WPL 2024; ಪಂದ್ಯ ವೀಕ್ಷಿಸಲು ಬರುವ ಮಹಿಳೆಯರಿಗೆ ವಿಶೇಷ ಉಡುಗೊರೆ ಘೋಷಿಸಿದ ಬಿಸಿಸಿಐ

WPL
Published on

ಬೆಂಗಳೂರು: ಫೆಬ್ರವರಿ 23ರಿಂದ ಎರಡನೇ ಆವೃತ್ತಿಯ ವುಮೆನ್ಸ್​ ಪ್ರೀಮಿಯರ್​ ಲೀಗ್ ಆರಂಭವಾಗುತ್ತಿದ್ದು, ಉದ್ಘಾಟನಾ ಪಂದ್ಯಕ್ಕೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಡೆಲ್ಲಿ ಹಾಗೂ ಮುಂಬೈ ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದು, ಇದಕ್ಕೂ ಮುನ್ನ ಟೂರ್ನಿಗೆ ವರ್ಣರಂಜಿತ ಚಾಲನೆ ದೊರೆಯಲಿದೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಖ್ಯಾತ ಬಾಲಿವುಡ್​ ತಾರೆಯರಾದ ಶಾರುಖ್​ ಖಾನ್, ವರುಣ್ ಧವನ್, ಶಾಹಿದ್​ ಕಪೂರ್, ಟೈಗರ್ ಶ್ರಾಫ್, ಸಿದ್ದಾರ್ಥ್​ ಮಲ್ಹೋತ್ರಾ, ಕಾರ್ತಿಕ್​ ಆರ್ಯನ್​ ಸೇರಿದಂತೆ ಖ್ಯಾತ ನಟರು ಹಾಗೂ ನಟಿಯರು ಪ್ರದರ್ಶನ ನೀಡಲಿದ್ದಾರೆ. ಕಾರ್ಯಕ್ರಮಕ್ಕೆಭರ್ಜರಿ ಓಪನಿಂಗ್ ನೀಡುವ ಇರಾದೆಯಲ್ಲಿರುವ ಬಿಸಿಸಿಐ ಪಂದ್ಯ ವೀಕ್ಷಿಸಲು ಬರುವ ಮಹಿಳೆಯರಿಗೆ ವಿಶೇಷ ಆಫರ್ ಒಂದನ್ನು ಘೋಷಿಸಿದೆ.

ಅದರಂತೆ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಮೊದಲ ಪಂದ್ಯವನ್ನು ವೀಕ್ಷಿಸಲು ಮೊದಲು ಬರುವ 500 ಮಹಿಳಾ ಅಭಿಮಾನಿಗಳಿಗೆ ಉಚಿತವಾಗಿ ಟಿಕೆಟ್ ನೀಡುವುದಾಗಿ ಪ್ರಕಟಣೆ ಹೊರಡಿಸಲಾಗಿದೆ. ಈ ಬಗ್ಗೆ ಡಬ್ಲ್ಯುಪಿಎಲ್ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಬಿಸಿಸಿಐ ಮಾಹಿತಿ ನೀಡಿದೆ.

ಸ್ಟಾರ್​ಗಳಲ್ಲದೆ, ಈ ವೇಳೆ ಐದು ತಂಡಗಳ ನಾಯಕಿಯರು ಮೈದಾನದಲ್ಲಿ ಉಪಸ್ಥಿತರಿರಲಿದ್ದಾರೆ. ಹರ್ಮನ್ ಪ್ರೀತ್ ಕೌರ್ ಮತ್ತು ಲ್ಯಾನಿಂಗ್ ಹೊರತಾಗಿ, ಅಮೆಲಿಯಾ ಕೆರ್, ಮರಿಜಾನ್ನೆ ಕಪ್, ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ನ್ಯಾಟ್ ಸಿವರ್ ಬ್ರಂಟ್ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net