ಆರೋಪ ಸಾಬೀತುಪಡಿಸಿದ್ರೆ ನೇಣು ಹಾಕಿಕೊಳ್ಳುವೆ, ಆಗಿಲ್ಲಂದ್ರೆ ನೀನೇನು ಮಾಡ್ತಿ?: ಸಂಸದರಿಗೆ ಶಾಸಕರ ಸವಾಲು

Swamy vs Swamy
Published on

ಕೋಲಾರ: ವಿಧಾನಸಭಾ ಚುನಾವಣೆ ಪ್ರಚಾರದಲ್ಲಿ ವಾಗ್ದಾಳಿಗಳು ಯಾವ ಮಟ್ಟಕ್ಕೆ ಇಳಿದಿವೆಯೆಂದರೆ ಜನಪ್ರತಿನಿಧಿ ಎನಿಸಿಕೊಂಡವರು ಸಾರ್ವಜನಿಕವಾಗಿ ಆತ್ಮಹತ್ಯೆಯ ಮಾತನ್ನಾಡುವಂಥ ಪ್ರಸಂಗ ನಡೆದಿದೆ. ಕೋಲಾರದಲ್ಲಿ ಸಂಸದ-ಶಾಸಕರ ನಡುವೆ ಇಂಥದ್ದೊಂದು ಸನ್ನಿವೇಶ ನಡೆದಿದೆ.

ಸಂಸದ ಮುನಿಸ್ವಾಮಿ ವಿರುದ್ಧ ಕೋಲಾರದಲ್ಲಿ ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಈ ಸವಾಲೆಸೆದಿದ್ದಾರೆ. ನಿಮ್ಮಪ್ಪನಿಗೆ ನೀನು ಹುಟ್ಟಿದ್ರೆ ನಾನು ಕೊಲೆ ಮಾಡಿದ್ದೇನೆಂದು ಸಾಬೀತುಪಡಿಸು, ಆಗ ನಾನು ಬಜಾರ್​ನಲ್ಲಿ ನೇಣು ಹಾಕಿಕೊಳ್ಳುವೆ. ಇಲ್ಲ ಎಂದರೆ ನೀನು ಏನು ಮಾಡುತ್ತೀಯ? ಎಂದು ನಾರಾಯಣಸ್ವಾಮಿ ಸವಾಲ್ ಎಸೆದಿದ್ದಾರೆ.

ಆ ಮುನಿಸ್ವಾಮಿ ನಾಲಿಗೆಗೆ ಮೆದುಳಿಗೂ ಸಂಪರ್ಕ ಇಲ್ಲ. ಡಿ.ಕೆ.ರವಿ ಹಾಗೂ ತಹಸೀಲ್ದಾರ್ ಚಂದ್ರಮೌಳೇಶ್ವರ ಸಾವಿಗೆ ನಾನು ಹೇಗೆ ಕಾರಣ? ಚಂದ್ರಮೌಳೇಶ್ವರ ನನಗೆ ಪ್ರೀತಿಯ ಶಿಷ್ಯ, ನಾನೇ ಬೇಕು ಎಂದು ಇಲ್ಲಿಗೆ ಹಾಕಿಸಿಕೊಂಡು ಬಂದಿದ್ದು. ಅವರನ್ನು ನಾನು ಕೊಲೆ ಮಾಡಿದ್ದೇನೆ ಎಂದು ಹೇಳಿತ್ತಿರುವ ನೀನು ಸಾಬೀತುಪಡಿಸು ಎಂದು ಚಾಲೆಂಜ್ ಹಾಕಿದ್ದಾರೆ.

ಗಾಳಿಯಲ್ಲಿ ಬಂದವನು ನೀನು, ಈ ಬಾರಿ ನೀನು ಬೋರ್ಡಿಗೂ ಇರಲ್ಲ. ನಾಲ್ಕು ವರ್ಷಗಳಲ್ಲಿ ನೀನು ಮಾಡಿರುವ ಅಭಿವೃದ್ದಿ ಝೀರೋ. ಬಂಗಾರಪೇಟೆಯಲ್ಲಿ ಸರ್ಕಾರಿ ಗೋಮಾಳ ನುಂಗಿದ್ದಾನೆ ಎಂದು ಆರೋಪ ಮಾಡ್ತಿ. ಎರಡೂ ಕೆರೆಗಳಲ್ಲಿ ಒಂದು ಅಡಿ ಜಾಗ ಒತ್ತುವರಿ ಮಾಡಿದ್ರೆ ಚುನಾವಣೆಗೇ ನಿಲ್ಲುವುದಿಲ್ಲ. ಸಾಯುವ ತನಕ ನಿನ್ನ ಮನೆಯಲ್ಲಿ ಜೀತಕ್ಕಿರುವೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net