

ಜಗತ್ತಿನ ಪಾಲಿಗೆ ‘ಎಂಎಚ್-370’ ಬಿಡಿಸಲಾಗದ ಒಗಟಾಗಿದೆ. ಈ ವಿಮಾನ ಕಣ್ಮರೆಯಾಗಿ ಮಾರ್ಚ್ 8ಕ್ಕೆ ಸರಿಯಾಗಿ 10 ವರ್ಷ ತುಂಬುತ್ತದೆ. ಆದರೂ ಈ ರಹಸ್ಯವನ್ನು ಭೇದಿಸಲು ಯಾರಿಂದಲೂ ಸಾಧ್ಯವಾಗಿಲ್ಲ. ಆಕಾಶ, ಕಡಲಾಳ ಸೇರಿದಂತೆ ಶೋಧ ಕೈಗೊಳ್ಳದ ಜಾಗವೇ ಇಲ್ಲ. ಆದರೆ, ಫಲಿತಾಂಶ ಮಾತ್ರ ಶೂನ್ಯ. ವಿಮಾನಯಾನ ಕ್ಷೇತ್ರ ತಾಂತ್ರಿಕವಾಗಿ ಎಷ್ಟೇ ಮುಂದುವರಿದರೂ ‘ಕಣ್ಮರೆ ಕಥೆ’ಗೆ ಹುಟ್ಟಿಕೊಂಡಿದ್ದು ಬರೀ ರೆಕ್ಕೆಪುಕ್ಕಗಳು. ರ್ತಾಕ ಅಂತ್ಯ ಯಾರಿಂದಲೂ ಸಾಧ್ಯವಾಗಿಲ್ಲ. ವಿಶ್ವದ ದಿಗ್ಗಜ ತಂತ್ರಜ್ಞಾನ ಸಂಸ್ಥೆಗಳು ಪ್ರಯತ್ನಿಸಿ ಕೈಚೆಲ್ಲಿ ಕುಳಿತಿವೆ.
ದೀಪಕ ತಲವಾಯಿ ಹುಬ್ಬಳ್ಳಿ
‘ಗುಡ್ ನೈಟ್. ಮಲೇಷಿಯನ್ ತ್ರಿ ಸೆವೆನ್ ಜಿರೋ’.
ಕೌಲಾಲಂಪುರನಿಂದ ಬೀಜಿಂಗ್ಗೆ ಹೊರಟಿದ್ದ ಮಲೇಷಿಯಾ ಏರ್ಲೈನ್ಸ್ -370 ವಿಮಾನದ ಕಾಕ್ಪಿಟ್ನಿಂದ ಕೇಳಿ ಬಂದ ಕೊನೆಯ ಶಬ್ದಗಳಿವು. 2014, ಮಾರ್ಚ್ 8ರ ತಡರಾತ್ರಿ ವಿಮಾನ ಶುಭ್ರ ಆಕಾಶಕ್ಕೆ ಹಾರಿ ಒಂದು ಗಂಟೆಯಾಗಿತ್ತು. ಪ್ರಯಾಣಿಕರು ಬಹುಶಃ ನಿದ್ದೆಯಲ್ಲಿದ್ದರು. ಆಗ ಈ ಬೃಹತ್ ವಿಮಾನ, ರೇಡಾರ್ ಪರದೆಯಿಂದ ಕಣ್ಮರೆಯಾಗಿತ್ತು. ಎಂಎಚ್-370 ಸಣ್ಣ ವಿಮಾನವೇನಲ್ಲ. ಅದು ಬೋಯಿಂಗ್ 777 ಜೆಟ್. ಐದು ಅಂತಸ್ತಿನ ಕಟ್ಟಡಕ್ಕಿಂತ ಎತ್ತರವಾಗಿರುವ ಈ ವಿಮಾನದಲ್ಲಿ ಬರೋಬ್ಬರಿ 239 ಜನರಿದ್ದರು. ಇಷ್ಟು ದೊಡ್ಡ ವಿಮಾನಕ್ಕೆ ಏನಾಯಿತು ಎಂಬುದು ಹತ್ತು ವರ್ಷಗಳಾದರೂ ರಹಸ್ಯವಾಗಿಯೇ ಉಳಿದಿದೆ.
ಈ ವಿಮಾನಕ್ಕಾಗಿ ಮಲೇಷಿಯಾ ಸರ್ಕಾರ ಹುಡುಕದ ಜಾಗಗಳಿಲ್ಲ. ಆಸ್ಟ್ರೇಲಿಯಾದ ಪಶ್ಚಿಮ ಕಡಲತೀರದಿಂದ ನೂರಾರು ಮೈಲುಗಳಷ್ಟು ದೂರದಲ್ಲಿರುವ ದಕ್ಷಿಣ ಹಿಂದೂ ಮಹಾಸಾಗರದ ಆಳದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಯಿತು. ಆದರೆ, ವಿಮಾನ ಅಥವಾ ಅದರಲ್ಲಿದ್ದ ಯಾವುದೇ ಪ್ರಯಾಣಿಕರು ಮತ್ತು ಸಿಬ್ಬಂದಿಯ ಕುರುಹು ಕಂಡುಬಂದಿಲ್ಲ. ವಿಮಾನದ ಸಾವಿರಾರು ಘಟಕಗಳಲ್ಲಿ ಕೆಲವೇ ಕೆಲವು ತುಣುಕುಗಳು ಪೂರ್ವ ಆಫ್ರಿಕನ್ ಕರಾವಳಿ ತೀರದಲ್ಲಿ ಸಿಕ್ಕವು ಎಂದು ಹೇಳಲಾಗುತ್ತಿದೆಯಾದರೂ, ಅವು ಕಣ್ಮರೆಯಾದ ವಿಮಾನದ್ದೇ ಭಾಗಗಳು ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ಎಂಎಚ್-370 ಕಣ್ಮರೆ ಆಧುನಿಕ ವಾಯುಯಾನದ ಅತಿದೊಡ್ಡ ರಹಸ್ಯವಾಗಿ ಉಳಿದಿದೆ. ಯಾವುದೇ ಕುರುಹು ಇಲ್ಲದೆ, ಭಗ್ನಾವಶೇಷ ಇಲ್ಲದೆ, ಕಾಣೆಯಾದ ವಿಮಾನವನ್ನು ಪತ್ತೆ ಹಚ್ಚುವುದು ತನಿಖಾಧಿಕಾರಿಗಳಿಗೆ ಸವಾಲಾಗಿದೆ. ಮುಂದೆ ಈ ರೀತಿ ಯಾವುದೇ ವಿಮಾನ ಕಣ್ಮರೆ ಆಗುವುದನ್ನು ತಡೆಯಬೇಕೆಂದರೆ ಈ ವಿಮಾನದ ರಹಸ್ಯವನ್ನು ಪತ್ತೆ ಹಚ್ಚಬೇಕಿದೆ.
239 ಪ್ರಯಾಣಿಕರ ಪೈಕಿ ಐವರು ಭಾರತೀಯರು: ವಿಮಾನದಲ್ಲಿದ್ದ 239 ಪ್ರಯಾಣಿಕರ ಪೈಕಿ ಐವರು ಭಾರತೀಯರು ಇದ್ದರು. ಬೀಜಿಂಗ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಮಾಹಿತಿಯ ಪ್ರಕಾರ ಭಾರತೀಯರಾದ ಚೇತನಾ ಕೋಲೇಕರ್, ಸ್ವಾನಂದ್ ಕೋಲೇಕರ್, ಸುರೇಶ ಕೋಲೇಕರ್, ಚಂದ್ರಿಕಾ ಶರ್ಮಾ ಮತ್ತು ಪ್ರಹ್ಲಾದ್ ಶಿರಸಾಟ ಎಂಬುವರು ವಿಮಾನದಲ್ಲಿದ್ದರು. ಭಾರತೀಯ ಮೂಲದ ಕೆನಡಾದ ಮುಕ್ತೇಶ್ ಮುಖರ್ಜಿ ಕೂಡ ದುರ್ದೈವಿ ವಿಮಾನದಲ್ಲಿದ್ದರು.
ಮತ್ತೆ ಶೋಧ: ವಿಮಾನ ಕಣ್ಮರೆಯಾದ ಹತ್ತು ವರ್ಷಗಳ ನಂತರ ಮಲೇಷಿಯಾ ಸರ್ಕಾರ ಮತ್ತೊಮ್ಮೆ ಶೋಧ ಕಾರ್ಯಾಚರಣೆ ನಡೆಸಲು ಆಸಕ್ತಿ ತೋರಿದೆ. ಅಮೆರಿಕದ ಟೆಕ್ಸಾಸ್ ಮೂಲದ ಓಷಿಯನ್ ಇನ್ಪಿನಿಟಿ ಸಂಸ್ಥೆ ಮತ್ತೊಮ್ಮೆ ಹುಡುಕಾಟ ನಡೆಸಲು ಮುಂದಾಗಿದೆ. ಓಷಿಯನ್ ಇನ್ಪಿನಿಟಿ 2018ರಲ್ಲಿ ಮೊದಲ ಬಾರಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ವಿಫಲವಾಗಿತ್ತು. ಇದೀಗ ಮತ್ತೊಮ್ಮೆ ಶೋಧಕ್ಕೆ ಮುಂದಾಗಿರುವ ಕಂಪನಿ ವಿಮಾನದ ಅವಶೇಷಗಳನ್ನು ಹುಡುಕಿ ಕೊಟ್ಟರೆ ಮಾತ್ರ ಅದರ ಹಣ ಪಡೆಯುವುದಾಗಿ ಹೇಳಿಕೊಂಡಿದೆ. ಇದಕ್ಕೆ ಮಲೇಷಿಯಾ ಸರ್ಕಾರವೂ ಸಹಮತ ತೋರಿದ್ದು, ಈ ಬಾರಿಯ ಶೋಧ ಕಾರ್ಯಾಚರಣೆಯ ಫಲಿತಾಂಶ ಏನಾಗಬಹುದು ಎಂಬುದು ಕುತೂಹಲ ಮೂಡಿಸಿದೆ.
ಚಿತ್ರವಿಚಿತ್ರ ಕಥೆಗಳು: ಯಾವುದೇ ಸಾಕ್ಷ್ಯ ಇಲ್ಲದ್ದರಿಂದ ವಿಮಾನ ಕಣ್ಮರೆ ಕುರಿತು ಕಟ್ಟುಕಥೆ ಹುಟ್ಟಿಕೊಂಡಿವೆ. ಉಗ್ರರು ಹೈಜಾಕ್ ಮಾಡಿದ್ದಾರೆ, ಅಫ್ಘಾನಿಸ್ತಾನ, ಪಾಕಿಸ್ತಾನ ಅಥವಾ ಇನ್ನಾವುದೋ ಸ್ಥಳಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂಬುದು ಕೆಲವರ ತರ್ಕ. ಅಮೆರಿಕ, ಚೀನಾದಂತಹ ಮಿಲಿಟರಿ ಪಡೆಗಳು ಕ್ಷಿಪಣಿಯಿಂದ ಹೊಡೆದುರುಳಿಸಿವೆ. ನಂತರ ಇದರಿಂದ ಆಗಬಹುದಾದ ರಾಜತಾಂತ್ರಿಕ ಪರಿಣಾಮಗಳನ್ನು ಮುಚ್ಚಿಹಾಕಲು ಘಟನೆಯನ್ನು ಮರೆಮಾಚಲಾಗಿದೆ ಎಂಬುದು ಕೆಲವರ ಊಹೆ. ಸಂವಹನ ಮತ್ತು ನ್ಯಾವಿಗೇಷನ್ ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸಿ ಅಜ್ಞಾತ ಸ್ಥಳಕ್ಕೆ ಒಯ್ಯಲಾಗಿದೆ ಎಂದು ಹೇಳಲಾಗುತ್ತದೆ. ಇನ್ನು ಕೆಲವರು ಹೇಳುವುದೇ ಬೇರೆ. ಈ ವಿಮಾನ ಯಾವುದೋ ನಿಗೂಢ ದ್ವೀಪದಲ್ಲಿದೆ ಅಂತೆ, ಬಮುಡಾ ಟ್ರಯಾಂಗಲ್ನಲ್ಲಿ ಬಿದ್ದಿದೆಯಂತೆ, ಭೂತಕಾಲದ ಯಾವುದೋ ಯುಗಕ್ಕೆ ಹೋಗಿದೆಯಂತೆ... ಹೀಗೆ, ಹಲವಾರು ಅಂತೆಕಂತೆಗಳ ಕಥೆಗಳು ಚಾಲ್ತಿಯಲ್ಲಿವೆ. ಆದರೆ, ಇವುಗಳಿಗೆ ಸಾಕ್ಷ್ಯ ಇಲ್ಲದ್ದರಿಂದ ಇವೆಲ್ಲ ಕೇವಲ ಕಾಲ್ಪನಿಕ ಎಂದು ತಜ್ಞರು ಹೇಳಿದ್ದಾರೆ.