಲ್ಲಿ ವಿಶ್ವಗುರು ಬಸವ ಸಮಿತಿ ಆಯೋಜಿಸಿದ್ದ ಶ್ರೀಜಗದ್ಗುರು ರೇಣುಕಾಚಾರ್ಯ ಜಯಂತಿ, ಶ್ರೀಜಗಜ್ಯೋತಿ ಬಸವೇಶ್ವರ ಜಯಂತಿ, ಶ್ರೀಶಿವಕುಮಾರ ಸ್ವಾಮಿಗಳ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

    ಶ್ರೀಜಗದ್ಗುರು ರೇಣುಕಾಚಾರ್ಯರು, ಜಗಜ್ಯೋತಿ ಬಸವೇಶ್ವರರ, ಸಿದ್ಧಗಂಗೆಯ ಶ್ರೀಶಿವಕುಮಾರಸ್ವಾಮಿಗಳ ಕಾಲ, ಸ್ಥಳ ಇತ್ಯಾದಿ ಭೇದಗಳಿದ್ದರೂ ಅವರೆಲ್ಲರು ಜಗತ್ತಿಗೆ ನೀಡಿದ ತತ್ವಸಂದೇಶಗಳು ಒಂದೇ ಆಗಿವೆ. ಸಮಾಜದ ಶ್ರೇಯೋಭಿವೃದ್ಧಿ, ಧಾರ್ಮಿಕ ಜಾಗೃತಿ, ಸಾಮಾಜಿಕ ಕ್ರಾಂತಿಯನ್ನು ಇರಿಸಿಕೊಂಡು ಸಾಧನೆ ಮಾಡಿದ ಮಹಾನ್ ವ್ಯಕ್ತಿಗಳು ತಮ್ಮ ಸಾಧನೆಯ ಕಾರಣಕ್ಕೆ ಸಮಾನ ಗೌರವಕ್ಕೆ ಪಾತ್ರರಾಗುತ್ತಾರೆ.

    ಯಾವುದೇ ಸಿದ್ಧಾಂತ, ಧರ್ಮದ ವಿಷಯದಲ್ಲಿ ಉಗಮ, ಉತ್ಥಾನ ಮತ್ತು ಪುನುರುತ್ಥಾನ ಎಂಬ ಮೂರು ಹಂತಗಳಿರುತ್ತವೆ. ವೀರಶೈವ ಧರ್ಮದ ವಿಷಯದಲ್ಲೂ ಕೂಡಾ ಜಗದ್ಗುರು ರೇಣುಕಾದಿ ಪಂಚಾಚಾರ್ಯರು ಉಗಮಕ್ಕೆ ಕಾರಣೀಭೂತರಾದರೆ; ಆ ತತ್ವಸಿದ್ಧಾಂತದ ಅಡಿಯಲ್ಲಿ ಬಸವಾದಿ ಶರಣರು ಉತ್ಥಾನ ಕಾರ್ಯ ಮಾಡಿರುವುದು ಕಂಡು ಬರುತ್ತದೆ. ಇತ್ತೀಚಿನ ದಿನಗಳಲ್ಲಿ ಶರಣರ ಆಶಯಗಳಿಗೆ ಅನುಗುಣವಾಗಿ ಪುನುರುತ್ಥಾನದ ಮೂಲಕ ವಿಶ್ವಮಾನ್ಯತೆಯನ್ನು ತಂದುಕೊಟ್ಟ ಕೀರ್ತಿ ಸಿದ್ಧಗಂಗೆಯ ಶಿವಕುಮಾರ ಸ್ವಾಮಿಗಳು ಮತ್ತಿತರ ವಿಭೂತಿಪುರುಷರಿಗೆ ಸಲ್ಲುತ್ತದೆ ಎಂದು ಶ್ರೀಗಳು ತಿಳಿಸಿದರು.

    ಸಮಾರಂಭದಲ್ಲಿ ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಬಿ.ಎಸ್.ಪರಮಶಿವಯ್ಯ, ವಿಶ್ವಗುರು ಬಸವ ಸಮಿತಿಯ ಗೌರವಾಧ್ಯಕ್ಷರಾದ ಬೀರೂರು ಶಿವಸ್ವಾಮಿ, ಅಧ್ಯಕ್ಷರಾದ ರವೀಂದ್ರನಾಥ, ಪತ್ರಕರ್ತ ಪ್ರಶಾಂತ ರಿಪ್ಪನ್‌ಪೇಟೆ, ಬಿಬಿಎಂಪಿ ಮಾಜಿ ಸದಸ್ಯೆ ಮಂಜುಳಾ ವಿಜಯಕುಮಾರ್, ಎಸ್.ಎಸ್.ಹರ್ಷ, ಶಿವಶಂಕರ ಶಾಸಿ, ಪ್ರಮೀಳ ಏಕಾಂತಪ್ಪ ಮತ್ತಿತರರು ಉಪಸ್ಥಿತರಿದ್ದರು.

    ಕಾರ್ಯಕ್ರಮದಲ್ಲಿ 400 ಪದಕಗಳನ್ನು ಪಡೆದಿರುವ ಅಂತರಾಷ್ಟ್ರೀಯ ಈಜುಪಟು ಹೇಮಂತ ಜೇನುಕಲ್ ಮತ್ತಿತರ ಸಾಧಕರನ್ನು ಸನ್ಮಾನಿಸಲಾಯಿತು.

    ಸಾಧನೆಯಿಂದ ಸರ್ವರೂ ಸಮಾನರು; ರೇಣುಕ, ಬಸವ, ಶಿವಕುಮಾರ ಸ್ವಾಮೀಜಿ ಜಯಂತಿಯಲ್ಲಿ ಡಾ.ಶಿವಾನಂದ ಸ್ವಾಮೀಜಿ ಅಭಿಮತ

    ಸಮನ್ವಯ ಚಿಂತನೆ ಅವಶ್ಯಕ: ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ನಿಕಟಪೂರ್ವ ಅಧ್ಯಕ್ಷರಾದ ಬಿ.ಎಸ್.ಪರಮಶಿವಯ್ಯ ಮಾತನಾಡಿ ವೀರಶೈವ ಲಿಂಗಾಯತ ಸಮಾಜದಲ್ಲಿ ಒಗ್ಗಟ್ಟಿನ ಕೊರತೆ ಇದ್ದು, ಒಳಪಂಗಡಗಳನ್ನು ಮರೆತು ವಿಶಾಲದೃಷ್ಠಿಕೋನವನ್ನು ರೂಢಿಸಿಕೊಳ್ಳಲು ಇಂತಹ ಸಮನ್ವಯ ಕಾರ್ಯಕ್ರಮಗಳ ಅಗತ್ಯವಿದೆ ಎಂದರು.

    ಒಂದೇ ವೇದಿಕೆಯಲ್ಲಿ ರೇಣುಕಾಚಾರ್ಯರು, ಬಸವೇಶ್ವರರು, ಶಿವಕುಮಾರಸ್ವಾಮಿಗಳ ಜಯಂತಿ ಮಾಡಿರುವುದು ಇತರರಿಗೆ ಮಾದರಿ. ನಮ್ಮೆಲ್ಲ ಮಠಪೀಠಗಳು ಕೂಡಾ ಈ ಪದ್ಧತಿಯನ್ನು ಪಾಲಿಸಬೇಕು ಎಂದು ಕರೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts