

ಬೆಂಗಳೂರು: ನೈಸ್ ಹಗರಣ ಕುರಿತಂತೆ ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಟಿಬಿ ಜಯಚಂದ್ರ ಅವರು ನೀಡಿದ್ದ ವರದಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿ ಮಾಡಿದೆ. ಈ ಬೆನ್ನಲ್ಲೇ ನೈಸ್ ರೋಡ್ ಅಕ್ರಮದ ಬಗ್ಗೆ ದ್ವನಿ ಎತ್ತಿದ್ದಕ್ಕೆ ಟಿಬಿ ಜಯಚಂದ್ರ ಅವರಿಗೆ ಬೆದರಿಕೆ ಕರೆ ಬಂದಿದೆ.
ರೈತರ ಸೋಗಿನಲ್ಲಿ ಕರೆ ಮಾಡಿ ನಿಮಗೆ ನೈಸ್ ವಿಚಾರ ಯಾಕೆ, ಈ ವಿಚಾರ ಇಲ್ಲಿಗೆ ಕೈಬಿಡುವಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಲಾಗಿದೆ. ಈ ಕುರಿತಾಗಿ ಟಿಬಿ ಜಯಚಂದ್ರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ದೂರು ನೀಡಿದ್ದಾರೆ.
ಕಳೆದ 2 ದಿನಗಳ ಹಿಂದೆ ರಾಮನಗರಕ್ಕೆ ಭೇಟಿ ನೀಡಿದ್ದ ಶಾಸಕ ಟಿ.ಬಿ ಜಯಚಂದ್ರ ರೈತರ ಹಗರಣದ ವಿಚಾರವಾಗಿ ರೈತರ ಜತೆ ಚರ್ಚೆ ಮಾಡಿದ್ದಾರೆ. ಈ ನಡುವೆ ಸದನಕ್ಕೆ ವರದಿ ಕೊಟ್ಟಿರುವ ಹಿರಿಯ ಶಾಸಕ ಟಿ.ಬಿ ಜಯಚಂದ್ರ ಅವರಿಗೆ ಜೀವ ಬೆದರಿಕೆ ಕರೆಗಳು ಹೆಚ್ಚಾಗುತ್ತಿದೆ.
ಟಿಬಿ ಜಯಚಂದ್ರ ಅವರು ಕಳೆದ ಸರ್ಕಾರದಲ್ಲಿ ನೈಸ್ ಅಕ್ರಮದ ಕುರಿತು ಸದನ ಸಮಿತಿ ಅಧ್ಯಕ್ಷರಾಗಿದ್ದರು. ಅಂದಿನಿಂದ ಇಂದಿನವರೆಗೂ ನೈಸ್ ಅಕ್ರಮದ ವಿಚಾರವಾಗಿ ಧ್ವನಿ ಎತ್ತುತ್ತಿದ್ದಾರೆ.