ಹನಿಮೂನ್​ಗೆ ತೆರಳಿದ್ದ ದಂಪತಿ ಕಾಣೆ! ಗಂಡನ ಮೃತದೇಹ ಪತ್ತೆ, ಪತ್ನಿ ಇನ್ನೂ ಮಿಸ್ಸಿಂಗ್​; ಕಾಲ್​ ರೆಕಾರ್ಡಿಂಗ್​​....​ | Missing Case

ವಿಜಯವಾಣಿ (23)
Published on

Missing Case: ಹನಿಮೂನ್​ ಸಲುವಾಗಿ ಮೇಘಾಲಯದ ಚಿರಾಪುಂಜಿಗೆ ಪ್ರಯಾಣಿಸಿದ್ದ ಇಂದೋರ್​ ಮೂಲದ ನವಜೋಡಿ, ಟ್ರೆಕ್ಕಿಂಗ್​ ಮಾಡಲು ಹೋಗಿ ಕಾಣೆಯಾದ ಘಟನೆ ಸದ್ಯ ಕುಟುಂಬಸ್ಥರನ್ನು ಅಕ್ಷರಶಃ ಕಂಗಾಲಾಗಿಸಿದೆ.

ಮಿಸ್ಸಿಂಗ್ ಕೇಸ್​ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವ ಪೊಲೀಸರಿಗೆ ವ್ಯಕ್ತಿಯ ಮೃತದೇಹ ಸಿಕ್ಕಿದ್ದು, ಕಾಣೆಯಾದ ದೇಹ ಮಹಿಳೆಯ ಪತಿಯದ್ದೇ ಎಂಬುದು ಕೈಯಲ್ಲಿದ್ದ ಟ್ಯಾಟೂ ಗುರುತಿನಿಂದ ದೃಢವಾಗಿದೆ. ಚಿರಾಪುಂಜಿಯ ವೈಸಾಡಾಂಗ್ ಕಣಿವೆಯ ಜಲಪಾತದ ಬಳಿ ಬಂಡೆಯಲ್ಲಿ ನವಜೋಡಿಗೆ ಸಂಬಂಧಿಸಿದ ಬಟ್ಟೆ ಸಿಲುಕಿರುವುದು ಪತ್ತೆಯಾಗಿದೆ. ಮಹಿಳೆಯ ಪತಿ ಧರಿಸಿದ್ದ ಬಿಳಿ ಶರ್ಟ್ ಬಂಡೆಗೆ ಸಿಕ್ಕಿಕೊಂಡಿರುವುದು ಕಂಡುಬಂದಿದೆ.

ಆ ಪ್ರದೇಶದಲ್ಲಿ ನಿರಂತರ ಮಳೆಯಿದ್ದ ಹಿನ್ನೆಲೆ ಶರ್ಟ್ ವಿಪರೀತ ಕೊಳೆಯಾಗಿರುವುದು ಸ್ಪಷ್ಟವಾಗಿದೆ. ನಾಪತ್ತೆಯಾದ ಜೋಡಿಯ ಪೈಕಿ ಗಂಡನ ಮೃತದೇಹ ಪೊಲೀಸರಿಗೆ ಸಿಕ್ಕಿದ್ದೇ ಆದರೂ ಯುವತಿಯ ಸುಳಿವು ಮಾತ್ರ ಇನ್ನೂ ದೊರತಿಲ್ಲ. ಮೃತ ವ್ಯಕ್ತಿಯ ಬಲಗೈಯಲ್ಲಿದ್ದ ಸ್ಮಾರ್ಟ್‌ವಾಚ್ ಆತನ ಕೈಯಲ್ಲೇ ಇತ್ತು. ದೇಹವು ಸ್ವಲ್ಪ ಕೊಳೆತಿತ್ತು. ಪೊಲೀಸರು ಡ್ರೋನ್ ಬಳಸಿ ಮೃತದೇಹವನ್ನು ಪತ್ತೆಹಚ್ಚಿದ್ದಾರೆ. ಶವ ಹಲವು ಗಂಟೆಗಳಿಂದ ಇಲ್ಲೇ ಇದ್ದಂತೆ ತೋರಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಾಣೆಯಾದ ನವಜೋಡಿಗಳ ಹೆಸರು ಸೋನಮ್ (24) ಮತ್ತು ಆಕೆಯ ಗಂಡ ರಾಜ ರಘುವಂಶಿ (28) ಎಂದು ಹೇಳಲಾಗಿದೆ. ಮಿಸ್ಸಿಂಗ್ ಕೇಸ್​ನಡಿ ತನಿಖೆ ಕೈಗೊಂಡ ಪೊಲೀಸರು, ವೀಸಾ ಡ್ಯಾಂ ಕಣಿವೆಯಲ್ಲಿ ಕೆಲವು ದುಷ್ಕರ್ಮಿಗಳು ರಘುವಂಶಿಯನ್ನು ಇರಿದು ಕೊಂದಿದ್ದಾರೆ ಎಂದು ಎಸ್‌ಐಟಿ ದೃಢಪಡಿಸಿದೆ ಎಂದಿದ್ದಾರೆ. ಪೊಲೀಸರು ಮೃತದೇಹದ ಜೊತೆಗೆ ಚಾಕು, ಸ್ಮಾರ್ಟ್‌ಫೋನ್ ವಶಪಡಿಸಿಕೊಂಡಿದ್ದಾರೆ.

ಕೊನೆಯ ಫೋನ್ ಕಾಲ್​...

ಕಾಡಿನಲ್ಲಿ ಟ್ರೆಕ್ಕಿಂಗ್​ಗೆ ಮುಂದಾಗಿದ್ದ ಸೋನಮ್​, ಇದಕ್ಕೂ ಮೊದಲು ತನ್ನ ಅತ್ತೆಗೆ ದೂರವಾಣಿ ಕರೆ ಮಾಡಿ ಮಾತಾಡಿದ್ದಳು. ಈ ಕಾಲ್ ರೆಕಾರ್ಡಿಂಗ್ ಇದೀಗ ಪೊಲೀಸರಿಗೆ ಲಭಿಸಿದೆ. "ಈಗ ಬೆಟ್ಟ ಏರುತ್ತಿದ್ದೇವೆ. ಆ ಮೇಲೆ ಮಾತಾಡ್ತೀವಿ. ನಾವೊಂದು ದಟ್ಟ ಅರಣ್ಯದ ಮಧ್ಯೆ ಇದ್ದೀವಿ. ಇಲ್ಲಿ ಏನೂ ಸಿಗಲ್ಲ. ಇಲ್ಲಿಗೆಲ್ಲ ಹೋಗೋದು ಬೇಡ ಅಂತ ರಾಜಾಗೆ ಹೇಳ್ತಿದ್ದೀನಿ. ಆದ್ರೆ, ಅವರೆಲ್ಲಿ ಕೇಳ್ತಾರೆ. ನನಗಂತು ಸಾಕಾಗಿದೆ. ಇಲ್ಲಿ ಊಟ ಕೂಡ ಸರಿಯಿಲ್ಲ. ನಡೆಯುತ್ತಾ ಉಸಿರಾಡೋದು ಕಷ್ಟ" ಎಂದು ಸೋನಮ್​ ಹೇಳಿದ್ದಾರೆ. ಇದು ಆಕೆ ತನ್ನ ಅತ್ತೆ ಜೊತೆ ಆಡಿದ ಕೊನೆಯ ಮಾತು ಎನ್ನಲಾಗಿದೆ. ಸದ್ಯ ಪ್ರಕರಣದ ತನಿಖೆ ಮುಂದುವರೆದಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net