

ಬೆಂಗಳೂರು: ಕಾರ್ಪೋರೇಟ್ ಕಂಪನಿಗಳ ಉದ್ಯೋಗ ಎಂದರೆ ಕೈತುಂಬಾ ಸಂಬಳ, ಹೈ-ಫೈ ಜೀವನ ಎಂಬುದು ಬಹುತೇಕ ಎಲ್ಲರಿಗೂ ಗೊತ್ತಿರುವಂಥದ್ದೇ. ಆದರೆ ಇಲ್ಲೊಬ್ಬ ಇಂಜಿನಿಯರ್ ಅಲ್ಲಿನ ಕೆಲಸ ಬಿಟ್ಟು ಕ್ಯಾಬ್ ಚಾಲನೆಗಿಳಿದಿದ್ದಾರೆ. ಮಾತ್ರವಲ್ಲ, ಅಲ್ಲಿಗಿಂತ ಕ್ಯಾಬ್ನಲ್ಲೇ ಜಾಸ್ತಿ ಸಂಪಾದನೆ ಆಗುತ್ತಿದೆಯಂತೆ!
ಹಾಗಂತ ಕ್ಯಾಬ್ ಓಡಿಸುತ್ತಿರುವ ಇಂಜಿನಿಯರ್ ಖುದ್ದಾಗಿ ಹೇಳಿಕೊಂಡಿದ್ದಾರೆ. ಶ್ವೇತಾ ಕುಕ್ರೇಜಾ ಎಂಬ ಎಕ್ಸ್(ಟ್ವಿಟರ್) ಬಳಕೆದಾರರೊಬ್ಬರು ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ನಾನು ನಿನ್ನೆ ಕ್ಯಾಬ್ವೊಂದರಲ್ಲಿದ್ದೆ, ಅದನ್ನು ಚಲಾಯಿಸುತ್ತಿದ್ದವರು ಇಂಜಿನಿಯರ್. ಕ್ವಾಲ್ಕಾಮ್ ಎಂಬ ಕಾರ್ಪೋರೇಟ್ ಕಂಪನಿಯಲ್ಲಿ ಸಿಗುತ್ತಿದ್ದ ಸಂಬಳಕ್ಕಿಂತ ಜಾಸ್ತಿ ಕ್ಯಾಬ್ ಡ್ರೈವಿಂಗ್ನಲ್ಲಿ ಸಂಪಾದಿಸುತ್ತಿರುವುದಾಗಿ ಆ ವ್ಯಕ್ತಿ ಹೇಳಿಕೊಂಡಿದ್ದಾರೆ ಎಂದು ಈಕೆ ಪೋಸ್ಟ್ ಮಾಡಿದ್ದಾರೆ.
ಕ್ಯಾಬ್ ಡ್ರೈವರ್ ಆಗಿರುವುದಕ್ಕಿಂತಲೂ ಇಂಜಿನಿಯರ್ ಆಗಿರುವುದು ಯಾಕೆ ಹೆಚ್ಚು ಗೌರವಯುತ ಎಂದು ನನಗೆ ಅರ್ಥವಾಗುತ್ತಿಲ್ಲ. ಯಾವುದೇ ಉದ್ಯೋಗವೂ ಕೀಳಲ್ಲ, ಅಷ್ಟಕ್ಕೂ ಆತ ಕ್ಯಾಬ್ ಡ್ರೈವರ್ ಆಗಿ ಹೆಚ್ಚು ಸಂಪಾದನೆ ಮಾಡುತ್ತಿದ್ದರೆ ಅದರ ಬಗ್ಗೆ ಹೆಮ್ಮೆ ಪಡಬೇಕು ಎಂದೂ ಈಕೆ ಹೇಳಿಕೊಂಡಿದ್ದಾರೆ.
ಈಕೆಯ ಎಕ್ಸ್ ಪೋಸ್ಟ್ಗೆ ಪ್ರತಿಕ್ರಿಯೆ ನೀಡಿರುವ ಒಬ್ಬರು ನಮ್ಮ ಸೊಸೈಟಿ ಬಳಿಯ ಪಾನಿಪುರಿ ಅಂಗಡಿಯ ವ್ಯಕ್ತಿ 6ನೇ ತರಗತಿಯವರೆಗಷ್ಟೇ ವಿದ್ಯಾಭ್ಯಾಸ ಮಾಡಿದ್ದು, ತಿಂಗಳಿಗೆ 3-4 ಲಕ್ಷ ರೂ. ಸಂಪಾದನೆ ಮಾಡುತ್ತಿದ್ದಾನೆ ಮತ್ತು ಇನ್ನೊಂದು ಅಂಗಡಿ ತೆರೆಯುವುದರಲ್ಲಿದ್ದಾನೆ ಎಂದಿದ್ದಾರೆ.