ಮದುವೆಯಾಗುವ ಕನಸು ಚಿಗುರಿಸಿದ ಟೊಮ್ಯಾಟೋ; ಹುಡುಗಿ ಹುಡುಕಲು ಮುಂದಾದ ಕೃಷಿಕ!

Tomato (1)
Published on

ಚಾಮರಾಜನಗರ: ದುಬಾರಿ ಬೆಲೆಯನ್ನು ಕಂಡಿರುವ ಟೊಮ್ಯಾಟೋ ಇಲ್ಲಿಬ್ಬರು ಕೃಷಿಕ ಸಹೋದರರನ್ನು ಕೋಟ್ಯಧಿಪತಿ ಆಗಿಸಲಿರುವುದಷ್ಟೇ ಅಲ್ಲ, ಮದುವೆಯಾಗುವ ಕನಸನ್ನೂ ಚಿಗುರಿಸಿದೆ. ಭರ್ಜರಿ ಬೆಲೆಯ ಟೊಮ್ಯಾಟೋ ಫಸಲಿನಿಂದಾಗಿ ಈ ಸಹೋದರರ ಪೈಕಿ ಒಬ್ಬರ ಮದುವೆಯ ಕನಸು ಚಿಗುರಿದ್ದು, ಹುಡುಗಿಯನ್ನು ಹುಡುಕಲು ಮುಂದಾಗಿದ್ದಾರೆ.

ಚಾಮರಾಜನಗರ ತಾಲೂಕಿನ ಲಕ್ಷ್ಮೀಪುರದ ರಾಜೇಶ್ ಮತ್ತು ನಾಗೇಶ್ ಸ್ವಂತ 2 ಎಕರೆ ಜತೆಗೆ, 10 ಎಕರೆ ಜಮೀನನ್ನು ಗುತ್ತಿಗೆಗೆ ಪಡೆದುಕೊಂಡು ಸಂಪೂರ್ಣವಾಗಿ ಟೊಮ್ಯಾಟೊ ಬೆಳೆದು ಉತ್ತಮ ಆದಾಯ ಗಳಿಸಿದ್ದಾರೆ.

ಹನ್ನೆರಡು ಎಕರೆ ಜಮೀನಿನಲ್ಲಿ ಸುಮಾರು 80 ಸಾವಿರ ಪೈರನ್ನು ನಾಟಿ ಮಾಡಿ ಈಗಾಗಲೇ 2-3 ಕೊಯ್ಲು ಮಾಡಿ 50-60 ಟನ್ ಟೊಮ್ಯಾಟೊದಿಂದ ಇವರು 40 ಲಕ್ಷ ರೂ. ಸಂಪಾದಿಸಿದ್ದಾರೆ. ಇನ್ನೂ 100-150 ಟನ್ ಟೊಮ್ಯಾಟೊ ಕೊಯ್ಲು ಸಿಗುವ ಸಾಧ್ಯತೆ ಇದ್ದು, ಒಟ್ಟಾರೆ ಸುಮಾರು 2 ಕೋಟಿ ರೂ. ಆದಾಯ ನಿರೀಕ್ಷೆ ಮಾಡಿದ್ದಾರೆ.

ಅದರಲ್ಲೂ ರಾಜೇಶ್​​ಗೆ ಮದುವೆಯಾಗುವ ಕನಸು ಟೊಮ್ಯಾಟೋದಿಂದಾಗಿ ಚಿಗುರಿದೆ. 'ಹುಡುಗಿ ಕಡೆಯವರು ಸರ್ಕಾರಿ ಹಾಗೂ ದೊಡ್ಡ ದೊಡ್ಡ ಕಂಪನಿಗಳ ಉದ್ಯೋಗಿಗಳನ್ನೇ ನೋಡುತ್ತಿರುವುದರಿಂದ ನಾನು ಈ ಹಿಂದೆ ತಿರಸ್ಕರಿಸಲ್ಪಟ್ಟಿದ್ದೆ. ಆದರೆ ಈಗ ಒಳ್ಳೆಯ ಆದಾಯ ಬಂದಿರುವುದರಿಂದ ಮತ್ತೆ ಹುಡುಗಿ ಹುಡುಕಲು ಮುಂದಾಗಿದ್ದೇನೆ. ಒಳ್ಳೇ ಕಾಲ ಬಂದರೆ ರೈತರು ಉಳಿದ ಉದ್ಯೋಗಿಗಳಿಗಿಂತ ಹೆಚ್ಚಿನ ಸಂಪಾದನೆ ಮಾಡಬಲ್ಲರು' ಎಂದಿರುವ ರಾಜೇಶ್, ಹೊಸ ಎಸ್​ಯುವಿ ಖರೀದಿಸಿದ್ದಾಗಿಯೂ ಸುದ್ದಿಗಾರರಿಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net