

ಬಳ್ಳಾರಿ ಕ್ಷೇತ್ರ
| ಶ್ರೀಕಾಂತ ಅಕ್ಕಿ ಬಳ್ಳಾರಿ
ಅಕ್ರಮ ಗಣಿಗಾರಿಕೆ ಮೂಲಕ ಖ್ಯಾತಿ-ಕುಖ್ಯಾತಿ ಎರಡನ್ನೂ ಗಳಿಸಿದ ಗಣಿ ಜಿಲ್ಲೆ ಬಳ್ಳಾರಿಯು ರಾಜಕೀಯದಲ್ಲೂ ಅಷ್ಟೇ ಹೆಸರುವಾಸಿ. ಒಂದು ಕಾಲದಲ್ಲಿ ಲೋಕಸಭೆ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಮತ್ತು ಸುಷ್ಮಾ ಸ್ವರಾಜ್ ಎದುರಾಳಿಗಳಾಗಿ ಸ್ಪರ್ಧಿಸಿ ದೇಶವೇ ಬಳ್ಳಾರಿಯತ್ತ ತಿರುಗಿ ನೋಡುವಂತೆ ಮಾಡಿದ್ದರು. ಇಂಥ ನಾಡಿನಲ್ಲಿ ಸದ್ಯ ಸ್ಥಳೀಯ ಸಂಸ್ಥೆಗಳಿಂದ ನಡೆಯುವ ವಿಧಾನ ಪರಿಷತ್ ಚುನಾವಣೆಯ ಕಾವು ಜೋರಾಗಿದೆ. ಎರಡೂ ಪಕ್ಷಗಳಿಂದ ಟಿಕೆಟ್ ಅಂತಿಮವಾಗುವ ಮೊದಲೇ ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ.ಕೊಂಡಯ್ಯ ಒಂದು ಸುತ್ತಿನ ಪ್ರಚಾರ ನಡೆಸಿದ್ದರು. ಎದುರಾಳಿ ಪಕ್ಷದವರೊಂದಿಗೂ ಕೊಂಡಯ್ಯ ಹೊಂದಿರುವ ಉತ್ತಮ ಬಾಂಧವ್ಯದಿಂದ ಫಲಿತಾಂಶ ಒನ್ಸೈಡ್ ಆಗಲಿದೆ ಎಂಬ ಮಾತಿತ್ತು. ಆದರೀಗ ವಾತಾವರಣ ದಿನೇದಿನೆ ಬದಲಾಗಿದ್ದು, ಬಿಜೆಪಿ ಅಭ್ಯರ್ಥಿ ವೈ.ಎಂ.ಸತೀಶ ರೆಡ್ಡಿ ತಮ್ಮದೆ ಅಸ್ತ್ರಗಳೊಂದಿಗೆ ಅಖಾಡಕ್ಕೆ ನುಗ್ಗಿದ್ದು, ಗೆಲುವು ಇಂಥವರಿಗೇ ಎಂಬುದು ಹೇಳುವುದು ಕಷ್ಟವಾಗುತ್ತಿದೆ.
ಬಿಜೆಪಿಯಿಂದ ಹೊಸ ಮುಖವಾಗಿ ಕಣಕ್ಕೆ ಇಳಿದಿರುವ ಸತೀಶ್, ಕಾಂಗ್ರೆಸ್ ಅಭ್ಯರ್ಥಿಗಿಂತ ಹಲವು ವಿಷಯದಲ್ಲಿ ಸದೃಢರಾಗಿದ್ದಾರೆ. ಹೀಗಾಗಿ ಯಾರಿಗೆ ಜಾಕ್ಪಾಟ್ ಹೊಡೆಯಲಿದೆ ಎಂಬ ಕೌತುಕವಿದೆ. ಅನುಭವದ ರಾಜಕೀಯ ಮೇಲುಗೈ ಸಾಧಿಸುತ್ತಾ ಅಥವಾ ಹಣ-ಜಾತಿ ಬಲದ ಮುಂದೆ ಮಂಡಿಯೂರುತ್ತಾ ಎಂದು ಕಾದು ನೋಡಬೇಕಿದೆ. ಎದುರಾಳಿ ಪಕ್ಷದವರೊಂದಿನ ಮಿತ್ರತ್ವ ಕೊಂಡಯ್ಯಗೆ ಪ್ಲಸ್ ಪಾಯಿಂಟ್. ಹೀಗಾಗಿ ಸದ್ಯ ಅನುಕೂಲಸಿಂಧು ರಾಜಕಾರಣ ವ್ಯಾಪಕ ಚರ್ಚೆಯಲ್ಲಿದೆ. ಅಭ್ಯರ್ಥಿಯೊಬ್ಬರಿಗೆ ಎಲ್ಲ ರೀತಿಯ ಬಲವಿದ್ದರೂ ಕೆಲ ರಾಜಕಾರಣಿಗಳು ಹೊಂದಾಣಿಕೆ ರಾಜಕಾರಣದ ಸೆಳೆತಕ್ಕೆ ಸಿಲುಕಿ ಕೈ ಕೊಡುತ್ತಾರೆಯೇ ಎಂಬ ಮಾತುಗಳು ಕೇಳಿಬರುತ್ತಿದೆ.
ಬಳ್ಳಾರಿ-ವಿಜಯನಗರ ಜಿಲ್ಲೆಯ 10 ವಿಧಾನಸಭಾ ಕ್ಷೇತ್ರಗಳ ಪೈಕಿ ಐವರು ಬಿಜೆಪಿ, ಐವರು ಕಾಂಗ್ರೆಸ್ ಸದಸ್ಯರಿದ್ದಾರೆ. ಆಯಾ ಕ್ಷೇತ್ರದ ಎಂಎಲ್ಎ ಮೂಲಕ ಗ್ರಾಮ ಪಂಚಾಯಿತಿ ಸದಸ್ಯರನ್ನು ಸೆಳೆಯುವ ಸರ್ಕಸ್ ಎರಡೂ ಪಕ್ಷಗಳಿಂದ ನಡೆಯುತ್ತಿದೆ. ಜತೆಗೆ ಸಚಿವದ್ವಯರಿಬ್ಬರು ಜೋಡೆತ್ತಿನಂತೆ ಅವಳಿ ಜಿಲ್ಲಾದ್ಯಂತ ಪ್ರಚಾರ ನಡೆಸುತ್ತಿದ್ದಾರೆ. ಹೀಗಾಗಿ ಕೊನೇ ಗಳಿಗೆಯಲ್ಲಿ ಕದನ ಕುತೂಹಲದ ಚಿತ್ರಣ ಹೇಗೆ ಬದಲಾಗುತ್ತದೆ ಎಂದು ಹೇಳಲಾಗದು. ಗಣಿಧೂಳಿನಲ್ಲಿ ವಿಜಯದ ಮಾಲೆ ಯಾರು ಸ್ವೀಕರಿಸಲಿದ್ದಾರೆ ಎಂಬುದಕ್ಕೆ ಡಿ.14ರವರೆಗೆ ಕಾಯಬೇಕಿದೆ.
ತಂತ್ರ ಪ್ರತಿತಂತ್ರ: ರಾಜ್ಯ ರಾಜಕೀಯ ಇತಿಹಾಸದಲ್ಲಿ ತನ್ನದೆ ಚಹರೆ ಹೊಂದಿರುವ ಗಣಿ ಜಿಲ್ಲೆಯಲ್ಲಿ ಈ ಚುನಾವಣೆ ಅಖಾಡವೂ ರಂಗೇರಿದೆ. ಬಿಜೆಪಿ-ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವನ್ನು ತಮ್ಮದಾಗಿಸಿಕೊಳ್ಳಲು ತಂತ್ರ-ಪ್ರತಿತಂತ್ರ ಹೆಣೆಯುತ್ತಿವೆ. ಹಣ ಬಲದ ಲೆಕ್ಕಾಚಾರವೂ ಜೋರಾಗಿಯೇ ನಡೆದಿದೆ.
ಟಿಕೆಟ್ ಕೇಳಲಿಲ್ಲ: ಈ ಭಾಗದಲ್ಲಿ ಜೆಡಿಎಸ್ ದಿನೇದಿನೆ ಕುಸಿಯುತ್ತಿರುವ ಮಧ್ಯೆಯೇ ಆ ಪಕ್ಷದಿಂದ ಯಾರೂ ಕಣಕ್ಕೆ ಇಳಿದಿಲ್ಲ. ಯಾರೂ ಟಿಕೆಟ್ ಕೇಳದ ಪರಿಣಾಮ ವರಿಷ್ಠರು ಕೂಡ ಈ ಭಾಗಕ್ಕೆ ಆದ್ಯತೆ ನೀಡುತ್ತಿಲ್ಲ. ಅದರಲ್ಲೂ ಈ ಚುನಾವಣೆಗೆ ಸೀಮಿತ ಮತದಾರರು ಇರುವುದರಿಂದ ಎರಡೂ ಪಕ್ಷಗಳ ಅಭ್ಯರ್ಥಿಗಳ ಫಲಿತಾಂಶ ತಲೆಕೆಳಗೆ ಮಾಡುವಂಥ ಗ್ರಾಪಂ ಸದಸ್ಯರು ಜೆಡಿಎಸ್ ಬೆಂಬಲಿತರಲ್ಲ.
ಕೊಪ್ಪಳ ರಾಯಚೂರು ಕ್ಷೇತ್ರ
| ಶಿವಮೂರ್ತಿ ಹಿರೇಮಠ ರಾಯಚೂರು
ರಾಯಚೂರು-ಕೊಪ್ಪಳ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ಗೆ ನಡೆಯುತ್ತಿರುವ ಚುನಾವಣೆ ಕಣದಲ್ಲಿ ನಾಲ್ವರು ಅಭ್ಯರ್ಥಿಗಳಿದ್ದರೂ ಕಾಂಗ್ರೆಸ್-ಬಿಜೆಪಿ ನಡುವೆ ನೇರ ಹಣಾಹಣಿಯಿದೆ. ಇಬ್ಬರೂ ಆರ್ಥಿಕವಾಗಿ ಬಲಿಷ್ಠರಾಗಿದ್ದು, ಹಣದ ಸುರಿಮಳೆ ಕಡೆಗಣಿಸುವಂತಿಲ್ಲ.
ಕಳೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಕಾಂಗ್ರೆಸ್ನ ಬಸವರಾಜ ಪಾಟೀಲ್ ಇಟಗಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದರಿಂದ ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರರ ಅಣ್ಣನ ಮಗ ಶರಣಗೌಡ ಬಯ್ಯಾಪುರಗೆ ಕೈ ಟಿಕೆಟ್ ದಕ್ಕಿದೆ. ಬಿಜೆಪಿಯಲ್ಲಿ ಸ್ಥಳೀಯರು ಟಿಕೆಟ್ಗಾಗಿ ಸ್ಪರ್ಧೆಯಲ್ಲಿದ್ದರೂ ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕರು ವರಿಷ್ಠರ ಮೇಲೆ ಒತ್ತಡ ಹೇರಿ, ತನ್ನ ಆತ್ಮೀಯ ವಿಶ್ವನಾಥ ಬನಹಟ್ಟಿಗೆ ಟಿಕೆಟ್ ಕೊಡಿಸಿದ್ದಾರೆ. ಮೂಲತಃ ಚಿಕ್ಕೋಡಿಯವರಾದ ವಿಶ್ವನಾಥ ಸ್ಥಳೀಯರಲ್ಲ ಎನ್ನುವ ಅಸಮಾಧಾನ ಪಕ್ಷದವರಲ್ಲಿಯೇ ಎದ್ದು ಕಾಣುತ್ತಿದೆ.
ಸಹಕಾರಿ ಕ್ಷೇತ್ರದಲ್ಲಿರುವ ಶರಣಗೌಡ ಬಯ್ಯಾಪುರಗೆ ಪಕ್ಷದ ಎಲ್ಲ ನಾಯಕರು ಒಗ್ಗಟ್ಟಾಗಿ ಬೆಂಬಲ ನೀಡುತ್ತಿದ್ದಾರೆ. ತನ್ನ ಆತ್ಮೀಯರಿಗೆ ಟಿಕೆಟ್ ಕೊಡಿಸಿದ್ದಾರೆಂದು ಶಾಸಕ ಶಿವನಗೌಡ ನಾಯಕರ ಬಗ್ಗೆ ಬಿಜೆಪಿ ಮುಖಂಡರಲ್ಲಿ ಅಸಮಾಧಾನವಿದ್ದರೂ ಗೆಲ್ಲಿಸುವಂತೆ ಮನವಿ ಮಾಡುತ್ತಿದ್ದಾರೆ. ಗ್ರಾಪಂ ಸದಸ್ಯರಲ್ಲಿ ನಮ್ಮ ಪಕ್ಷದ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಎರಡೂ ಪಕ್ಷಗಳು ಹೇಳಿಕೊಳ್ಳುತ್ತಿವೆ. ರಾಯಚೂರು ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ನ ಮೂರು, ಬಿಜೆಪಿ ಮತ್ತು ಜೆಡಿಎಸ್ನ ತಲಾ ಇಬ್ಬರು ಶಾಸಕರಿದ್ದರೆ, ಕೊಪ್ಪಳ ಜಿಲ್ಲೆಯ ಐದು ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿಯ ಮೂವರು ಮತ್ತು ಕಾಂಗ್ರೆಸ್ನ ಇಬ್ಬರು ಶಾಸಕರಿದ್ದಾರೆ.
ಚುನಾವಣೆಯಲ್ಲಿ ನಿರ್ಣಾಯಕರಾಗಿರುವ ಗ್ರಾಪಂ ಸದಸ್ಯರನ್ನು ಸೆಳೆಯಲು ಅಭ್ಯರ್ಥಿಗಳು ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಒಬ್ಬೊಬ್ಬ ಸದಸ್ಯರಿಗೆ ಎರಡೂ ಪಕ್ಷಗಳು 20 ಸಾವಿರ ರೂ. ಹಾಗೂ ತಮ್ಮ ಪಕ್ಷಕ್ಕೇ ಮತ ಹಾಕುತ್ತಾರೆ ಎನ್ನುವ ನಂಬಿಕೆಯಿರುವವರಿಗೆ ಅದಕ್ಕಿಂತ ಹೆಚ್ಚಿನ ಹಣ ನೀಡಲು ಸಿದ್ಧತೆಗಳು ನಡೆದಿವೆ ಎಂದು ಹೇಳಲಾಗುತ್ತಿದೆ. ಅಭಿವೃದ್ಧಿ ವಿಷಯಕ್ಕಿಂತ ಹಣದ ಪ್ರಭಾವವೇ ಚುನಾವಣೆಯಲ್ಲಿ ಹೆಚ್ಚು ಪ್ರಭಾವ ಬೀರುವ ಸಾಧ್ಯತೆಗಳಿವೆ.
ಅಭ್ಯರ್ಥಿ ಗೆಲ್ಲಿಸುವ ಹಠ: ಅಣ್ಣನ ಮಗನನ್ನು ಗೆಲ್ಲಿಸಬೇಕು ಎಂದು ಅಮರೇ ಗೌಡ ಬಯ್ಯಾಪುರ ಹಾಗೂ ತನ್ನ ಆತ್ಮೀಯನನ್ನು ಗೆಲ್ಲಿಸ ಲೇಬೇಕು ಎಂದು ಹಠ ತೊಟ್ಟಿರುವ ಕೆ.ಶಿವನಗೌಡ ನಾಯಕ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡುತ್ತಿದ್ದಾರೆ. ಬಿಜೆಪಿಯ ಕೆಲ ಶಾಸಕರು ಮತ್ತು ಮುಖಂಡರು ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದರೂ ಪೂರ್ಣ ಪ್ರಮಾಣದಲ್ಲಿಲ್ಲ.
ಜಾತಿಯ ಬಣ್ಣ: ಲಿಂಗಾಯತ ಶರಣಗೌಡ ಬಯ್ಯಾಪುರಗೆ ಕಾಂಗ್ರೆಸ್ ಮತ್ತು ಕುರುಬ ಸಮಾಜದ ವಿಶ್ವನಾಥ ಬನಹಟ್ಟಿಗೆ ಬಿಜೆಪಿ ಟಿಕೆಟ್ ನೀಡಿದ್ದರಿಂದ ಚುನಾವಣೆಯು ಮುಂದುವರಿದ ಮತ್ತು ಹಿಂದುಳಿದವರ ನಡುವಿನ ಕಣ ಎನ್ನುವಂತಾಗಿದೆ. ಸಚಿವ ಈಶ್ವರಪ್ಪ ಆಗಮಿಸಿ ಸಮಾಜದ ಮುಖಂಡರ ಸಭೆ ನಡೆಸಿದ್ದಾರೆ. ಬಿಜೆಪಿ ಅಭ್ಯರ್ಥಿ ಹೊರಗಿನವರು, ಸ್ಥಳೀಯ ಅಭ್ಯರ್ಥಿಗೆ ಮತ ನೀಡಿ ಎಂದು ಕೈ ನಾಯಕರು ಮತಯಾಚನೆ ನಡಸುತ್ತಿದ್ದಾರೆ.