

ಬೆಂಗಳೂರು: ಕರೊನಾ ಸೋಂಕಿನಿಂದ ಗುಣಮುಖರಾದ ಕರ್ನಾಟಕದ ಶಾಸಕರೊಬ್ಬರು ಪ್ಲಾಸ್ಮಾ ದಾನ ಮಾಡುವ ಮೂಲಕ ಸಾಮಾಜಿಕ ಹೊಣೆಗಾರಿಕೆಯನ್ನು ನಿರ್ವಹಿಸುತ್ತಿದ್ದಾರೆ. ಆ ಮೂಲಕ 'ದೇಶದಲ್ಲಿ ಪ್ಲಾಸ್ಮಾ ದಾನ ಮಾಡಿದ ಮೊದಲ ಶಾಸಕ' ಎಂಬ ಹೆಗ್ಗಳಿಕೆಗೂ ಪಾತ್ರರಾಗುತ್ತಿದ್ದಾರೆ. ಅವರೇ ಕುಣಿಗಲ್ ಶಾಸಕ ಡಾ. ರಂಗನಾಥ್.
ಬುಧವಾರ(ಆ.19) ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಕಾರ್ಪೋರೇಷನ್ ಕೇಂದ್ರ ಕಚೇರಿ ಹಿಂಭಾಗದಲ್ಲಿರುವ ಎಚ್.ಸಿ.ಜಿ. (HCG) ಕ್ಯಾನ್ಸರ್ ಆಸ್ಪತ್ರೆಯಲ್ಲಿ ಶಾಸಕ ಡಾ. ರಂಗನಾಥ್ ಪ್ಲಾಸ್ಮಾ ದಾನ ಮಾಡಲಿದ್ದಾರೆ.
ಕಳೆದ ತಿಂಗಳು ಕರೊನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾದ ಶಾಸಕರು ತಮ್ಮ ದೇಹದ ಪ್ಲಾಸ್ಮಾವನ್ನು ಇಬ್ಬರು ಕರೊನಾ ರೋಗಿಗಳಿಗೆ ದಾನ ಮಾಡಲು ನಿರ್ಧರಿಸಿದ್ದಾರೆ.
ಕೋವಿಡ್ ಸೋಂಕು ಉಲ್ಬಣಗೊಳ್ಳುತ್ತಿದ್ದಂತೆ ಜನರು ಮಾನವೀಯತೆ ಮರೆತು ವರ್ತಿಸುತ್ತಿದ್ದಾರೆ. ಕುಟುಂಬ ಸದಸ್ಯರ ಕಷ್ಟಕ್ಕೂ ಕೈ ಚಾಚುತ್ತಿಲ್ಲ, ಸಾವು-ನೋವಿನಲ್ಲೂ ಭಾಗಿಯಾಗುತ್ತಿಲ್ಲ... ಎಂಬ ಆತಂಕಕಾರಿ ವಾತಾವರಣದ ನಡುವೆಯೂ ಸಹಾಯ ಗುಣ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಸಾಕ್ಷಿಯಾಗುತ್ತಿದ್ದಾರೆ ಡಾ. ರಂಗನಾಥ್.
ಡಾ. ರಂಗನಾಥ್ ಅವರು ಕುಣಿಗಲ್ ಕ್ಷೇತ್ರದ ಜನರಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ವಿಟಮಿನ್ ಸಿ, ಡಿ ಮತ್ತು ಝಿಂಕ್ ಮಾತ್ರೆಗಳನ್ನು ಉಚಿತವಾಗಿ ಹಂಚಿದ್ದರು. ಇದೀಗ ಪ್ಲಾಸ್ಮಾ ದಾನ ಮಾಡುವ ಮೂಲಕ ಇತರರಿಗೂ ಪ್ರೇರಣೆಯಾಗುತ್ತಿದ್ದಾರೆ.