

ನವದೆಹಲಿ: ಭೂಗೋಳದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ‘ಜಾಗತಿಕ ಆಡಳಿತ’ ವಿಫಲಗೊಂಡಿದೆ ಹಾಗೂ ಬಹುತ್ವವು ಬಿಕ್ಕಟ್ಟಿಗೆ ಸಿಲುಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಅಭಿಪ್ರಾಯಪಟ್ಟಿದ್ದಾರೆ.
ಜಿ20 ದೇಶಗಳ ವಿದೇಶಾಂಗ ಸಚಿವರ ಸಭೆ ಉದ್ಘಾಟಿಸಿ ಮಾತನಾಡಿದ ಪ್ರಧಾನಿ, ಜಗತ್ತಿನ ಬಹಳಷ್ಟು ತುರ್ತು ಸವಾಲುಗಳನ್ನು ಬಗೆಹರಿಸುವಲ್ಲಿ ವಿವಿಧ ಸಂಸ್ಥೆಗಳು ವಿಫಲವಾಗಿವೆ ಎಂದು ಹೇಳಿದರು. ಭಾರತ ಜಿ20 ಅಧ್ಯಕ್ಷತೆ ವಹಿಸಿರುವ ವರ್ಷದಲ್ಲಿ ನಡೆದ ಈ ಮಹತ್ವದ ಸಭೆಯಲ್ಲಿ ಯೂಕ್ರೇನ್ ಮೇಲೆ ರಷ್ಯಾದ ಯುದ್ಧ ಪ್ರಮುಖವಾಗಿ ಚರ್ಚೆಗೆ ಬಂತು. ‘ಬಹುತ್ವವು ಬಿಕ್ಕಟ್ಟಿನಲ್ಲಿದೆ ಎನ್ನುವುದನ್ನು ನಾವೆಲ್ಲರೂ ಒಪ್ಪಿಕೊಳ್ಳಬೇಕು’ ಎಂದು ಸಂದೇಶದಲ್ಲಿ ಪ್ರಧಾನಿ ಹೇಳಿದರು.
ಸಚಿವರ ಸಭೆಯ ಮೊದಲ ಅಧಿವೇಶನಕ್ಕೂ ಮುನ್ನ ಅದನ್ನು ಪ್ರಸಾರ ಮಾಡಲಾಯಿತು. ಜಾಗತಿಕ ಆಡಳಿತ ವಿಫಲವಾಗಿದೆ ಎಂಬುದನ್ನು ಆರ್ಥಿಕ ಬಿಕ್ಕಟ್ಟು, ಹವಾಮಾನ ಬದಲಾವಣೆ, ಕೋವಿಡ್ ಸಾಂಕ್ರಾಮಿಕತೆ, ಭಯೋತ್ಪಾದನೆ ಮತ್ತು ಯುದ್ಧ ಗಳಂಥ ಕಳೆದ ಕೆಲವು ವರ್ಷಗಳ ಅನುಭವ ತೋರಿಸಿಕೊಟ್ಟಿದೆ ಎಂದು ವಿಶ್ಲೇಷಿಸಿದರು.
ದಕ್ಷಿಣ ಗೋಳಾರ್ಧದ ದನಿ: ಅನೇಕ ದೇಶಗಳು ಇಂಧನ ಹಾಗೂ ಆಹಾರ ಬಿಕ್ಕಟ್ಟು, ಸಾಲದ ಹೊರೆ ಮೊದಲಾದವುಗಳಿಂದ ಬಳಲುತ್ತಿವೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಗೋಳಾರ್ಧದ ದನಿಯಾಗಲು ಜಿ-20 ಅಧ್ಯಕ್ಷವಾಗಿರುವ ಭಾರತ ಪ್ರಯತ್ನಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಜನರಲ್ಲಿ ಒಡಕುಂಟು ಮಾಡುವ ವಿಚಾರಗಳನ್ನು ಸರಿಪಡಿಸಲು ಜಾಗತಿಕ ನಾಯಕರು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಬೇಕೆಂದು ಕರೆ ನೀಡಿದರು. ತನ್ನ ನಿರ್ಧಾರಗಳಿಂದ ಸಂತ್ರಸ್ತವಾಗುವ ಜನರ ನೋವನ್ನು ಆಲಿಸದ ಯಾವುದೇ ಗುಂಪು ವಿಶ್ವ ನಾಯಕತ್ವದ ಹಕ್ಕನ್ನು ಸಾಧಿಸಲಾಗದು ಎಂದರು.