ಯುಪಿಯಲ್ಲಿ ಕುಡುಕರ ಕಾಟ ಎಂದ ರಾಹುಲ್; ಇದು ಯಾವ ರೀತಿಯ ಭಾಷೆ ಎಂದು ಕಿಡಿಕಾರಿದ ಪ್ರಧಾನಿ ಮೋದಿ

narendra gandhi
Published on

ವಾರಣಾಸಿ: ಇತ್ತೀಚಿಗೆ ವಾರಣಾಸಿಯಲ್ಲಿ ನಡೆದ ಭಾರತ್​ ಜೋಡೋ ನ್ಯಾಯ್​ ಯಾತ್ರೆಯ ವೇಳೆ ಕಾಶಿಯ ರಸ್ತೆಗಳಲ್ಲಿ ರಾತ್ರಿ ವೇಳೆ ಕುಡುಕರು ಡ್ಯಾನ್ಸ್ ಮಾಡುತ್ತಾ ಬಿದ್ದು ಒದ್ದಾಡುವುದನ್ನು ಕಂಡಿದ್ದೇನೆ ಎಂಬ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಹೇಳಿಕೆಗೆ ಕಿಡಿಕಾರಿರುವ ಪ್ರಧಾನಿ ನರೇಂದ್ರ ಮೋದಿ ರಾಜ ಕುಟುಂಬವೊಂದರ ಯುವರಾಜನೊಬ್ಬ ತನ್ನ ಹತಾಷೆಯನ್ನು ಪವಿತ್ರ ನಗರದ ಯುವಕರ ಮೇಲೆ ತೀರಿಸಿಕೊಳ್ಳುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ವಾರಣಾಸಿಯಲ್ಲಿ 13 ಸಾವಿರ ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಮೋದಿ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಹೆಸರೇಳದೆ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ರಾಜ ಕುಟುಂಬವೊಂದರ ಯುವರಾಜನೊಬ್ಬ ತನ್ನ ಹತಾಷೆಯನ್ನು ಪವಿತ್ರ ನಗರದ ಯುವಕರ ಮೇಲೆ ತೀರಿಸಿಕೊಳ್ಳುತ್ತಿದ್ದಾರೆ. ಯಾವ ಜನರಿಗೆ ಪ್ರಜ್ಞೆ ಇಲ್ಲವೋ ಆ ಜನರು ಕಾಶಿಯ ಯುವಕರನ್ನು ಕುಡುಕರು ಎಂದು ಕರೆಯುತ್ತಾರೆ. ಕಾಶಿ ಹಾಗೂ ಉತ್ತರ ಪ್ರದೇಶದ ಯುವಕರು ತಮ್ಮ ರಾಜ್ಯವನ್ನು ಅಭಿವೃದ್ದಿ ಹೊಂದಿದ ರಾಜ್ಯವನ್ನಾಗಿ ಬದಲಿಸಲು ಶ್ರಮಿಸುತ್ತಿದ್ದಾರೆ ಇಂದು ಉತ್ತರ ಪ್ರದೇಶ ಬದಲಾಗುತ್ತಿದೆ.

ಯುವಕರು ತಮ್ಮ ಭವ್ಯ ಭವಿಷ್ಯವನ್ನು ಬರೆಯುತ್ತಿದ್ದಾರೆ.  ಆದರೆ, ಕುಟುಂಬ ರಾಜಕಾರಣ ಮಾಡುವವರು ಮಾತ್ರ ಉತ್ತರ ಪ್ರದೇಶದ ಯುವಕರ ಅವಹೇಳನ ಮಾಡ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಯುವರಾಜ ಉತ್ತರ ಪ್ರದೇಶದ ಹಾಗೂ ಕಾಶಿಯ ಯುವಕರನ್ನು ಕುಡುಕರು ಎಂದು ಕರೆಯುತ್ತಾರೆ. ಕಳೆದ ಎರಡು ವರ್ಷಗಳ ಕಾಲ ವಿಪಕ್ಷಗಳು ಮೋದಿಯನ್ನು ಟೀಕಿಸುತ್ತಾ ಕಾಲ ಕಳೆದವು ಇದೀಗ ತಮ್ಮ ಹತಾಶೆಯನ್ನು ದೈವ ಭಕ್ತರ ಮೇಲೆ, ಉತ್ತರ ಪ್ರದೇಶದ ಯುವಕರ ಮೇಲೆ ತೀರಿಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

 ನಾನು ಕಾಶಿ ನಗರಕ್ಕೆ ಹೋಗಿದ್ದೆ, ಅಲ್ಲಿ ಸಂಚರಿಸುವಾಗ ಜನರು ಕುಡಿದು ರಸ್ತೆಯಲ್ಲಿ ಬಿದ್ದು ಹೊರಳಾಡುತ್ತಿದ್ದರು. ಅದನ್ನು ನಾನು ನೋಡಿದ್ದೆ. ಉತ್ತರ ಪ್ರದೇಶದ ಭವಿಷ್ಯವು ಕುಡಿದ ಅಮಲಿನಲ್ಲಿತ್ತು. ಉತ್ತರ ಪ್ರದೇಶದಲ್ಲಿ ರಾಮ ಮಂದಿರವಿದೆ. ಈ ಮಂದಿರದ ಉದ್ಘಾಟನಾ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ, ಅಂಬಾನಿ, ಅದಾನಿಗಳು ಭಾಗಿಯಾಗಿದ್ದರು. ಆದರೆ, ಕೋಟ್ಯಂತರ ಭಾರತೀಯರು ಬಡವರು. ಅದರಲ್ಲೂ ಹಿಂದುಳಿದ ಹಾಗೂ ದಲಿತ ಸಮುದಾಯದವರು ಇದ್ದಾರೆ. ಇವರನ್ನು ರಾಮ ಮಂದಿರದ ಉದ್ಘಾಟನೆಗೆ ಯಾಕೆ ಕರೆದಿರಲಿಲ್ಲ ಎಮದು ಪ್ರಶ್ನಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net