'ಇಂಡಿಯಾ-ಭಾರತ' ವಿವಾದದ ಬೆನ್ನಲ್ಲೇ ಅಕ್ಷಯ್​ ಕುಮಾರ್ ನಟನೆಯ ಹೊಸ ಚಿತ್ರದ ಟೈಟಲ್​ನಲ್ಲಿ ಬದಲಾವಣೆ!

Untitled design - 2023-09-06T195531.999
Published on

ಮುಂಬೈ: ಇಂಡಿಯಾ ಎಂಬ ಹೆಸರನ್ನು ಭಾರತ್ ಎಂದು ಬದಲಾಯಿಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ ಇದೀಗ ದೇಶದಲ್ಲಿ ತೀವ್ರ ಚರ್ಚೆ, ವಿರೋಧಗಳು ವ್ಯಕ್ತವಾಗುತ್ತಿವೆ. ಈ ವಿವಾದದ ಬೆನ್ನಲ್ಲೇ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ತಮ್ಮ ಹೊಸ ಚಿತ್ರದ ಶೀರ್ಷಿಕೆಯನ್ನು ತಕ್ಷಣವೇ ಬದಲಿಸಿದ್ದಾರೆ.

ಅಕ್ಷಯ್ ಕುಮಾರ್ ನಟನೆಯ ಮುಂದಿನ ಚಿತ್ರದ ಟೈಟಲ್ ಅನ್ನು 'ಮಿಷನ್ ರಾಣಿಗಂಜ್: ದಿ ಗ್ರೇಟ್ ಭಾರತ್ ರೆಸ್ಕ್ಯೂ' ಎಂದು ಬದಲಾಯಿಸಿದ್ದಾರೆ. ಇದಕ್ಕೂ ಮುನ್ನ 'ಮಿಷನ್ ರಾಣಿಗನ್: ದಿ ಗ್ರೇಟ್ ಇಂಡಿಯನ್ ರೆಸ್ಕ್ಯೂ' ಎಂದು ಶೀರ್ಷಿಕೆಯಿಡಲಾಗಿತ್ತು. ಇಂಡಿಯಾ-ಭಾರತ ವಿವಾದ ತೀವ್ರಗೊಳ್ಳುತ್ತಿದ್ದಂತೆ ಚಿತ್ರತಂಡ ಕೂಡಲೇ ಎಚ್ಚೆತ್ತುಕೊಂಡು, ಚಿತ್ರದ ಫಸ್ಟ್ ಲುಕ್ ಪೋಸ್ಟರ್​ನಲ್ಲಿ ಬದಲಾವಣೆ ತಂದಿದ್ದಾರೆ.

ಈ ಚಿತ್ರವು 'ರಾಣಿಗಂಜ್ ಕೋಲ್ಫೀಲ್ಡ್'ನಲ್ಲಿ ನಡೆದ ನೈಜ ಘಟನೆ ಆಧರಿತವಾಗಿದ್ದು, ಭಾರತದ ಕಲ್ಲಿದ್ದಲು ಗಣಿ ರಕ್ಷಣಾ ಕಾರ್ಯಾಚರಣೆಯನ್ನು ಮುನ್ನಡೆಸಿದ್ದ ದಿವಂಗತ ಶ್ರೀ ಜಸ್ವಂತ್ ಸಿಂಗ್ ಗಿಲ್ ಅವರ ಸಾಹಸವನ್ನು ಸ್ಫೂರ್ತಿಯಾಗಿ ಪಡೆದು ಚಿತ್ರವನ್ನು ರೂಪಿಸಲಾಗಿದೆ. ಜಸ್ವಂತ್ ಸಿಂಗ್ ಗಿಲ್ ಅವರು ನವೆಂಬರ್ 1989 ರಲ್ಲಿ ರಾಣಿಗಂಜ್‌ನಲ್ಲಿ ಪ್ರವಾಹಕ್ಕೆ ಸಿಲುಕಿದ್ದ ಎಲ್ಲಾ ಗಣಿಗಾರರನ್ನು ರಕ್ಷಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದರು.

ಈ ಘಟನೆಯನ್ನು ಇದೀಗ ಸಿನಿಮಾ ಮೂಲಕ ಸಿನಿಪ್ರಿಯರಿಗೆ ತೋರಿಸುವ ಪ್ರಯತ್ನವನ್ನು ಚಿತ್ರ ತಯಾರಕರು ಮಾಡಿದ್ದಾರೆ. ಚಿತ್ರದ ಟೀಸರ್ ಇದೇ ಸೆಪ್ಟೆಂಬರ್ 7 ರಂದು ಬಿಡುಗಡೆಯಾಗಲಿದ್ದು, ಅಕ್ಟೋಬರ್ 6, 2023 ರಂದು ದೇಶದ ಬಹುತೇಕ ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ.

ಚಿತ್ರದಲ್ಲಿ ಅಕ್ಷಯ್ ಕುಮಾರ್, ಪರಿಣಿತಿ ಚೋಪ್ರಾ, ಕುಮುದ್ ಮಿಶ್ರಾ, ಪವನ್ ಮಲ್ಹೋತ್ರಾ, ರವಿ ಕಿಶನ್, ವರುಣ್ ಬಡೋಲಾ, ದಿಬ್ಯೇಂದು ಭಟ್ಟಾಚಾರ್ಯ, ರಾಜೇಶ್ ಶರ್ಮಾ, ವೀರೇಂದ್ರ ಸಕ್ಸೇನಾ, ಶಿಶಿರ್ ಶರ್ಮಾ, ಅನಂತ್ ಮಹದೇವನ್, ಜಮೀಲ್ ಖಾನ್, ಸುಧೀರ್ ಪಾಂಡೆ, ಬಚನ್ ಪಚೇರಾ, ಮುಕೇಶ್ ಭಟ್, ಓಂಕರ್ ಭಟ್ ಸೇರಿದಂತೆ ದೊಡ್ಡ ತಾರಗಣವಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net