

| ಅವಿನಾಶ ಮೂಡಂಬಿಕಾನ ಬೆಂಗಳೂರು
ರಾಜ್ಯದಲ್ಲಿ ಕರೊನಾ ನಿಯಂತ್ರಿಸಲು ಜಾರಿಗೆ ತಂದಿದ್ದ ಲಾಕ್ಡೌನ್ನಿಂದ ಕಂಗೆಟ್ಟು ಹೋಗಿರುವ ಸಣ್ಣ-ಪುಟ್ಟ ವ್ಯಾಪಾರಿಗಳು, ಆಟೋ ಚಾಲಕರು, ರೈತರು ಮೀಟರ್ ಬಡ್ಡಿ ದಂಧೆಯ ಸುಳಿಗೆ ಸಿಲುಕಿಕೊಳ್ಳುತ್ತಿದ್ದಾರೆ. ಸಣ್ಣಪುಟ್ಟ ವ್ಯಾಪಾರಿಗಳ ಅನುಕೂಲಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ಬಡವರ ಬಂಧು ಯೋಜನೆ ಕೂಡ ನೆರವಾಗುತ್ತಿಲ್ಲ.
ಸಣ್ಣ-ಪುಟ್ಟ ತರಕಾರಿ, ಹಣ್ಣಿನ ವ್ಯಾಪಾರಿಗಳು, ದಿನಸಿ ಅಂಗಡಿ ಮಾಲೀಕರು, ಬೀದಿಬದಿ ವ್ಯಾಪಾರಿಗಳು, ಆಟೋ ಚಾಲಕರು ಮೀಟರ್ ಬಡ್ಡಿ ದಂಧೆಗೆ ಸಿಲುಕುತ್ತಿದ್ದಾರೆ. ಸಾಲ ನೀಡುವ ಮುನ್ನ ಸಹಿ ಹಾಕಿದ ಖಾಲಿ ಚೆಕ್ಗಳು, ಜಾಮೀನು ಪತ್ರ, ಪಿತ್ರಾರ್ಜಿತ ಆಸ್ತಿ, ವಾಹನ, ಮನೆ ಬರೆಸಿಕೊಳ್ಳುವುದರ ಜತೆಗೆ ಖಾಲಿ ಬಾಂಡ್ ಪೇಪರ್ ಮೇಲೆ ಸಹಿ ಮಾಡಿಸಿಕೊಳ್ಳುತ್ತಾರೆ. ಶೇ.50ರಿಂದ ಶೇ.100 ಬಡ್ಡಿಗೆ ಸಾಲ ಕೊಟ್ಟು ಬಡವರನ್ನು ನರಕಕ್ಕೆ ತಳ್ಳುತ್ತಾರೆ. ಇಷ್ಟಾದರೂ ಸಾಲ ಪಡೆದು ಸ್ವತ್ತು ಕಳೆದುಕೊಂಡ ಸಾವಿರಾರು ಜನ ಪೊಲೀಸ್ ಠಾಣೆ ಮೆಟ್ಟಿಲೇರಲು ಹಿಂದೇಟು ಹಾಕುತ್ತಿದ್ದಾರೆ. ಪರಿಣಾಮ ಕಳೆದ 5 ವರ್ಷಗಳಲ್ಲಿ ರಾಜ್ಯದಲ್ಲಿ ಕೇವಲ 368 ಕೇಸ್ಗಳು ದಾಖಲಾಗಿವೆ.
ಬಡವರ ಬಂಧು ವಿಫಲ: ಆರ್ಥಿಕ ಸಂಕಷ್ಟದಲ್ಲಿರುವ ಜನ ಸಾಮಾನ್ಯರ ನೆರವಿಗಾಗಿ ಸರ್ಕಾರ ‘ಬಡವರ ಬಂಧು’ ಯೋಜನೆ ಆರಂಭಿಸಿದೆ. 2ರಿಂದ 10 ಸಾವಿರ ರೂ.ವರೆಗೆ ಕಡಿಮೆ ಬಡ್ಡಿಗೆ ಸಾಲ ಕೊಡುವ ಸೌಲಭ್ಯವಿದೆ. ಈ ಯೋಜನೆ ಬಗ್ಗೆ ಶೇ.70 ವ್ಯಾಪಾರಿಗಳಿಗೆ ಮಾಹಿತಿಯೇ ಇಲ್ಲ. ಉಳಿದ ಶೇ.30 ಮಂದಿ ಬ್ಯಾಂಕ್ ಸುತ್ತ ದಾಖಲೆ, ಅರ್ಜಿಗಳನ್ನು ಹಿಡಿದುಕೊಂಡು ಅಲೆಯಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಈ ಯೋಜನೆ ರಾಜ್ಯದಲ್ಲಿ ಅಷ್ಟೊಂದು ಯಶಸ್ವಿಯಾಗಿಲ್ಲ. ಬಡವರ ಮುಗ್ದತೆಯನ್ನೇ ಬಡ್ಡಿ ದಂಧೆಕೋರರು ಬಂಡವಾಳ ಮಾಡಿಕೊಂಡಿದ್ದಾರೆ. ವ್ಯಾಪಾರಿಗಳು ಡಿಸಿಸಿ ಬ್ಯಾಂಕ್ಗಳು, ಮಹಿಳಾ ಸಹಕಾರಿ ಬ್ಯಾಂಕ್ಗಳು, ಪಟ್ಟಣ ಸಹಕಾರ ಬ್ಯಾಂಕ್ಗಳಲ್ಲಿ ಸಾಲ ಪಡೆಯಬಹುದಾಗಿದೆ. ಸಹಕಾರಿ ಬ್ಯಾಂಕ್ಗಳಲ್ಲಿ ಶೂನ್ಯ ಉಳಿತಾಯ ಖಾತೆ ತೆರೆಯಬೇಕು. ನಂತರ ಆಧಾರ್ ಕಾರ್ಡ್, ಬಿಪಿಎಲ್ ಕಾರ್ಡ್, ವ್ಯಾಪಾರ ನಡೆಸುತ್ತಿರುವ ಸ್ಥಳದ ಫೋಟೋ ಮತ್ತು ಸ್ಥಳೀಯ ಸಂಸ್ಥೆಗಳು ನೀಡಿರುವ ಗುರುತಿನ ಚೀಟಿ ಜತೆ ಸಹಕಾರಿ ಬ್ಯಾಂಕ್ಗಳು ನಿಗದಿಪಡಿಸಿದ ಅರ್ಜಿ ಆಯಾ ಬ್ಯಾಂಕಿಗೆ ಸಲ್ಲಿಸಬೇಕು.
ಏನು ಶಿಕ್ಷೆ?: ಕರ್ನಾಟಕ ಮನಿ ಲ್ಯಾಂಡರಿಂಗ್ ಕಾಯ್ದೆ ಪ್ರಕಾರ ಒತ್ತಾಯಪೂರ್ವಕ ಸಾಲ ಮತ್ತು ಬಡ್ಡಿ ವಸೂಲಿಗೆ 1 ವರ್ಷ ಶಿಕ್ಷೆ, 50 ಸಾವಿರ ರೂ. ದಂಡ ವಿಧಿಸಲಾಗಿದೆ. ಈ ಪ್ರಕರಣ ದಲ್ಲಿ ಶಿಕ್ಷೆಯಾಗಿರುವುದು ಬಹಳ ವಿರಳ. ಇದರಿಂದ ಲೇವಾದೇವಿದಾರರಿಗೆ ಬಿಸಿ ಮುಟ್ಟಿಸಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕಠಿಣ ಕಾನೂನು ಕ್ರಮ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದೆ.
ಮೀಟರ್ ಬಡ್ಡಿ ದಂಧೆಯಿಂದ ಬಡವರ ಮೇಲೆ ಶೋಷಣೆಗಳು ನಡೆಯುತ್ತವೆ. ಇಂತಹ ಪ್ರಕರಣಗಳು ಗಮನಕ್ಕೆ ಬಂದ ಕೂಡಲೇ ದಂಧೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. | ಕಮಲ್ ಪಂತ್ ಪೊಲೀಸ್ ಆಯುಕ್ತ, ಬೆಂಗಳೂರು.
ಯಾದಗಿರಿ: ಸಾಲದ ಬಾಧೆ ತಾಳದೆ ನಾಲ್ಕು ವರ್ಷದ ಕಂದಮ್ಮನ ಜತೆ ಒಂದೇ ಕುಟುಂಬದ ಆರು ಜನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆೆ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. ಭೀಮರಾಯ ಸುರಪುರ (45), ಶಾಂತಮ್ಮ ಸುರಪುರ (36), ಸುಮಿತ್ರಾ (12), ಶ್ರೀದೇವಿ (13), ಶಿವರಾಜ (9), ಲಕ್ಷ್ಮೀ (4) ಮೃತರು. ತನ್ನ ಜಮೀನಿನಲ್ಲಿನ ಬಾವಿಗೆ ಹಾರಿ ಕುಟುಂಬ ಸದಸ್ಯರು ಪ್ರಾಣಬಿಟ್ಟಿದ್ದಾರೆ.
ಭೀಮರಾಯ ಮತ್ತು ಕುಟುಂಬ ಸದಸ್ಯರು ಒಂದೆರಡು ಗಂಟೆಯಾದರೂ ಮನೆಗೆ ಬಾರದ್ದರಿಂದ ಸಹೋದರ ಕರೆ ಮಾಡಿದ್ದಾನೆ. ಭೀಮರಾಯ ಮೊಬೈಲ್ ಸ್ವಿಚ್ಆಫ್ ಆಗಿದ್ದರಿಂದ ಅನುಮಾನಗೊಂಡ ಕುಟುಂಬಸ್ಥರು ಹೊಲಕ್ಕೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ತೋಟಗಾರಿಕೆ ಬೆಳೆ ಬೆಳೆಯಲು ಭೀಮರಾಯ ಗೆಳೆಯರಿಂದ 20 ಲಕ್ಷ ಕೈ ಸಾಲ ಪಡೆದಿದ್ದು, ತೀರಿಸಲು ಆಗಿರಲಿಲ್ಲ. ಈ ಬಾಧೆಯಿಂದಲೇ ಕುಟುಂಬ ಸದಸ್ಯರೆಲ್ಲರೂ ಸಾವಿಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ. ವಿಷಯ ತಿಳಿಯುತ್ತಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ ಸಿಬ್ಬಂದಿ, ಮೃತದೇಹಗಳನ್ನು ಹೊರತೆಗೆದಿದ್ದಾರೆ. ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾಲವೇ ಆತ್ಮಹತ್ಯೆಗೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.