

ನವದೆಹಲಿ: ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಎದುರಿಸುತ್ತಿರುವ ಬಿಜೆಪಿ ಸಂಸದ, ಕುಸ್ತಿ ಫೆಡರೇಶನ್‌ನ ಅಧ್ಯಕ್ಷ ಬ್ರಿಜ್ ಭೂಷಣ್ ರಾಜೀನಾಮೆ ಮತ್ತು ಬಂಧನಕ್ಕೆ ಆಗ್ರಹಿಸಿ ಕುಸ್ತಿಪಟುಗಳು ಹೋರಾಟ ಮಾಡುತ್ತಿದ್ದಾರೆ. ಈ ಕುರಿತಾಗಿ ಕುಸ್ತಿಪಟುಗಳು ಯಾವುದೇ ಆತುರದ ನಿರ್ಧಾರಗಳನ್ನು ಕೈಗೊಳ್ಳಬೇಡಿ ಎಂದು 1983 ರ ವಿಶ್ವಕಪ್ ವಿಜೇತ ಕ್ರಿಕೆಟ್ ತಂಡದ ಸದಸ್ಯರು ಹೇಳಿದ್ದಾರೆ.
ಈ ಕುರಿತಾಗಿ ಲೆಜೆಂಡರಿ ನಾಯಕ ಕಪಿಲ್ ದೇವ್ ನೇತೃತ್ವದ ಕ್ರಿಕೆಟ್ ತಂಡ ಮತ್ತು ಐಕಾನ್‌ಗಳು ಸೇರಿದಂತೆ ಸುನಿಲ್ ಗವಾಸ್ಕರ್ ಮತ್ತು ಮೊಹಿಂದರ್ ಅಮರನಾಥ್ ಸೋಶಿಯಲ್ ಮೀಡಿಯಾ ಮೂಲಕವಾಗಿ ಕುಸ್ತಿಪಟುಗಳು ತಾಳ್ಮೆ ಕಳೆದುಕೊಳ್ಳಬಾರದು ಮನವಿ ಮಾಡಿದ್ದಾರೆ.
ನಮ್ಮ ಚಾಂಪಿಯನ್ ಕುಸ್ತಿಪಟುಗಳನ್ನು ಅಮಾನುಷವಾಗಿ ನಡೆಸುತ್ತಿರುವ ದೃಶ್ಯಗಳಿಂದ ನಾವು ದುಃಖಿತರಾಗಿದ್ದೇವೆ ಮತ್ತು ವಿಚಲಿತರಾಗಿದ್ದೇವೆ. ಅವರು ಕಷ್ಟಪಟ್ಟು ಗಳಿಸಿದ ಪದಕಗಳನ್ನು ಗಂಗಾ ನದಿಗೆ ಎಸೆಯಲು ಯೋಚಿಸುತ್ತಿದ್ದಾರೆ ಎಂದು ನಾವು ಹೆಚ್ಚು ಕಳವಳಗೊಂಡಿದ್ದೇವೆ ಎಂದು 1983 ರ ವಿಶ್ವಕಪ್ ವಿಜೇತ ತಂಡ ಹೇಳಿಕೆ ಬಿಡುಗಡೆ ಮಾಡಿದೆ.
ಆ ಪದಕಗಳು ವರ್ಷಗಳ ಪ್ರಯತ್ನ, ತ್ಯಾಗ, ನಿರ್ಣಯ, ಮತ್ತು ಧೈರ್ಯವಅನ್ನು ಒಳಗೊಂಡಿವೆ. ಅವುಗಳು ಅವರದ್ದು ಮಾತ್ರವಲ್ಲ ರಾಷ್ಟ್ರದ ಹೆಮ್ಮೆ ಮತ್ತು ಸಂತೋಷ.ಈ ವಿಷಯದಲ್ಲಿ ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳದಂತೆ ನಾವು ಅವರನ್ನು ಒತ್ತಾಯಿಸುತ್ತೇವೆ. ಅವರ ಕುಂದುಕೊರತೆಗಳನ್ನು ಆಲಿಸಿ ಶೀಘ್ರವಾಗಿ ಪರಿಹರಿಸಲಾಗುವುದು ಎಂದು ನಾವು ಭಾವಿಸುತ್ತೇವೆ. ನೆಲದ ಕಾನೂನು ಮೇಲುಗೈ ಸಾಧಿಸಲಿ ಎಂದು ಲೆಜೆಂಡರಿ ನಾಯಕ ಕಪಿಲ್ ದೇವ್ ನೇತೃತ್ವದ ಕ್ರಿಕೆಟ್ ತಂಡ ಮತ್ತು ಸುನಿಲ್ ಗವಾಸ್ಕರ್ ಮತ್ತು ಮೊಹಿಂದರ್ ಅಮರನಾಥ್ ಮನವಿ ಮಾಡಿದ್ದಾರೆ.