

ಉತ್ತರ ಕನ್ನಡ: ರಸ್ತೆ ಪೂರ್ಣ ಮಾಡಿಕೊಡಿ ಎಂದು ಕೇಳಿದ್ದಕ್ಕೆ ಭಟ್ಕಳ-ಹೊನ್ನಾವರ ಶಾಸಕ ಸುನೀಲ್ ನಾಯ್ಕ ಗ್ರಾಮಸ್ಥರಿಗೆ ದರ್ಪದ ಮಾತುಗಳಿಂದ ಆವಾಜ್ ಹಾಕಿದ್ದಾರೆ. ಈ ಘಟನೆ ಭಟ್ಕಳ ತಾಲ್ಲೂಕಿನ ಬೈಲೂರು ಗ್ರಾಮದಲ್ಲಿ ನಡೆದಿದೆ.
ರಸ್ತೆ ಮಾಡಿಕೊಡುವಂತೆ ಗ್ರಾಮಸ್ಥರು ಬೇಡಿಕೆ ಸಲ್ಲಿಸಿದಾಗ, ಯಾವಾಗ ರಸ್ತೆ ಮಾಡಬೇಕು ನನಗೆ ಗೊತ್ತಿದೆ, ನಾನು ಮಾಡೋದೇ ಇಷ್ಟು. ನಾನು ಶಾಸಕ, ರಸ್ತೆ ಮಾಡಲು ನನಗೆ ಯಾವುದೇ ದೊಣ್ಣೆ ನಾಯಕನ ಅಪ್ಪಣೆ ಬೇಕಿಲ್ಲ ಎಂದು ಶಾಸಕ ದರ್ಪದ ಮಾತುಗಳನ್ನಾಡಿದ್ದಾರೆ.
ಗ್ರಾಮ ಸಂಪರ್ಕಿಸುವ 1.8 ಕಿಮೀ ರಸ್ತೆ ಹಾಳಾಗಿದ್ದು, ಗ್ರಾಮಸ್ಥರು ಸರಿಪಡಿಸಿಕೊಡುವಂತೆ ಸಾಕಷ್ಟು ಬಾರಿ ಮನವಿ ಮಾಡಿದ್ದರು. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಶಾಸಕ ಸನೀಲ್ ನಾಯ್ಕ್ ಕೇವಲ 400 ಮೀ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲು ಆಗಮಿಸಿದ್ದರು.
ಭೂಮಿಪೂಜೆ ಸಂದರ್ಭದಲ್ಲಿ ಸುಸಜ್ಜಿತವಾದ ಸಂಪೂರ್ಣ ಹೊಸ ರಸ್ತೆಯನ್ನು ಮಾಡಿಕೊಡುವಂತೆ ಶಾಸಕರಿಗೆ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ. ಈ ವೇಳೆ ಕೆಂಡಾಮಂಡಲವಾದ ಶಾಸಕ ಸುನೀಲ್ ನಾಯ್ಕ, ತಾಕತ್ತಿದ್ದರೆ ಕಾಮಗಾರಿಯನ್ನು ಅರ್ಧಕ್ಕೇ ನಿಲ್ಲಿಸಿ ಎಂದು ಗ್ರಾಮಸ್ಥರಿಗೆ ಆವಾಜ್ ಹಾಕಿದ್ದಾರೆ. ಇದೀಗ ಶಾಸಕ ವರ್ತನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.