

ನವದೆಹಲಿ: ಮೇರಾ ಘರ್ ಪೂರಾ ಹಿಂದೂಸ್ತಾನ್ (ನನ್ನ ಮನೆ ಇಡೀ ಭಾರತ) ಎಂದು ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಇಂದು ಹೇಳಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ತಮ್ಮ ಅಧಿಕೃತ ಬಂಗಲೆ ಕುರಿತಂತೆ ಸುದ್ದಿಗಾರರ ಜತೆ ಮಾತನಾಡಿದ ರಾಹುಲ್ ಗಾಂಧಿ ಈ ಮಾತನ್ನು ಹೇಳಿದರು.
ಅಸ್ಸಾಂ ಕಾಂಗ್ರೆಸ್ ನಾಯಕರ ಜತೆ ಮಾತುಕತೆ ನಡೆಸಲು ಇಂದು ದೆಹಲಿಯ ಎಐಸಿಸಿ ಹೆಡ್ ಕ್ವಾರ್ಟರ್ಸ್ಗೆ ಬಂದ ರಾಹುಲ್ ಗಾಂಧಿ ಅಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸುತ್ತ ಒಂದಷ್ಟು ಅನಿಸಿಕೆಗಳನ್ನು ಹಂಚಿಕೊಂಡರು.
'ಮೋದಿ ಉಪನಾಮ' ಪ್ರಕರಣದಲ್ಲಿ ಶಿಕ್ಷೆಗೊಳಗಾದ ನಂತರ ವಯನಾಡ್ ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದ ರಾಹುಲ್ ಗಾಂಧಿ, ಲೋಕಸಭೆ ಸಚಿವಾಲಯ ಹೊರಡಿಸಿದ ಹೊಸ ಆದೇಶದ ಪ್ರಕಾರ ತಮ್ಮ ಸ್ಥಾನವನ್ನು ಮರಳಿ ಪಡೆದಿದ್ದಾರೆ.
ಆದರೆ ಈ ಹಿಂದೆ ಅನರ್ಹಗೊಂಡಿದ್ದಾಗ 12 ತುಘಲಕ್ ಲೇನ್ನಲ್ಲಿನ ತಮ್ಮ ಅಧಿಕೃತ ನಿವಾಸವನ್ನು ಅವರು ತೆರವುಗೊಳಿಸಿದ್ದರು. ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ರಾಹುಲ್ ಗಾಂಧಿ, ಇಡೀ ಭಾರತವೇ ನನ್ನ ಮನೆ ಎಂದು ಹೇಳಿದ್ದಾರೆ. -ಏಜೆನ್ಸೀಸ್