

ಆಂಧ್ರಪ್ರದೇಶ: ಸದ್ಯ ಟಾಲಿವುಡ್ನಲ್ಲಿ ಹೊಸ ನಟರಿಗಿಂತ ತೆಲುಗು ಚಿತ್ರರಂಗದ ಹಿರಿಯ ನಟ ಮೆಗಾಸ್ಟಾರ್ ಚಿರಂಜೀವಿ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ವಯಸ್ಸಾದರು ಇಂದಿಗೂ ನಮ್ಮನ್ನು ಮನರಂಜಿಸಲು ಮುಂದಾಗಿರುವ ನಿಮಗೆ ಭಗವಂತ ಮತ್ತಷ್ಟು ಶಕ್ತಿ ತುಂಬಲಿ ಎಂದು ಅಪಾರ ಸಂಖ್ಯೆಯ ಅಭಿಮಾನಿಗಳು ಶುಭಹಾರೈಸಿದ್ದಾರೆ.
ಪ್ರಸ್ತುತ 'ಗೇಮ್ ಚೇಂಜರ್' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಮೆಗಾಪವರ್ ಸ್ಟಾರ್ ರಾಮ್ ಚರಣ್, ಇಂದು ವಿಶ್ವ ಅಪ್ಪಂದಿರ ದಿನದ ಸಂದರ್ಭದಲ್ಲಿ, ಸ್ವತಃ ತಾವೇ ಚಿರಂಜೀವಿ ಅವರ ವಿಶೇಷ ಸಂದರ್ಶನವನ್ನು ಮಾಡಿದ್ದಾರೆ. ಈ ವೇಳೆ ಮೆಗಾಸ್ಟಾರ್ ಅವರು ನಾಲ್ಕು ಹೊಸ ಸಿನಿಮಾಗಳಿಗೆ ಸಹಿ ಮಾಡಿದ್ದಾರೆ ಎಂಬ ವಿಷಯವನ್ನು ಚಿರು ಅಭಿಮಾನಿಗಳ ಮುಂದೆ ಬಹಿರಂಗಪಡಿಸಿದ್ದಾರೆ.
"ಮೆಗಾಸ್ಟಾರ್ ನಾಲ್ಕು ಪ್ರಾಜೆಕ್ಟ್‌ಗಳಿಗೆ ಸಹಿ ಹಾಕಿದ್ದಾರೆ. ಆದ್ರೆ, ನಾನು ಕೇವಲ ಒಂದು ಅಥವಾ ಎರಡು ಚಿತ್ರಗಳನ್ನು ಮಾತ್ರ ಮಾಡುತ್ತಿದ್ದೇನೆ" ಎಂದು ಹೇಳಿದರು. 4 ಹೊಸ ಸಿನಿಮಾಗಳ ಬಗ್ಗೆ ಮಾಹಿತಿ ಬಿಚ್ಚಿಟ್ಟ ರಾಮ್ಚರಣ್, ಅದು ಯಾರ ನಿರ್ದೇಶನ? ಟೈಟಲ್ ಏನು? ಎಂಬ ಯಾವ ವಿಷಯವನ್ನೂ ಸಹ ಬಹಿರಂಗಪಡಿಸಿಲ್ಲ. ಸದ್ಯ ಆ್ಯಕ್ಷನ್ ಜಾನರ್ ಒಳಗೊಂಡ 'ವಿಶ್ವಂಬರ' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಚಿರಂಜೀವಿ, ಮುಂದಿನ ಚಿತ್ರಗಳ ಕುರಿತು ಅಧಿಕೃತ ಘೋಷಣೆ ಯಾವಾಗ ಕೊಡಲಿದ್ದಾರೆ ಎಂಬುದೇ ಅಭಿಮಾನಿಗಳಲ್ಲಿ ಕುತೂಹಲ,(ಏಜೆನ್ಸೀಸ್).