

ಮಂಡ್ಯ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷ ಜನಪರ, ರೈತಪರ, ಮಹಿಳೆಯರು ಹಾಗೂ ದೀನ ದಲಿತರ ಪರವಾಗಿ ಪ್ರಣಾಳಿಕೆಯನ್ನು ಹೊರತಂದಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್ ತಿಳಿಸಿದರು.
ಪ್ರತಿಯೊಬ್ಬ ಕಾರ್ಯಕರ್ತರು, ಜನರ ಅಭಿಪ್ರಾಯ ಹಾಗೂ ಆನ್‌ಲೈನ್ ಮೂಲಕ ಸಲಹೆ ಪಡೆದು ಪ್ರಣಾಳಿಕೆಯನ್ನು ಸಿದ್ಧಪಡಿಸಲಾಗಿದೆ. ವಿಕಸಿತ ಭಾರತದ ದೃಷ್ಟಿ ಹಿನ್ನೆಲೆಯಲ್ಲಿ ಪ್ರಣಾಳಿಕೆ ತಯಾರಿಸಲಾಗಿದೆ. 15 ಕೋಟಿ ಕುಟುಂಬ ಬಡತನದಿಂದ ಮುಕ್ತಿ, ಐದು ಕೆ.ಜಿ ಅಕ್ಕಿ ವಿಸ್ತರಣೆ, ಅನ್ನದಾತರಿಗೆ ಯೋಜನೆಗಳ ವಿಸ್ತರಣೆ, ಯುವಶಕ್ತಿ, ನಾರಿ ಶಕ್ತಿ, ಉದ್ಯೋಗ ಸೃಷ್ಟಿ ಸೇರಿದಂತೆ ಹಲವಾರು ಕಾರ್ಯಕ್ರಮಗಳು ಒಳಗೊಂಡಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕೃಷಿಯಲ್ಲಿ ಕ್ರಾಂತಿ, ಬುಲೆಟ್ ರೈಲು, ಕಡುಬಡವರಿಗೆ ಗ್ಯಾಸ್ ವಿತರಣೆ ಸೇರಿದಂತೆ ಪ್ರತಿ ರಂಗದಲ್ಲೂ ಅಭಿವೃದ್ಧಿಗೆ ಪ್ರಣಾಳಿಕೆಯಲ್ಲಿ ಒತ್ತು ನೀಡಲಾಗಿದೆ. ಇನ್ನು ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. 60 ವರ್ಷದ ಆಡಳಿತ ನಡೆಸಿದ ಕಾಂಗ್ರೆಸ್ ನ್ಯಾಯ ಪತ್ರ ಎನ್ನುವ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಇದು 60 ವರ್ಷದಿಂದ ಜನರಿಗೆ ಕಾಂಗ್ರೆಸ್ ಪಕ್ಷ ವಂಚನೆ ಮಾಡಿರುವುದನ್ನು ತೋರಿಸುತ್ತದೆ ಎಂದು ಟೀಕಿಸಿದರು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ನಾಗಾನಂದ, ಆನಂದ ಉಪಸ್ಥಿತರಿದ್ದರು.