ಪ್ರಧಾನಿ ಹುದ್ದೆ ತ್ಯಾಗ ಮಾಡಿದ ಸೋನಿಯಾ ಗಾಂಧಿ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ; ಯತ್ನಾಳ್ ವಿರುದ್ಧ ಎಂ.ಬಿ.ಪಾಟೀಲ್ ಆಕ್ರೋಶ

M B Patil
Published on

ವಿಜಯಪುರ: ಶಾಸಕ ಬಸನಗೌಡ ಪಾಟಲ್ ಯತ್ನಾಳ್ ಅವರು ಕಳೆದ ಐದು ವರ್ಷಗಳಿಂದ ನಿರಂತರವಾಗಿ ದ್ವೇಷ ಬಿತ್ತುವ ಕೆಲಸ ಮಾಡಿದ್ದಾರೆ. ಅವಮಾನಕರ, ಅಶ್ಲೀಲ ಹೇಳಿಕೆ, ಅನೇಕ ಧರ್ಮ-ಜಾತಿಗಳ ಬಗ್ಗೆ ಪ್ರತಿದಿನ ವಿಷ ಕಾರುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮೀತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಆರೋಪಿಸಿದ್ದಾರೆ.

ಯತ್ನಾಳ್ ಆತ್ಮಾವಲೋಕನ ಮಾಡಿಕೊಳ್ಳಲಿ!

ವಿಜಯಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಎಂ.ಬಿ. ಪಾಟೀಲ್ ಮಾತನಾಡುತ್ತಾ, ರಾಹುಲ್ ಗಾಂಧಿ ಅವರಿಗೆ ಹುಚ್ಚ ಎಂಬ ಪದ ಬಳಸಿದ್ದಾರೆ. ಕಳೆದ ಐದು ವರ್ಷ ಇವರ ನಡುವಳಿಕೆ ಹೇಗಿದೆ, ರಾಜ್ಯದ ಜನತೆ ಇವರನ್ನು ಏನೆಂದು ಕರೆಯುತ್ತಾರೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳುತ್ತಾ ಶಾಸಕ ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿ  ಹುದ್ದೆ ತ್ಯಾಗ ಮಾಡಿದ ಮಹಿಳೆ ಸೋನಿಯಾಗಾಂಧಿ

ಸೋನಿಯಾಗಾಂಧಿ ಅವರಿಗೆ ವಿಷಕನ್ಯೆ, ಪಾಕಿಸ್ತಾನ ಏಜಂಟರು ಎಂದು ಹೇಳಿ ಅವಹೇಳನ ಮಾಡಿದ್ದಾರೆ. ಸೋನಿಯಾಗಾಂಧಿ ಅವರು ರಾಜೀವ್ ಗಾಂಧಿ ಅವರನ್ನು ಮದುವೆಯಾಗಿ ಬಂದು ದೇಶ ಸುತ್ತಿದ್ದಾರೆ. ಎರಡು ಬಾರಿ ಪ್ರಧಾನಮಂತ್ರಿ ಆಗುವ ಅವಕಾಶ ಬಂದಿದ್ದರೂ ತ್ಯಾಗ ಮಾಡಿ, ಮನಮೋಹನ ಸಿಂಗ್ ಅವರನ್ನು ಪ್ರಧಾನಿ ಮಾಡಿದ್ದಾರೆ. ಯಾವುದೇ ಅಧಿಕಾರಕ್ಕೆ ಆಸೆ ಪಡದೆ ಪ್ರಧಾನಮಂತ್ರಿ ಹುದ್ದೆ ತ್ಯಾಗ ಮಾಡಿದ ಮಹಿಳೆಯನ್ನು ಇವರು ಕೇವಲವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಅವತ್ತು ಟೀಕೆ-ಇಂದು ಗೆಳೆತನ!

ಯತ್ನಾಳ್ ಯರ್ಯಾರ ಬಗ್ಗೆ ಮಾತನಾಡಿದ್ದಾರೆ, ಏನೇನು ಮಾತನಾಡಿದ್ದಾರೆ ಎಂಬುದನ್ನು ಕ್ರೋಢೀಕರಿಸಿದರೆ ದೊಡ್ಡ ಗ್ರಂಥವೇ ಆಗುತ್ತದೆ. ಇದೇ ಯತ್ನಾಳ್ ಅವರು ಕಾಂಗ್ರೆಸ್ ಪಕ್ಷದ ನಾಯಕರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ. ಮತ್ತೊಂದೆಡೆ ವಿ.ಸೋಮಣ್ಣ ಅವರಿಗೆ ಬೈದು, ಈಗ ಗೆಳೆತನ ಸಾಧಿಸಿದ್ದಾರೆ. ಯಡಿಯೂರಪ್ಪ ಅವರ ಮಗ ವಿಜಯೇಂದ್ರ ಅವರ ಬಗ್ಗೆ ಮಾತನಾಡಿದ ಕನಿಷ್ಠ ಸಾವಿರ ವಿಡಿಯೋ, ಲೇಖನಗಳು ಇರಬಹುದು. ವರ್ಷಾನುಗಟ್ಟಲೆಯಿಂದ ಅವರನ್ನು ಅಸಹ್ಯವಾಗಿ ಟೀಕೆ ಮಾಡಿದ್ದಾರೆ ಎಂದು ಎಂ.ಬಿ.ಪಾಟೀಲ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net