ಅರ್ಧಕ್ಕರ್ಧ ಕಡಿತ; ಕಪ್ಪು ಶಿಲೀಂಧ್ರ ರೋಗ ಪತ್ತೆ ಪರೀಕ್ಷೆಗೆ ದರ ನಿಗದಿಪಡಿಸಿದ ಸರ್ಕಾರ

F 1
Published on

ಬೆಂಗಳೂರು: ಕರೊನಾ ಹಾವಳಿ ನಡುವೆಯೇ ಜನರನ್ನು ಆತಂಕಕ್ಕೀಡು ಮಾಡಿರುವ ಮತ್ತೊಂದು ರೋಗವೆಂದರೆ ಕಪ್ಪು ಶಿಲೀಂಧ್ರ. ವೈದ್ಯಕೀಯ ಭಾಷೆಯಲ್ಲಿ ಮ್ಯೂಕರ್ ಮೈಕೋಸಿಸ್ ಎಂದು ಕರೆಯಲಾಗುವ ಈ ರೋಗ ಪತ್ತೆಗೆ ನಡೆಸುವ ಪರೀಕ್ಷೆ ದುಬಾರಿಯಾಗಿದ್ದು, ಸರ್ಕಾರ ಅದನ್ನೀಗ ಅರ್ಧಕ್ಕರ್ಧ ಕಡಿತಗೊಳಿಸಿ ಹೊಸ ದರವನ್ನು ನಿಗದಿಪಡಿಸಿದೆ.

ಈ ರೋಗದ ಇರುವಿಕೆಯನ್ನು ಪತ್ತೆ ಹಚ್ಚಿ ಖಚಿತಪಡಿಸಿಕೊಳ್ಳಲು ಸಿಟಿ ಹಾಗೂ ಎಂಆರ್​ಐ ಸ್ಕ್ಯಾನ್​ಗಳ ಸಂಯೋಜನೆಯ ಪರೀಕ್ಷೆ ಅಗತ್ಯವಾಗಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಇದಕ್ಕೆ ಸುಮಾರು 25ರಿಂದ 28 ಸಾವಿರ ರೂಪಾಯಿ ವಿಧಿಸುತ್ತಿದ್ದಾರೆ. ಹೀಗಾಗಿ ಈ ದರವನ್ನು ಖಾಸಗಿ ಆಸ್ಪತ್ರೆಗಳಿಗೆ ಅನ್ವಯಿಸುವಂತೆ ಸರ್ಕಾರವು 12 ಸಾವಿರ ರೂಪಾಯಿಗೆ ನಿಗದಿಪಡಿಸಿದೆ. ಇದು ಬಿಪಿಎಲ್ ಕಾರ್ಡು ಹೊಂದಿರುವವರು ಸೇರಿದಂತೆ ಎಲ್ಲರಿಗೂ ಒಂದೇ ಸಮನಾಗಿ ಅನ್ವಯಿಸಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಉಳಿದಂತೆ ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ, ಸರ್ಕಾರದಿಂದ ನಡೆಸುವ ಸಂಸ್ಥೆಗಳಲ್ಲಿ, ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಕಪ್ಪು ಶಿಲೀಂಧ್ರ ರೋಗಪತ್ತೆಯನ್ನು ಉಚಿತವಾಗಿ ನಡೆಸುವಂತೆ ಸರ್ಕಾರ ಸೂಚಿಸಿದೆ.

ಅಲ್ಲದೆ ಈ ರೋಗ ಪತ್ತೆಗಾಗಿ ಪ್ರತ್ಯೇಕವಾಗಿ ನಡೆಸುವ ಸಿಟಿ ಅಥವಾ ಎಂಆರ್​ಐ ಸ್ಕ್ಯಾನ್​ಗೂ ದರನಿಗದಿಪಡಿಸಿರುವ ಸರ್ಕಾರ, ಎಪಿಎಲ್​ ಹಾಗೂ ಬಿಪಿಎಲ್​ ಕಾರ್ಡುದಾರರಿಗೆ ಈ ಕೆಳಗಿನ ದರವನ್ನು ನಿಗದಿ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net