

ನವದೆಹಲಿ: ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್, ಸನಾತನ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ಹಾಗೂ ಭಾರತ- ಇಂಡಿಯಾ ಹೆಸರಿನ ವಿವಾದಗಳ ಬಗ್ಗೆ ಪ್ರಧಾನಿ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಉದಯನಿಧಿಗೆ ಸಣ್ಣಗೆ ಚುರುಕು ಮುಟ್ಟಿಸಿದ್ದು, ಕೇಂದ್ರ ನಾಯಕರಿಗೆ ಭಾರತದ ಹೆಸರಿನ ಮೂಲವನ್ನು ಎಲ್ಲಿ ಹುಡುಕಬಾರದು ಎಂದು ತಿಳಿಸಿದ್ದಾರೆ.
ಸೆ.6ರಂದು ಮಾತನಾಡಿದ ಪ್ರಧಾನಿ ಮೋದಿ, ಭಾರತ ಮತ್ತು ಇಂಡಿಯಾ ವಿವಾದದ ಬಗ್ಗೆ ಪ್ರತಿಕ್ರಿಯಿಸದಂತೆ ಸಚಿವರಿಗೆ ಸಲಹೆ ನೀಡಿದ್ದು ಅಧಿಕೃತ ವ್ಯಕ್ತಿಗಳು ಮಾತ್ರವೇ ಈ ವಿಷಯದ ಬಗ್ಗೆ ಮಾತನಾಡಬೇಕು ಎಂದು ಹೇಳಿದ್ದಾರೆ. ಈ ಮೂಲಕ ವಿವಾದವನ್ನು ತಣ್ಣಗಾಗಿಸಲು ಪ್ರಯತ್ನಿಸಿದ್ದಾರೆ.
ಇದೇ ಸಂದರ್ಭದಲ್ಲಿ ಅವರು, "ಭಾರತ ಹೆಸರಿನ ಇತಿಹಾಸ ನೋಡಲು ಹೋಗಬೇಡಿ. ಸಂವಿಧಾನದ ಸತ್ಯಗಳಿಗೆ ಅಂಟಿಕೊಳ್ಳಿ. ಅಲ್ಲದೆ, ಈ ವಿಷಯದ ಸಮಕಾಲೀನ ಪರಿಸ್ಥಿತಿಯ ಬಗ್ಗೆ ಮಾತನಾಡಿ" ಎಂದು ನವದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಗೆ ಮುಂಚಿತವಾಗಿ ಮಂತ್ರಿಮಂಡಲದ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಹೇಳಿದರು.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್, ಸನಾತನ ಧರ್ಮವನ್ನು ಡೆಂಗ್ಯೂ ಮತ್ತು ಮಲೇರಿಯಾದಂತಹ ರೋಗಗಳಿಗೆ ಹೋಲಿಸುವ ಮೂಲಕ ವಿವಾದವನ್ನು ಹುಟ್ಟು ಹಾಕಿದ್ದರು. ಚೆನ್ನೈನಲ್ಲಿ (ಸೆ.2) ಶನಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, "ಸನಾತನ ಧರ್ಮವನ್ನು ವಿರೋಧಿಸಬಾರದು. ನಾಶಪಡಿಸಬೇಕು" ಎಂದು ಹೇಳಿದ್ದರು.
ಈ ಕುರಿತಾಗಿ ಅನೇಕ ಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದವು. ಅವರ ಹೇಳಿಕೆಗಳನ್ನು ಖಂಡಿಸುವಂತೆ ಬಿಜೆಪಿ, ಕಾಂಗ್ರೆಸ್ ಪಕ್ಷನ್ನು ಒತ್ತಾಯಿಸಿತು. ಆದರೆ ನಂತರ, ಸನಾತನ ಧರ್ಮದ ಅನುಯಾಯಿಗಳ ವಿರುದ್ಧ ಹಿಂಸಾಚಾರಕ್ಕೆ ತಾನು ಕರೆ ನೀಡಿಲ್ಲ ಎಂದು ಉದಯನಿಧಿ ಹೇಳಿಕೊಂಡಿದ್ದಾರೆ. ಸದ್ಯ ಅವರ ವಿರುದ್ಧ ದೇಶದ ನಾನಾ ಭಾಗಗಳಲ್ಲಿ ದೂರು ದಾಖಲಾಗಿವೆ. ಇನ್ನು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ, ಉದಯನಿಧಿ ಸ್ಟಾಲಿನ್ ಸನಾತನ ಧರ್ಮ ಅನುಸರಿಸುವವರ ನರಮೇಧಕ್ಕೆ ಕರೆ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. (ಏಜೆನ್ಸೀಸ್)