ಪ್ಯಾನ್​​ ಕಾರ್ಡ್​ಗೆ ಆಧಾರ್ ನಂಬರ್​​ ಲಿಂಕ್​ ಮಾಡಿಲ್ಲವೇ? ಹಾಗಿದ್ದರೆ ನಿಮಗಿದು ಬಹುಶಃ ಕಡೇ ಅವಕಾಶ..

PAN
Published on

ನವದೆಹಲಿ: ಪ್ಯಾನ್​ ಕಾರ್ಡ್​ಗೆ ಆಧಾರ್ ನಂಬರ್ ಲಿಂಕ್ ಮಾಡುವುದು ಕಡ್ಡಾಯವಾಗಿದ್ದು, ಇನ್ನೂ ಹಲವಾರು ಮಂದಿ ಇದನ್ನು ಮಾಡಿಲ್ಲ. ಮತ್ತೊಂದೆಡೆ ಪ್ಯಾನ್​ ಕಾರ್ಡ್​ಗೆ ಆಧಾರ್ ನಂಬರ್ ಲಿಂಕ್ ಮಾಡಲು ಇದೇ ಜೂ. 30 ಕಡೆಯ ದಿನವಾಗಿದ್ದರಿಂದ ಹಲವರು ಚಿಂತಿತರಾಗಿದ್ದರು. ಆದರೆ ಇದೀಗ ಅಂಥವರಿಗೆ ಮತ್ತೊಂದು ಅವಕಾಶ ಸಿಕ್ಕಿದೆ.

ಅದೇನೆಂದರೆ ಪ್ಯಾನ್​ ಕಾರ್ಡ್​ ಹಾಗೂ ಆಧಾರ್ ನಂಬರ್ ಲಿಂಕ್ ಮಾಡಲು ವಿಧಿಸಲಾಗಿದ್ದ ಗಡುವನ್ನು ಸರ್ಕಾರ ಮುಂದೂಡಿದ್ದು, ಸಂಬಂಧಪಟ್ಟವರಿಗೆ ಇನ್ನೂ ಒಂದಷ್ಟ ದಿನಗಳ ಕಾಲಾವಕಾಶ ಸಿಗಲಿದೆ. ಈ ಹಿಂದೆ 2021ರ ಮಾರ್ಚ್ 31ಕ್ಕೆ ಮುಗಿದಿದ್ದ ಗಡುವನ್ನು ವಿಸ್ತರಿಸಿ ಜೂ. 30ರ ವರೆಗೆ ಅವಕಾಶ ನೀಡಲಾಗಿತ್ತು. ಈಗ ಕೊನೆಯ ದಿನಾಂಕವನ್ನು ಮತ್ತೆ ಪರಿಷ್ಕರಿಸಿ ಸೆ. 30ರ ವರೆಗೆ ವಿಸ್ತರಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಲಿಂಕ್ ಮಾಡದಿದ್ದರೆ ಏನಾಗುತ್ತೆ?: ಪ್ಯಾನ್​ ಕಾರ್ಡ್​ ಹಾಗೂ ಆಧಾರ್ ನಂಬರ್ ಲಿಂಕ್ ಮಾಡದಿದ್ದರೆ ಅದು ನಿಷ್ಕ್ರಿಯವಾಗಲಿದೆ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ) ಈ ಹಿಂದೆಯೇ ತಿಳಿಸಿದೆ. ಅಲ್ಲದೆ ಒಂದು ವೇಳೆ ಕಡೆಯ ದಿನಾಂಕದ ಬಳಿಕ ಲಿಂಕ್ ಮಾಡಿದರೆ ಅದರ ಬಗ್ಗೆ ಗಮನಕ್ಕೆ ತಂದಲ್ಲಿ ಆಧಾರ್​ನಿಂದ ಮಾಹಿತಿ ಬರುತ್ತಿದ್ದಂತೆ ಪ್ಯಾನ್​ ಕಾರ್ಡ್​ ಮತ್ತೆ ಸಕ್ರಿಯಗೊಳ್ಳಲಿದೆ ಎಂಬುದನ್ನೂ ಸಿಬಿಡಿಟಿ ಸ್ಪಷ್ಟಪಡಿಸಿತ್ತು. ಇನ್ನು ಆದಾಯ ತೆರಿಗೆ ಕಾಯ್ದೆ 1961ರ ಹೊಸ ಸೆಕ್ಷನ್​ 234 ಎಚ್​ ಕುರಿತು 2021ರ ಬಜೆಟ್​ನಲ್ಲಿ ತಿಳಿಸಿದ್ದ ಸರ್ಕಾರ, ಕಡೇ ದಿನಾಂಕದ ಬಳಿಕ ದಂಡ ಪಾವತಿಸಿದರೆ ಪ್ಯಾನ್ ಕಾರ್ಡ್​ ಮತ್ತು ಆಧಾರ್ ನಂಬರ್ ಲಿಂಕ್ ಮಾಡಲು ಅವಕಾಶ ಇದೆ ಎಂದು ಹೇಳಿತ್ತು. ಈ ಸಂಬಂಧ 10 ಸಾವಿರ ರೂಪಾಯಿ ದಂಡ ವಿಧಿಸುವ ಅವಕಾಶವಿದೆ. ಹೀಗಾಗಿ ಸಾರ್ವಜನಿಕರು ಕಡೇ ದಿನಾಂಕದೊಳಗೆ ಪ್ಯಾನ್​ ಕಾರ್ಡ್ ಮತ್ತು ಆಧಾರ್ ನಂಬರ್ ಲಿಂಕ್ ಮಾಡಿಕೊಳ್ಳುವುದು ಒಳಿತು.

ಲಿಂಕ್ ಹೇಗೆ?: ಪ್ಯಾನ್​ ಕಾರ್ಡ್ ಮತ್ತು ಆಧಾರ್ ನಂಬರ್ ಲಿಂಕ್ ಮಾಡಲು ಹೀಗೆ ಮಾಡಬೇಕು.

SMS <UIDAIPAN (12 digit Aadhaar number) space (10 digit PAN Number)> at 567678 or 56161.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net