

| ಶ್ರೀಕಾಂತ್ ಶೇಷಾದ್ರಿ, ಬೆಂಗಳೂರು
ರಾಜ್ಯದ 224 ಶಾಸಕರು ಇನ್ನು ಮುಂದೆ ರಾಜ್ಯ ಲಾಂಛನ ಇರುವ ಬ್ಯಾಡ್ಜ್ ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿದ್ದಾರೆ. ರಾಜ್ಯ ಲಾಂಛನವಾದ ಗಂಡಬೇರುಂಡದ ಬ್ಯಾಡ್ಜ್ ಮಾಡಲು ವಿಧಾನಸಭೆ ಸಚಿವಾಲಯ ಆದೇಶ ನೀಡಿದ್ದು, ಬೆಳಗಾವಿ ಅಧಿವೇಶನದ ವೇಳೆಗೆ ಉಡುಗೊರೆ ರೂಪದಲ್ಲಿ ಇದನ್ನು ವಿತರಿಸಲು ಬಯಸಲಾಗಿದೆ.
ವಿಧಾನಸಭೆಯಲ್ಲಿ ಸ್ಪೀಕರ್ ಸೇರಿ 225 ಮಂದಿ ಇದ್ದಾರೆ. ಇವರೆಲ್ಲರಿಗೂ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಂಡ ನೆಪದಲ್ಲಿ ಇದಕ್ಕೆ ಮಹತ್ವ ನೀಡಿ ಕೊಡಲು ಉದ್ದೇಶಿಸಲಾಗಿದೆ. ಪ್ರಮುಖವಾಗಿ ವಿಧಾನಸಭೆ ಅಧಿವೇಶನಕ್ಕೆ ಬರುವಾಗ ಧರಿಸಿ ಬರಬೇಕಾಗುತ್ತದೆ. ಸದ್ಯಕ್ಕೆ ಇದಕ್ಕೆಂದು ಯಾವುದೇ ಪ್ರತ್ಯೇಕ ನಿಯಮ ಮಾಡುತ್ತಿಲ್ಲ ವಾದರೂ ವಿಧಾನಸಭೆ ಸ್ಪೀಕರ್ ಈ ಸಂಬಂಧ ಮೌಖಿಕ ಸೂಚನೆ ಕೊಡಲಿದ್ದಾರೆ.
ಕಳೆದ ಅಧಿವೇಶನದ ವೇಳೆ ಅನಾಮಿಕ ವ್ಯಕ್ತಿಯೊಬ್ಬ ವಿಧಾನಸಭೆ ಸಭಾಂಗಣದೊಳಗೆ ಆಗಮಿಸಿ ಶಾಸಕರ ಆಸನದಲ್ಲಿ ಕುಳಿತಿದ್ದ. ಆತನಿಗೆ ಅರಿವಿದ್ದೋ ಇಲ್ಲದೆಯೋ ಸಾರ್ವಜನಿಕ ಪ್ರವೇಶ ನಿರ್ಬಂಧ ಇರುವ ಸಭಾಂಗಣ ದೊಳಗೆ ಬಂದಿದ್ದೂ ಅಲ್ಲದೇ ಜೆಡಿಎಸ್ ಶಾಸಕರೊಬ್ಬರಿಗೆ ಮೀಸಲಾಗಿದ್ದ ಆಸನದಲ್ಲಿ ಕುಳಿತು ಕೆಲವು ನಿಮಿಷ ಅಲ್ಲೇ ಇದ್ದ. ನಂತರ ವಿಧಾನಸಭೆ ಮಾರ್ಷಲ್ಗಳಿಗೆ ಅನುಮಾನಬಂದು ವಿಚಾರಣೆ ನಡೆಸಿದಾಗ ಆತ ಶಾಸಕನಲ್ಲ ಎಂಬುದು ಗೊತ್ತಾಗಿತ್ತು. ಭದ್ರತಾ ಲೋಪವನ್ನು ಒಪ್ಪಿಕೊಳ್ಳುತ್ತಲೇ, ಹೊಸ ಶಾಸಕ ಇರಬಹುದು ಎಂದು ಒಳಗೆ ಬಿಟ್ಟಿದ್ದೆವು ಎಂದು ಮಾರ್ಷಲ್ಗಳು ಹೇಳಿಕೊಂಡಿದ್ದರು. ಇದೀಗ ವಿಧಾನಸಭೆಯಿಂದಲೇ ಶಾಸಕರಿಗೆ ಬ್ಯಾಡ್ಜ್ ಕೊಡುವುದರಿಂದ ಅವರು ಅದನ್ನು ಧರಿಸಿ ವಿಧಾನಸಭೆ ಸಭಾಂಗಣ ಪ್ರವೇಶಿಸುವುದರಿಂದ ಗೊಂದಲವೂ ಇಲ್ಲವಾಗುತ್ತದೆ.
ಕಡ್ಡಾಯವಲ್ಲ: ಸಭೆ ಸಮಾರಂಭಗಳಲ್ಲಿ ಇದನ್ನು ಶಾಸಕರು ಕಡ್ಡಾಯವಾಗಿ ಧರಿಸಬೇಕೆಂಬ ಆದೇಶ ಹೊರಡಿಸುವ ಚಿಂತನೆ ವಿಧಾನಸಭೆ ಮುಂದೆ ಇಲ್ಲ. ಆದರೆ, ಇದನ್ನು ಧರಿಸುವುದರಿಂದ ಆಗುವ ಪ್ರಯೋಜನ ಹಾಗೂ ಬ್ಯಾಡ್ಜ್ನ ಗಂಭೀರತೆ ತಿಳಿಸಿಕೊಡಲಾಗುತ್ತದೆ. ಮೆಟಲ್ ಬ್ಯಾಡ್ಜ್ಗಳನ್ನು ನೀಡಲು ಡ್ರೀಮ್್ಸ ಟ್ರೇಡ್ ಆಂಡ್ ಇವೆಂಟ್ ಸಂಸ್ಥೆಗೆ ಆದೇಶ ಕೊಡಲಾಗಿದೆ. ಪ್ರತಿಯೊಬ್ಬರಿಗೆ ಮೂರು ಬ್ಯಾಡ್ಜ್ ನೀಡಲಾಗುತ್ತದೆ. ಪ್ರತಿ ಬ್ಯಾಡ್ಜ್ ಗೆ 2400 ರೂ. ಜತೆಗೆ 432 ರೂ. ಜಿಎಸ್ಟಿ ಸೇರಿಸಿ 2832 ರೂ.ಗೆ ಒಂದರಂತೆ ಸಿದ್ಧಪಡಿಸಲು ಸೂಚಿಸಲಾಗಿದೆ.
ಕರ್ನಾಟಕ ಸುವರ್ಣ ಸಂಭ್ರಮ ಸಂದರ್ಭದಲ್ಲಿ ಎಲ್ಲ ಶಾಸಕರಿಗೆ ಗಂಡಭೇರುಂಡ ಇರುವ ಮಹತ್ವದ ಬ್ಯಾಡ್ಜ್ ನೀಡಬೇಕೆಂದು ಸ್ಪೀಕರ್ ಬಯಸಿದ್ದಾರೆ. ಅದನ್ನು ಸಿದ್ಧಪಡಿಸುವ ಕೆಲಸ ನಡೆದಿದೆ. | ವಿಶಾಲಾಕ್ಷಿ, ವಿಧಾನಸಭೆ ಕಾರ್ಯದರ್ಶಿ
ಸ್ಪೀಕರ್ ಪ್ಲ್ಯಾನ್: ಶಾಸನ ಸಭೆ ವೀಕ್ಷಿಸಲು ವಿವಿಧ ದೇಶದ ಜನಪ್ರತಿನಿಧಿಗಳು ವಿಧಾನಸೌಧಕ್ಕೆ ಆಗಮಿಸುವುದು ಸಾಮಾನ್ಯ. ಘಾನಾ ಹಾಗೂ ಇನ್ನೊಂದು ದೇಶದ ಪಾರ್ಲಿಮೆಂಟೇರಿಯನ್ಗಳು ವಿಧಾನಸೌಧಕ್ಕೆ ಆಗಮಿಸಿದ್ದ ವೇಳೆ ಬ್ಯಾಡ್ಜ್ ಧರಿಸಿದ್ದರು. ಅದನ್ನು ಧರಿಸುವ ಮೂಲಕ ಪ್ರತ್ಯೇಕವಾಗಿ ಕಾಣಿಸಿಕೊಳ್ಳುತ್ತಿದ್ದರು. ಇದನ್ನು ಗಮನಿಸಿದ್ದ ಸ್ಪೀಕರ್ ಯು.ಟಿ ಖಾದರ್ ಹೊಸ ಸಂಪ್ರದಾಯಕ್ಕೆ ಮುನ್ನಡಿ ಬರೆದಿದ್ದಾರೆ.