ನನಗೆ ಮಾಡಿದ ಮೋಸ ಹೇಳಿದ್ರೆ ನಮಪ್ಪನಾಣೆ ಅವನಿಗೆ ನೀವ್ಯಾರು ಮತ ಹಾಕಲ್ಲ! ಎಚ್​ಡಿಕೆ ವಿರುದ್ಧ ಎಸ್.ಆರ್. ಶ್ರೀನಿವಾಸ್ ಏಕವಚನ ವಾಗ್ದಾಳಿ

WhatsApp Image 2024-04-19 at 1.23.28 PM
Published on

ತುಮಕೂರು: ಕುಮಾರಸ್ವಾಮಿ ದಾರಿ ತಪ್ಪಿದ ಮಗ, ತಾಯಂದಿರಲ್ಲ. ನನಗೆ ಮೋಸ ಮಾಡಿದ್ದನ್ನು ಹೇಳಿದ್ರೆ ನಮಪ್ಪನಾಣೆ ಅವನಿಗೆ ನೀವು ಯಾರು ವೋಟ್ ಹಾಕೋಲ್ಲ ಎಂದು ಮಾಜಿ ಮುಖ್ಯಮಂತ್ರಿ, ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಎಚ್​.ಡಿ. ಕುಮಾರಸ್ವಾಮಿ ವಿರುದ್ದ ಶಾಸಕ ಎಸ್.ಆರ್.ಶ್ರೀನಿವಾಸ್ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಸಚಿವ ಡಾ.ಜಿ ಪರಮೇಶ್ವರ್ ಹಾಗೂ ಕೆ.ಎನ್. ರಾಜಣ್ಣ, ಟಿ.ಬಿ. ಜಯಚಂದ್ರ ಉಪಸ್ಥಿತರಿದ್ದ ಕುಂಚಿಟಿಗ ಒಕ್ಕಲಿಗ ಸಭೆಯಲ್ಲಿ ಕುಮಾರಸ್ವಾಮಿ ಮೇಲೆ ತೀವ್ರ ವಾಗ್ದಾಳಿ ನಡೆಸಿದ ಎಸ್.ಆರ್.ಶ್ರೀನಿವಾಸ್, "ಸಿದ್ದರಾಮಯ್ಯ ನೇತೃತ್ವದಲ್ಲಿ ಗ್ಯಾರಂಟಿ ಕೊಟ್ಟಿರೋದು ಬಡವರಿಗೆ. ಯಾರು ಅನುಭವಿಸುತ್ತಿದ್ದಾರೆ ಅವರಿಗೆ ಅದರ ಪ್ರಯೋಜನ ಗೊತ್ತಿದೆ. ಕುಮಾರಸ್ವಾಮಿ ಹೇಳ್ತಾರೆ ತಾಯಂದಿರು ದಾರಿತಪ್ಪಿದ್ದಾರೆ ಅಂತಾ. ಯಾರು ದಾರಿ ತಪ್ಪಿರೋದು? ದಾರಿ ತಪ್ಪಿದ ಮಗ ನೀನು" ಎಂದು ಗುಡುಗಿದರು.

"ನನಗೆ ಗೊತ್ತಿದೆ ಹೇಗೆಲ್ಲಾ ದಾರಿ ತಪ್ಪಿದ್ದೀಯಾ ಅಂತಾ ಚರ್ಚೆ ಬಾ ಹೇಳ್ತೀನಿ. ದಾರಿ ತಪ್ಪಿದೋರು ಯಾರು? ಇನ್ನೂ ಅವರ ಹಿಂದೆನೇ ಹೋಗ್ತಿರಲ್ಲ ರೀ, ದಾರಿ ತಪ್ಪಿದ ಮಗನ ಹಿಂದೆ ಹೋಗ್ತಿರಾ. ನಮ್ಮ ಹೆಣ್ಣು ಮಕ್ಕಳು ಹೇಂಗೋ ಗಂಡನ ಜೊತೆ ಸಂಸಾರ ಮಾಡ್ತಾವರೆ. ಇಡೀ ಹೆಣ್ಣು ಜಾತಿಗೆ ಅವಮಾನ ಮಾಡೋ ರೀತಿಯಲ್ಲಿ ಕುಮಾರಸ್ವಾಮಿ ಹೇಳ್ತಾರೆ. ದಾರಿತಪ್ಪಿದ ಮಗ ಕುಮಾರಣ್ಣ ಅವನನ್ನ ಫಾಲೋ ಮಾಡೋ ಕೆಲಸ ಮಾಡಬೇಡಿ" ಎಂದರು.

"ನಾನು ಯಾಕೆ ಪಕ್ಷ ತ್ಯಜಿಸಿದೆ ಅನ್ನೋದನ್ನ ಹೇಳಿದ್ರೆ ನಮ್ಮಪ್ಪನಾಣೆ ಅವರಿಗೆ ನೀವು ವೋಟ್ ಹಾಕೋದಿಲ್ಲ. ಅವನು ಮಾಡಿರೋ ಮೋಸ ನಿಮಗೆ ಹೇಳ್ತೀನಿ ಈಗ ಹೇಳೋಲ್ಲ ಮುಂದೆ ಹೇಳ್ತಿನಿ. ನಾನು ಸುಳ್ಳು ಹೇಳೋಲ್ಲ, ನನ್ನ ಹೆತ್ತ ತಾಯಿ ಆಣೆ ಸುಳ್ಳು ಹೇಳೋಲ್ಲ. ಯಾರು ಏನೇ ಹೇಳಿದ್ರು, ನಿಮ್ಮ ಮತ ಮಾತ್ರ ಬಿಜೆಪಿಗೆ ಹಾಕಬೇಡಿ‌. ಬದಲಿಗೆ ಮುದ್ದಹನುಮೇಗೌಡರಿಗೆ ಮತನೀಡಿ" ಎಂದ ಶಾಸಕ ಎಸ್.ಆರ್.ಶ್ರೀನಿವಾಸ್ ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net