

ಬೆಂಗಳೂರು: ಮದ್ಯ ಸೇವನೆಗೆ ಹಣ ಕೊಡಲಿಲ್ಲವೆಂಬ ಕಾರಣಕ್ಕೆ ತಾತನ ಮೇಲೆ ಮೊಮ್ಮಗ ಹಲ್ಲೆ ನಡೆಸಿ ಕೊಲೆ ಮಾಡಿದ್ದು, ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.
ಕಮ್ಮನಹಳ್ಳಿ ಕೋಳಚೆ ಪ್ರದೇಶದ ನಿವಾಸಿ ಜೋಸೆಫ್ (54) ಮೃತ ವ್ಯಕ್ತಿ. ಈತನ ಮೊಮ್ಮಗ ಆರೋಪಿ ಆಂಟೋಣಿ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೂರ್ವ ವಿಭಾಗ ಡಿಸಿಪಿ ಡಾ. ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.
ಅಕ್ಕನ ಮಗ ಆಂಟೋಣಿಯನ್ನು ಜೋಎಫ್ ತನ್ನ ಮನೆಯಲ್ಲಿ ಇಟ್ಟುಕೊಂಡು ಬೆಳೆಸಿದ್ದ. ಗಾರೆ ಕೆಲಸ ಮಾಡುತ್ತಿದ್ದ ಆಂಟೋಣಿ, ಮದ್ಯ ವ್ಯಸನಿಯಾಗಿದ್ದ. ಸೋಮವಾರ ರಾತ್ರಿ, ಮನೆಯಲ್ಲಿ ತಾತನ ಬಳಿ ಮದ್ಯ ಸೇವನೆಗೆ ಹಣ ಕೊಡುವಂತೆ ಕೇಳಿದ್ದ. ಅದಕ್ಕೆ ಜೋಸೆಫ್, ಹಣ ಇಲ್ಲವೆಂದು ಹೇಳಿದಾಗ ಮೊಮ್ಮಗ ಜಗಳ ತೆಗೆದಿದ್ದಾನೆ.
ಹಣ ಕೊಡಲಿಲ್ಲವೆಂದು ಕೋಪಗೊಂಡ ಆಂಟೋಣಿ, ಕೊನೆಗೆ ದೊಣ್ಣೆಯಿಂದ ತಾತನ ತಲೆಗೆ ಹಲ್ಲೆ ನಡೆಸಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಜೋಸೆಫ್ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಆರೋಪಿ ಆಂಟೋಣಿಯನ್ನು ವಶಕ್ಕೆ ಪಡೆದಿದ್ದಾರೆ.
ಆದರೆ, ತೀವ್ರ ರಕ್ತ ಸ್ರಾವ ಉಂಟಾದ ಪರಿಣಾಮ ಚಿಕಿತ್ಸೆ ಲಿಸದೆ ಜೋಸೆಫ್ ಮೃತಪಟ್ಟಿದ್ದಾರೆ. ಇದರ ಮೇರೆಗೆ ಕೊಲೆ ಪ್ರಕರಣ ದಾಖಲು ಮಾಡಿಕೊಂಡು ಆರೋಪಿ ಆಂಟೋಣಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.