

ನವದೆಹಲಿ: ಹ್ಯಾಕ್ ಮಾಡಿ ಸಿಕ್ಕಿಹಾಕಿಕೊಂಡರೆ ಜೈಲುವಾಸ ಗ್ಯಾರಂಟಿ. ಆದರೆ ಇಲ್ಲೊಬ್ಬಳಿಗೆ ಹ್ಯಾಕ್ ಮಾಡಿದ್ದಕ್ಕೇ ಲಕ್ಷಗಟ್ಟಲೆ ರೂಪಾಯಿ ಇನಾಮು ಸಿಕ್ಕಿದೆ. ಅದರಲ್ಲೂ ಆಕೆ ಹ್ಯಾಕ್ ಮಾಡಿದ್ದು ಭಾರಿ ದೊಡ್ಡ ಕಂಪನಿಗಳ ವ್ಯವಸ್ಥೆಯನ್ನೇ. ಹೌದು.. ಮೈಕ್ರೋಸಾಫ್ಟ್ ಹಾಗೂ ಫೇಸ್ಬುಕ್ ಕಂಪನಿಗಳ ಐಟಿ ವ್ಯವಸ್ಥೆಯನ್ನು ಹ್ಯಾಕ್ ಮಾಡಿದ್ದಕ್ಕೆ ಈಕೆಗೆ ಲಕ್ಷಾಂತರ ರೂಪಾಯಿ ಆ ಕಂಪನಿಗಳಿಂದಲೇ ಸಿಕ್ಕಿದೆ. ಏಕೆಂದರೆ ಈಕೆ ಎಥಿಕಲ್ ಹ್ಯಾಕರ್.
ಹೀಗೆ ಹ್ಯಾಕ್ ಮಾಡಿಯೇ ಲಕ್ಷಗಟ್ಟಲೆ ರೂಪಾಯಿ ಗಿಟ್ಟಿಸಿಕೊಂಡಿರುವ ಯುವತಿಯ ಹೆಸರು ಅದಿತಿ ಸಿಂಗ್. ದೆಹಲಿಯ 20 ವರ್ಷದ ಈಕೆ ಎಥಿಕಲ್ ಹ್ಯಾಕರ್ ಆಗಿದ್ದು, ಮೈಕ್ರೋಸಾಫ್ಟ್ ಕಂಪನಿಯ ಅಜ್ಯೂರ್ ಕ್ಲೌಡ್ ಸಿಸ್ಟಮ್ನಲ್ಲಿ ರಿಮೋಟ್ ಕೋಡ್ ಎಕ್ಸಿಕ್ಯೂಷನ್(ಆರ್ಸಿಇ) ಬಗ್ ಇರುವುದನ್ನು ಕಂಡುಹಿಡಿದಿದ್ದಾಳೆ. ಇದಕ್ಕೋಸ್ಕರ ಮೈಕ್ರೋಸಾಫ್ಟ್ ಕಂಪನಿ ಈಕೆಗೆ 22 ಲಕ್ಷ ರೂ. ಬಹುಮಾನವಾಗಿ ಕೊಟ್ಟಿದೆ.
ಎರಡು ತಿಂಗಳ ಹಿಂದೆ ಫೇಸ್ಬುಕ್ ಹ್ಯಾಕ್ ಮಾಡಿರುವ ಈಕೆ ಅಲ್ಲಿಯೂ ಇಂಥದ್ದೇ ಬಗ್ ಕಂಡುಹಿಡಿದಿದ್ದು, ಫೇಸ್ಬುಕ್ ಸಂಸ್ಥೆ ಕೂಡ ಸುಮಾರು ಐದೂವರೆ ಲಕ್ಷ ರೂಪಾಯಿ ಬಹುಮಾನ ನೀಡಿದೆ. ಈ ಥರದ ಬಗ್ ಕಂಡುಹಿಡಿದ ಮೊದಲಿಗಳು ಎಂಬ ಹೆಗ್ಗಳಿಕೆ ಅದಿತಿಯದ್ದಾಗಿದ್ದು, ಈಕೆ ಹ್ಯಾಕ್ ಮಾಡಿ ಈ ಬಗ್ ಕುರಿತು ಮೈಕ್ರೋಸಾಫ್ಟ್ನವರಿಗೆ ತಿಳಿಸಿದರೂ ಅವರು ಅದನ್ನು ವಿಶ್ಲೇಷಿಸಿ, ಎಲ್ಲವೂ ಸುರಕ್ಷಿತವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು 2 ತಿಂಗಳು ಬೇಕಾಯಿತಂತೆ.
ಕಳೆದ ಎರಡು ವರ್ಷಗಳಿಂದ ಈಕೆ ಎಥಿಕಲ್ ಹ್ಯಾಕಿಂಗ್ನಲ್ಲಿ ತೊಡಗಿಸಿಕೊಂಡಿದ್ದು, ನಾನು ಮೊದಲಿಗೆ ನಮ್ಮ ಪಕ್ಕದ ಮನೆಯವರ ವೈಫೈ ಪಾಸ್ವರ್ಡ್ ಹ್ಯಾಕ್ ಮಾಡಿದ್ದೆ. ಅಲ್ಲಿಂದ ಹಿಂದೆ ತಿರುಗಿ ನೋಡದೆ ಹ್ಯಾಕಿಂಗ್ನಲ್ಲಿ ಮುಂದುವರಿದೆ. ನಾನು ನೀಟ್ಗೆ ಸಿದ್ಧತೆ ಮಾಡಿಕೊಳ್ಳುತ್ತಿರುವಾಗಲೇ ನನಗೆ ಹ್ಯಾಕಿಂಗ್ನಲ್ಲಿ ಆಸಕ್ತಿ ಮೂಡಿತ್ತು ಎಂದು ಅದಿತಿ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)